ಬೊಳುವಾರು ಮಹಮದ್ ಕುಂಞ

Author : ಟಿ.ಪಿ. ಅಶೋಕ

Pages 108

₹ 80.00

Buy Now


Year of Publication: 2017
Published by: ನವಕರ್ನಾಟಕ ಪ್ರಕಾಶನ
Address: ಎಂಬಸ್ಸಿ ಸೆಂಟರ್‍ 11 ಕ್ರೆಸೆಂಟ್ ರಸ್ತೆ, ಕುಮಾರ ಪಾರ್ಕ್ ಪೂರ್ವ, ಶೇಷಾದ್ರಿಪುರಂ, ಬೆಂಗಳೂರು, 560001
Phone: 080-30578020

Synopsys

ನವಕರ್ನಾಟಕ ಸಾಹಿತ್ಯ ಸಂಪದ ಪುಸ್ತಕ ಮಾಲೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರನ್ನು ಪರಿಚಯಿಸುವ ಪ್ರಯತ್ನವನ್ನು ಮಾಡುತ್ತಿದ್ದು. ಡಾ. ಪ್ರಧಾನ್ ಗುರುದತ್ತ ಈ ಸರಣಿಯ ಸಂಪಾದಕರಾಗಿದ್ದಾರೆ. ಈ ಬಾರಿ ಬೊಳುವಾರು ಮಹಮದ್ ಕುಂಞ ಅವರ ಕುರಿತಂತೆ ಪ್ರೊ. ಟಿ.ಪಿ. ಅಶೋಕ್ ಅವರು ಬರೆದಿದ್ದಾರೆ. ಬೊಳುವಾರು ಕನ್ನಡ ಬರಹಗಾರರಾಗಿ ಹಲವು ವಿಷಯಗಳಲ್ಲಿ ಪ್ರಥಮರು. ಕೇಂದ್ರ ಸಾಹಿತ್ಯ ಅಕಾಡಮಿಯ ಇತಿಹಾಸದಲ್ಲಿ ತಮ್ಮ ಸೃಜನಶೀಲ ಗದ್ಯ ಸಾಹಿತ್ಯ ಕೃತಿಗಳಿಗಾಗಿ ಎರಡು ಬಾರಿ ಪ್ರಶಸ್ತಿ ಪಡೆದಿರುವ ಸಾಹಿತಿ ಇವರು. ಕನ್ನಡದ ಮಕ್ಕಳ ಸಾಹಿತ್ಯಕ್ಕೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ತಂದುಕೊಟ್ಟ ಮೊದಲಿಗರೂ ಇವರೇ. ಮಾತ್ರವಲ್ಲ, ಕನ್ನಡದ ಸೃಜನಶೀಲ ಗದ್ಯ ಸಾಹಿತ್ಯಕ್ಕೆ ಮುಸ್ಲಿಮ್ ಬದುಕನ್ನು ಪರಿಚಯಿಸಿದ ಮೊತ್ತ ಮೊದಲಿಗರೂ ಇವರೇ. ಬೊಳುವಾರು ವ್ಯಕ್ತಿತ್ವವನ್ನು ಅಶೋಕ್ ಅವರು ಬೇರೆ ಬೇರೆ ನೆಲೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಬೊಳುವಾರು ಅವರ ಬದುಕನ್ನು ಇಟ್ಟು ಗ್ರಹಿಸಿರುವ ಕ್ರಮ ಒಂದಾದರೆ, ಬೊಳುವಾರು ಕೃತಿಗಳ ಮೂಲಕ ಬೊಳುವಾರು ವ್ಯಕ್ತಿತ್ವವನ್ನು ಗ್ರಹಿಸಿರುವ ಕ್ರಮ ಇನ್ನೊಂದು. ಬೊಳುವಾರು ಅವರ ಸಾಹಿತ್ಯವನ್ನು ಇನ್ನಷ್ಟು ಹತ್ತಿರವಾಗಿಸುವಲ್ಲಿ, ಈ ಕೃತಿ ಓದುಗರಿಗೆ ನೆರವಾಗುತ್ತದೆ.

