ಸಾಹಿತಿ, ಚಿಂತಕ, ಅಂಕಣ ಬರೆಹಗಾರ, ಪ್ರಾಧ್ಯಾಪಕ ಡಾ. ಹಾ.ಮಾ.ನಾಯಕ (ಹಾರೋಗದ್ದೆ ಮಾನಪ್ಪ ನಾಯಕ) ಅವರು ಗುಲಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳು. ಎಸ್.ಎಸ್.ಎಲ್.ಸಿ. ಓದುತ್ತಿದ್ದಾಗಲೇ ‘ಬಾಳ್ನೋಟಗಳು’ ಪ್ರಬಂಧ ಸಂಕಲನ ಪ್ರಕಟಣೆ. ಒಟ್ಟು 130ಕ್ಕೂ ಹೆಚ್ಚು ಕೃತಿ ರಚನೆ. ವೈವಿಧ್ಯಮಯ ವಿಷಯಗಳಿಂದ ಕೂಡಿ, ನಾಡಿನ ಪ್ರಖ್ಯಾತ ಪತ್ರಿಕೆಗಳಿಗೆಲ್ಲಕ್ಕೂ ಬರೆದ ಅಂಕಣಬರಹಗಳದ್ದೇ ವಿಶಿಷ್ಟ ರೀತಿ. ಸಾಹಿತ್ಯ ಸಲ್ಲಾಪ, ಸಲ್ಲಾಪ, ಸಂಪುಟ, ಸಂಪದ ಮೊದಲ್ಗೊಂಡು ಸಾರಸ್ವತದವರೆಗೆ ಬರೆದ 19 ಲೇಖನ ಸಂಗ್ರಹಗಳು. ಅಂಕಣ ಬರಹ ಸಂಗ್ರಹ ‘ಸಂಪ್ರತಿಗೆ’ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ. ಹಲವಾರು ವ್ಯಕ್ತಿಚಿತ್ರ, ಸಂಕೀರ್ಣ, ಸೃಜನಶೀಲ ಕೃತಿಗಳ ರಚನೆ. ಅಕ್ಕಮಹಾದೇವಿ, ಆಲೂರು ವೆಂಕಟರಾಯರು, ಭಾರತೀಯ ಸಾಹಿತ್ಯದಲ್ಲಿ ಗಾಂಜಿ, ಕಾವ್ಯ ಕಾರಂಜಿ, ಕಾವ್ಯದೀಪ ಮುಂತಾದ ಕೃತಿಗಳು. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯಿಂದ ಹಿಡಿದು, ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ ಅಕಾಡಮಿ, ನ್ಯಾಷನಲ್ ಬುಕ್ ಟ್ರಸ್ಟ್, ತುಳಸೀ ಸಮ್ಮಾನ್ ಸಮಿತಿ…ಹೀಗೆ ರಾಜ್ಯ ಹೊರರಾಜ್ಯದ ಸಂಘ ಸಂಸ್ಥೆಗಳು, ವಿಶ್ವವಿದ್ಯಾಲಯಗಳೊಡನೆ ಹೊಂದಿದ್ದ ಜವಾಬ್ದಾರಿಯುತ ಸಂಬಂಧಗಳು. ಹಲವಾರು ಬಾರಿ, ವಿದೇಶ ಸಂಚಾರ. ಸಂದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ. ಸ.ಸ. ಮಾಳವಾಡ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ವರ್ಧಮಾನ ಪ್ರಶಸ್ತಿ, ಮೈಸೂರು ವಿಶ್ವವಿದ್ಯಾಲಯದ ಸುವರ್ಣಮಹೋತ್ಸವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಜಾನಪದ ಮತ್ತು ಯಕ್ಷಗಾನ ಅಕಾಡಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಮುಂತಾದುವು. ಪ್ರಧಾನ ಗುರುದತ್ತ ಅವರು ಡಾ. ಹಾ.ಮಾ.ನಾಯಕ ಅವರ ಜೀವನ ಚಿತ್ರಣವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
©2024 Book Brahma Private Limited.