ನಾಟಕವನ್ನು ಕುರಿತ ಎರಡು ವಿಷಯಗಳನ್ನು ಚರ್ಚಿಸುವ ಮೂಲಕ ಸಿ.ಎಂ.ಗೋವಿಂದರೆಡ್ಡಿಯವರ ನಾಟಕವನ್ನು ಚರ್ಚಿಸಲು ಹಿನ್ನೆಲೆಯನ್ನು ಸೃಷ್ಟಿಸಿಕೊಳ್ಳಬಹುದು. ಮೊದಲನೆಯ ಮಾತು ನಾಟಕ ಕಲೆಗೆ ಸಂಬಂಧಿಸಿದ್ದು. ಸೃಜನಶೀಲವಾದ ಅಭಿವ್ಯಕ್ತಿ ಪ್ರಕಾರಗಳಲ್ಲಿ ನಾಟಕ ರಚನೆ ಅತ್ಯಂತ ಸಂಕೀರ್ಣವಾದ ಪ್ರಕಾರವಾಗಿದೆ. ಎಲ್ಲಾ ಲೇಖಕರಿಗೂ ನಾಟಕ ಪ್ರಕಾರದ ಮೂಲಕ ತಮ್ಮ ಸೃಜನಶೀಲತೆಯನ್ನು ಪರೀಕ್ಷಿಸುವ ಅಂತರ್ಗತ ಆಸೆ ಇದ್ದೇ ಇರುತ್ತದೆ. ಕಲೆಗಳ ಇತಿಹಾಸದ ಪ್ರಕಾರ ನಾಟಕ ಮಾನವಲೋಕದ ಅತ್ಯಂತ ಪ್ರಾಚೀನವಾದ ಪ್ರದರ್ಶನ ಕಲೆಯಾಗಿದೆ. ಗ್ರೀಕ್ ಸಾಹಿತ್ಯ ಕೃತಿಗಳು ಮತ್ತು ಭಾರತೀಯ ಸಾಹಿತ್ಯ ಮೀಮಾಂಸೆಯು ಚರ್ಚಿಸುವ ಆಕರ ಕೃತಿಗಳು ನಾಟಕಗಳೇ ಆಗಿರುವುದನ್ನು ನೆನಪಿಗೆ ತಂದುಕೊಂಡರೆ ನಾಟಕ ಎಂಬ ಆಟದ ಹಿಂದಣ ಹೆಜ್ಜೆ ನಮಗೆ ಅರಿವಾಗುವುದು. ನಾಟಕ ಎಂಬುದು ಪೂರ್ಣಪ್ರಮಾಣದ ಪ್ರದರ್ಶನ ಕಲೆಯಾಗಿರುವಂತೆ, ನಾಟಕೀಯತೆ ಎಂಬ ಅಂಶ ಎಲ್ಲ ಬಗೆಯ ಸಾಹಿತ್ಯ ನಿರೂಪಣೆಯ ಲಕ್ಷಣವಾಗಿಯೂ ಗುರುತಿಸುವುದು ರೂಢಿಯಲ್ಲಿದೆ. ನಾಟಕ ರಚನೆಯ ಸೂಕ್ಷ್ಮತೆ ಹಾಗೂ ಸಂಕೀರ್ಣತೆಯೂ ನಾಟಕ ಪ್ರಕಾರ ಕಾಲ ದೇಶ ಮತ್ತು ಅನುಭವಗಳನ್ನು ನಿರೂಪಿಸುವ ವಿಧಾನದಿಂದಾಗಿ ರೂಪ ಪಡೆಯುವ ವಿದ್ಯಮಾನವಾಗಿದೆ. ನಾಟಕ ನಿರೂಪಣೆಗಳಿಗೆ ಪ್ರದರ್ಶನವೆಂಬ ಮೂರನೆಯ ಆಯಾಮ ಇರುವುದರಿಂದ ಇದು ಸಾಹಿತ್ಯ ಕೃತಿಗಳಿಗಿಂತ ಭಿನ್ನವಾಗಿ ಸಹೃದಯರೊಡನೆ ಸಂವಾದ ಬೆಳೆಸುತ್ತದೆ. ನಾಟಕ ಪಠ್ಯವು ಸಹೃದಯನ ಮನೋರಂಗದಲ್ಲಿ ಪ್ರತಿಫಲನಗೊಂಡರೆ, ರಂಗಪಠ್ಯದ ಪ್ರದರ್ಶನ ಪ್ರೇಕ್ಷಕರ ಕಣ್ಮುಂದೆ ರಂಗದ ಮೇಲೆ ನಟರ ಮೂಲಕ ಅಭಿನಯಗೊಳ್ಳುತ್ತದೆ. (ಕೃತಿಯ ಭಾಗದಿಂದ)