About the Author

ಟಿ.ಪಿ. ಅಶೋಕ
(26 August 1955)

ಟಿ. ಪಿ. ಅಶೋಕ ಹುಟ್ಟಿದ್ದು 26-08-1955ರಲ್ಲಿ. ತಮ್ಮ ಸಾಹಿತ್ಯ ವಿಮರ್ಶೆ, ಅನುವಾದ, ಸಂಪಾದನೆ ಮತ್ತು ಅಂಕಣ ಬರಹಳಿಂದ ಟಿ. ಪಿ. ಅಶೋಕ ಪ್ರಸಿದ್ಧರಾಗಿದ್ದಾರೆ. ಸಾಗರದ ಲಾಲ್ ಬಹುದ್ದೂರ್ ಕಾಲೇಜಿನಲ್ಲಿ ಪ್ರಾಧ್ಯಾಪಕರು ಮತ್ತು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಕಾರನಿರ್ವಹಿಸಿ ನಿವೃತ್ತರಾಗಿದ್ದಾರೆ. ನವ್ಯ ಕಾದಂಬರಿಗಳ ಪ್ರೇರಣೆಗಳು, ಹೊಸ ಹೆಜ್ಜೆ ಹೊಸ ಹಾದಿ, ಕಾರಂತರ ಕಾದಂಬರಿಗಳಲ್ಲಿ ಗಂಡು ಹೆಣ್ಣು, ಸಾಹಿತ್ಯ ಸಂಪರ್ಕ, ವಾಸ್ತವತಾವಾದ, ಸಾಹಿತ್ಯ ಸಂದರ್ಭ, ಶಿವರಾಮಕಾರಂತ: ಎರಡು ಅಧ್ಯಯನಗಳು, ಪುಸ್ತಕ ಪ್ರೀತಿ, ವೈದೇಹಿ ಅವರ ಕಥೆಗಳು, ಯು. ಆರ್. ಅನಂತಮೂರ್ತಿ: ಒಂದು ಅಧ್ಯಯನ, ತೇಜಸ್ವಿ ಕಥನ, ಕುವೆಂಪು ಕಾದಂಬರಿ: ಎರಡು ...