ಮಕ್ಕಳ ಸಾಹಿತ್ಯದಲ್ಲಿ ಕಳೆದ ಎರಡು ದಶಕಗಳಿಂದ ಕ್ರಿಯಾಶೀಲರಾಗಿರುವ ಗೋವಿಂದರೆಡ್ಡಿ ಅವರು ರಚಿಸಿರುವ ‘ಸಿರಿಧಾನ್ಯ’ ನಾಟಕ ಈಗಾಗಲೇ ಕನ್ನಡದ ಜನ ಮಾನಸದಲ್ಲಿ ನೆಲೆ ನಿಂತ ಕಥಾವಸ್ತುವಾಗಿದೆ. ಕನಕದಾಸರ ಬಹು ಪ್ರಸಿದ್ಧ ಕೃತಿಯಾದ ‘ರಾಮಧಾನ್ಯ ಚರಿತೆ’ಯನ್ನು ವರ್ತಮಾನಗೊಳಿಸುವ ಪ್ರಯತ್ನವಾಗಿದೆ. ಇಂತಹ ಸುಪರಿಚಿತ ಕಥೆಯನ್ನು ಆಧರಿಸಿ ನಾಟಕ ಬರೆಯುವಲ್ಲಿ ಗೋವಿಂದರೆಡ್ಡಿ ಅವರು ಕ್ಯಾಲಿಕಿಲೇಟೆಡ್ ರಿಸ್ಕ್ ತೆಗೆದುಕೊಂಡು ಈ ನಾಟಕವನ್ನು ರಚಿಸಿದ್ದಾರೆ. ಪುರಾಣದ ಕಥೆಯನ್ನು ವರ್ತಮಾನಗೊಳಿಸುವ ಮಾದರಿ ಕನ್ನಡ ಸಂವೇದನೆಯಲ್ಲಿ ಅತ್ಯಂತ ಹಳೆಯ ಹಾಗೂ ಪ್ರಚಲಿತವಾಗಿರುವ ವಿಧಾನವಾಗಿದೆ. ಭಾರತೀಯ ಸಮಾಜದಲ್ಲಿ ಬೇರು ಬಿಟ್ಟಿರುವ ಜಾತಿಯಂತಹ ಅಮಾನವೀಯವೂ ಅಸಹಜವೂ ಆದ ಕಲ್ಪಿತ ಸಾಮಾಜಿಕ ಮೌಲ್ಯವ್ಯವಸ್ಥೆ ವ್ಯಕ್ತಿಗೆ ಹುಟ್ಟಿನಿಂದ ದಕ್ಕುವ ಸ್ವಭಾವಸಹಜ ಪ್ರತಿಭೆ ಮತ್ತು ಸಾಮರ್ಥ್ಯಗಳನ್ನು ಕುಂದುಗೊಳಿಸುವುದಲ್ಲದೆ ಹತ್ತಿಕ್ಕುವ ಹುನ್ನಾರಗಳನ್ನು ಜಾರಿ ಮಾಡುತ್ತಲೇ ಬಂದಿದೆ. ಕನ್ನಡದ ಎಲ್ಲಾ ಕಾಲದ ಸೃಜನಶೀಲ ಲೇಖಕರು ಈ ವಿದ್ಯಮಾನವನ್ನು ಗುರುತಿಸುವ ಕೆಲಸ ಮಾಡುತ್ತಲೇ ಈ ಹುಳುಕನ್ನು ನಿರ್ನಾಮ ಮಾಡುವ ಉಪಾಯಗಳನ್ನು ತಮ್ಮ ಕೃತಿಗಳಲ್ಲಿ ಶೋಧಿಸುತ್ತಾ ಬಂದಿದ್ದಾರೆ. ಗೋವಿಂದರೆಡ್ಡಿ ಇಪ್ಪತ್ತೊಂದನೆಯ ಶತಮಾನದಲ್ಲೂ ಆ ವಿದ್ಯಮಾನದ ಹೊಣೆಯನ್ನು ಮುಂದುವರೆಸಿದ್ದಾರೆ. ಸಿ.ಎಂ.ಗೋವಿಂದರೆಡ್ಡಿಯವರ ಈ ಧೈರ್ಯವನ್ನು ಅಭಿನಂದಿಸುತ್ತೇನೆ.
ನಮ್ಮ ಶಿಕ್ಷಣ ವ್ಯವಸ್ಥೆ ಮಾರುಕಟ್ಟೆ ಮತ್ತು ಕಾರ್ಪೋರೇಟ್ ಉದ್ಯಮಪತಿಗಳ ನಿಯಂತ್ರಣದಲ್ಲಿ ಸಿಕ್ಕಿ ಸಾಹಿತ್ಯ ಸಂಸ್ಕೃತಿಗಳಿಂದ ಪಡೆಯುತ್ತಿದ್ದ ವಿವೇಕ ಜ್ಞಾನಗಳಿಂದ ದೂರ ಸರಿಯುತ್ತಿರುವುದು ಭವಿಷ್ಯತ್ತಿನಲ್ಲಿ ಸಂಭವಿಸುವ ಸಾಂಸ್ಕೃತಿಕ ದುರಂತದ ಮುನ್ಸೂಚನೆಯಾಗಿದೆ. ಇಂತಹ ಇಕ್ಕಟ್ಟಿನಲ್ಲಿ ಸಾಹಿತ್ಯ ಮತ್ತು ರಂಗಭೂಮಿಯಂತಹ ಸಂಸ್ಥೆಗಳು ಈ ಬಿರುಕನ್ನು ತುಂಬುವ ಕೆಲಸವನ್ನು ಮಾಡಬೇಕು. ಗೋವಿಂದರೆಡ್ಡಿಯವರ ಈ ಬರಹಗಳ ಹಿಂದೆ ಈ ದೂರಗಾಮಿ ದೃಷ್ಟಿ ಕೆಲಸ ಮಾಡುತ್ತಿದೆ ಎನ್ನುವುದು ಸಮಾಧಾನದ ಸಂಗತಿ.
©2024 Book Brahma Private Limited.