READ MORE

Reviews

ಬೊಳುವಾರು ಮಹಮದ್‌ ಕೃತಿಯ ಪುಸ್ತಕ ವಿಮರ್ಶೆ- ಹೊಸ ಮನುಷ್ಯ

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಬಹಳ ಸಾಹಿತಿಗಳನ್ನು ಕುರಿತ ಪುಸ್ತಕ ಮಾಲೆಯಲ್ಲಿ (ಪ್ರಧಾನ ಸಂಪಾದಕರ- ಪ್ರಧಾನ ಗುರುತು) ಪ್ರಕಟವಾಗಿರುವ ಕತೆಗಾರ-ಕಾದಂಬರಿಕಾರ ಬೊಳುವಾರು ಸಂಕ್ಷಿಪ್ತ ಇತಿಹಾಸವೂ, ಮಹಮದ್ ಕುಂಞಯವರ ಬದುಕು ಬರಹಗಳನ್ನು ಹಿರಿಯ ವಿಮರ್ಶಕರಾದ ಟಿಪಿ ಅಶೋಕ ಅವರು ಸಮಗ್ರವಾಗಿ ಅವಲೋಕಿಸುವ ಉದ್ದೇಶ ಹೊಂದಿದ್ದಾರೆ. ಬೊಳುವಾರರ ಕೌಟುಂಬಿಕ ಪರಿಸರ ಧಾರ್ಮಿಕ-ಸಾಮಾಜಿಕ ಹಿನ್ನೆಲೆಗಳನ್ನು ಆತ್ಮಚರಿತ್ರೆಕಾರನಂತೆ ಹುಡುಕಿ-ಹುಡುಕಿ ಅಶೋಕರು ಬರೆದಿದ್ದಾರೆ. ಗುಲ್ಬರ್ಗದಲ್ಲಿ ಕೆಲಸದಲ್ಲಿದ್ದ ಬೊಳುವಾರರು ತೀರಿಹೋದ ತಂದೆಯ ಶವಸಂಸ್ಕಾರಕ್ಕೆ ಪುತ್ತೂರಿಗೆ ಏಳುನೂರು ಕಿಲೋಮೀಟರ್ ಸ್ಕೂಟರಿನಲ್ಲಿ ಬಂದರೂ ತಂದೆಯ ಮುಖವನ್ನು ನೋಡದೇ ಹೋದ ಘಟನೆಯಿಂದ ಹಿಡಿದು-ಮುಸ್ಲಿಮರ ಕಂದಾಚಾರವನ್ನು ಕುರಿತು ಬರೆದಿದ್ದಕ್ಕಾಗಿ ಬೊಳುವಾರರ ಮೇಲೆ ಕಲ್ಲೆಸೆಯಬೇಕು ಎಂದುಕೊಂಡಿದ್ದ ಅವರದೇ ಊರಿನ ಹಿರೀಕರೊಬ್ಬರು ನಮ್ಮ ಸಮುದಾಯದಲ್ಲಿ ಓದುಬರೆಹ ಕಲಿತು ದೇಶವಿದೇಶಗಳಿಗೆ ಓಡಾಡುತ್ತಿರುವ ಹೆಣ್ಣುಮಕ್ಕಳು ಯಾರಾದರೂ ಇದ್ದರೆ ಅದಕ್ಕೆ ಅವರ ಬರೆಹಗಳೇ ಕಾರಣವೆಂದು ಸಭೆಯೊಂದರಲ್ಲಿ ಹೇಳಿದ್ದನ್ನು ದಾಖಲಿಸುವಂತೆಯೇ ಅಶೋಕರು ಬೊಳುವಾರರ ಎಲ್ಲಕತೆ- ಕಾದಂಬರಿ-ನಾಟಕ-ಮಕ್ಕಳ ಸಾಹಿತ್ಯಗಳ ವಿವಿಧ ಆಯಾಮಗಳನ್ನು ಕುರಿತು ವಿಸ್ತ್ರತವಾಗಿ ಬರೆದಿದ್ದಾರೆ. ಹಾಗೆ ನೋಡಿದರೆ ಪುಸ್ತಕದಲ್ಲಿ, ವೃತ್ತಿ-ಪ್ರವೃತ್ತಿಯಿಂದ ಸಾಹಿತ್ಯಪ್ರೇಮಿಯಾಗಿರುವ ಅಶೋಕರನ್ನು ಅವರ ತಾಯಿ ಕಪಿಲಾಬಾಯಿಯವರು ಬೊಳುವಾರರನ್ನು ಓದುವಂತೆ ಸೂಚಿಸುವುದು ಬಂಡಾಯಗಾರನಾದ ಬೊಳುವಾರರ ವೈಚಾರಿಕ-ಸಾಂಸಾರಿಕ ನಂಬಿಕೆಗಳಿಗೆ ಸವಾಲೆಸೆಯುವುದು- ಇವೇ ಮೊದಲಾದ ಕುತೂಹಲಕರ ವಿವರಗಳಿದ್ದು ಅವು ಸಾಹಿತ್ಯ-ಸಾಮಾಜಿಕ ಕ್ರಾಂತಿಗಳ ಅನೂಹ್ಯ ಪರಿಣಾಮಗಳನ್ನು ತೋರಿಸುವಂತಿವೆ. 

ಬೊಳುವಾರರ ಎಲ್ಲ ಕತೆ-ಕಾದಂಬರಿಗಳ ಕೇಂದ್ರವಾದ ಮುತ್ತುಪ್ಪಾಡಿ ಒಂದು ನಿರ್ದಿಷ್ಟ ಸಾಮಾಜಿಕ-ಧಾರ್ಮಿಕ ಆವರಣವಾಗಿರದೆ ಅದು ಭಾರತೀಯ ಸಮಾಜವು ಎದುರಿಸುತ್ತಿರುವ ಆಧುನಿಕತೆ, ಸಂಪ್ರದಾಯ, ಧಾರ್ಮಿಕತೆ, ಕೋಮುವಾದ ಹಲವಾರು ಪಲ್ಲಟಗಳು ಸಂಭವಿಸುತ್ತಿರುವ ಕುದಿಬಿಂದುವಿನಂತಿದೆ. ಏಕಕಾಲಕ್ಕೆ ಅದು ಸಂಸ್ಕೃತಿ ವಿಶಿಷ್ಟವೂ-ಅಖಿಲ ಭಾರತೀಯವೂ ಆಗಿದೆಯೆಂದು ಅಶೋಕರು ವ್ಯಾಖ್ಯಾನಿಸಿದ್ದಾರೆ. ಸಾವಿರಾರು ಪುಟಗಳಲ್ಲಿ ಚಿತ್ರಿತವಾಗಿರುವ ಮುತ್ತುಪ್ಪಾಡಿಯನ್ನು ಕುರಿತು ಬೊಳುವಾರರು ಬರೆಯುವಾಗ ಅವರು ಪಾವಿತ್ರನಾಶ-ಸಾಂಸ್ಥಿಕ ಧರ್ಮಗಳ ವಿರುದ್ದದ ನೆಲೆಯಿಂದ ಹೊರಟು ಸುಧಾರಣಾವಾದಿ ನೆಲೆಗೆ ಹೇಗೆ ಬಂದು ನಿಂತಿದ್ದಾರೆ ಎಂಬುದನ್ನು ವಿವರವಾಗಿ ವಿಶ್ಲೇಷಿಸಿದ್ದಾರೆ. ಧಾರ್ಮಿಕ ಶೋಷಣೆಯ ಕೇಂದ್ರಗಳಾಗಿದ್ದ ಮಸೀದಿ-ಚರ್ಚುಗಳು ಜನಸಮುದಾಯದ ಸಾಮೂಹಿಕ ಅಭಿವ್ಯಕ್ತಿಯ ರೂಪಕವಾಗಿ ಬೊಳುವಾರರಿಗೆ ಕಾಣಿಸುತ್ತಿವೆ ಎಂಬುದನ್ನು ಅವರ ಜೆಹಾದ್ ಕಾದಂಬರಿಯಿಂದ ಹಿಡಿದು ಇತ್ತೀಚಿನ ಓದಿರಿ ಮತ್ತು ಸ್ವಾತಂತ್ರ್ಯದ ಓಟ ಕೃತಿಗಳ ಕೃತಿನಿಷ್ಠ ಓದಿನ ಮೂಲಕ ಕಾಣಿಸುತ್ತಾರೆ.

ಬಂಡಾಯದ ಹಿನ್ನೆಲೆಯ ಬೊಳುವಾರರ ಬಗ್ಗೆ ಬರೆಯುವಾಗ ಬಂಡಾಯವೆಂಬ ಪದವನ್ನು ಒಂದಕ್ಕಿಂತ ಹೆಚ್ಚು ಬಾರಿ ಬಳಸದೆ, ಮುಸ್ಲಿಂಸಾಹಿತ್ಯವೆಂಬ ಸಿದ್ದಚೌಕಟ್ಟಿನಲ್ಲಿಟ್ಟು ನೋಡದೇ, ಅವರನ್ನು ಕನ್ನಡ ಲೇಖಕರೆಂದು ಗುರುತಿಸಿ ಅವರ ಕಥಾಭಿತ್ತಿಯನ್ನು ಕಾರಂತರ ಜೊತೆ, ಅಲ್ಲಲ್ಲಿ ಕುವೆಂಪು ಕಾದಂಬರಿಗಳ ಜೊತೆಯಿಟ್ಟು ಕಥಾಸಾಧ್ಯತೆಗಳಿಗೆ ಇರಬಹುದಾದ ವಿಸ್ತಾರವಾದ ನೆಲೆಯನ್ನು ಪರೀಕ್ಷಿಸುತ್ತಾರೆ. ಎಷ್ಟೇ ಸಂಕೀರ್ಣವಾಗಿದ್ದರೂ ಕೇವಲ ಸಾಮಾಜಿಕತೆಯೇ ಸಾಹಿತ್ಯಕೃತಿಗಳ ಸಾರ್ವಕಾಲಿಕತೆಗೆ ಮಾನದಂಡವಾಗುವುದೇ ಎಂಬುದು ಚರ್ಚಾರ್ಹವಾಗಿದೆ.

(ಕೃಪೆ: ಪುಸ್ತಕಾವಲೋಕನ, ಬರಹ: ಎಸ್, ಸಿರಾಜ್ ಅಹಮದ್)

Related Books