ಡಾ. ಶಿವರಾಮ ಕಾರಂತ ಅವರು ಮಕ್ಕಳಿಗಾಗಿ ಬರೆದ ನಾಟಕ-ಸೂರ್ಯ,ಚಂದ್ರ. ಮಕ್ಕಳ ಸಾಹಿತ್ಯ ರಚನೆ ಕಷ್ಟ. ಮಕ್ಕಳ ಮನೋವಿಜ್ಞಾನವನ್ನು ಅರ್ಥೈಸಿಕೊಂಡು ಅವರ ಮನೋವಿಕಾಸಕ್ಕೆ ಪೂರಕವಾಗಿ ಸಾಹಿತ್ಯ ರಚಿಸಬೇಕಾಗುತ್ತದೆ. ಮಕ್ಕಳ ಕಲ್ಪನಾ ಲೋಕದಲ್ಲಿ ಸೂರ್ಯ, ಚಂದ್ರರು ಜೀವಂತ ಪಾತ್ರಗಳಾಗಿ, ಕುತೂಹಲದ ಹಾಗೂ ಅಚ್ಚರಿಯ ವಿದ್ಯಮಾನಗಳಾಗಿ ಕಾಣಿಸುತ್ತಾರೆ. ಸೂರ್ಯ,ಚಂದ್ರರ ಸ್ವರೂಪ, ಅವರ ದೈನಂದಿನ ಕೆಲಸ ಹೀಗೆ ವೈವಿಧ್ಯಮಯವಾಗಿ ಪ್ರಶ್ನೆಗಳು ಅವರ ಮನದಲ್ಲಿ ಉದ್ಭವಿಸುತ್ತವೆ. ಇಂತಹ ಕುತೂಹಲಕಾರಿ ಸನ್ನಿವೇಶಗಳನ್ನು ಹೆಣೆದ ನಾಟಕವಿದು.
ಆನಂದ ಎಂಬ ಬಾಲಕ ಜಿಂಕೆ ಮರಿ, ಮೊಲ, ನವಿಲು ಹೀಗೆ ಪ್ರಾಣಿಗಳೊಂದಿಗೆ ಸ್ನೇಹ ಮಾಡಿ ಆಟವಾಡಿಕೊಂಡಿರುತ್ತಿದ್ದ. ಆದರೆ, ಗೂಬೆ, ನರಿ, ಹುಲಿ ಆನಂದನ ಗೆಳೆಯರನ್ನು ರಹಸ್ಯವಾಗಿ ಹಿಡಿದು ತಿನ್ನುತ್ತಿದ್ದವು. ಆನಂದನಿಗೆ ಆಟವಾಡಲು ಗೆಳೆಯರೇ ಇಲ್ಲದಂತಾಯಿತು. ಇಂತಹ ಸನ್ನಿವೇಶದಲ್ಲಿ ದೇವರು ಪ್ರತ್ಯಕ್ಷವಾಗಿ ಸೂರ್ಯ-ಚಂದ್ರರನ್ನು ಕಳುಹಿಸುವುದಾಗಿ ಭರವಸೆ ನೀಡುತ್ತಾನೆ. ಆದರೆ, ಗೂಬೆ, ನರಿ, ಹುಲಿ ಇವು ಸೂರ್ಯ-ಚಂದ್ರರು ಇವನೊಡನೆ ಆಟವಾಡದಂತೆ ಅಡ್ಡಿಪಡಿಸುತ್ತವೆ. ಸೂರ್ಯ ಉರಿಯುತ್ತಾ ಬರುವಾಗ ಆನಂದನ ಮೈ ಉರಿಯುತ್ತದೆ, ಚಂದ್ರ ಕಪ್ಪಗಾಗಿ ಬಂದಾಗ ಆತನನ್ನು ನೋಡಲು ಆನಂದನಿಗೆ ಇಷ್ಟವಿರುವುದಿಲ್ಲ. ಅಳುತ್ತಾನೆ. ದೇವರು ಮತ್ತೇ ಪ್ರತ್ಯಕ್ಷವಾಗುತ್ತಾನೆ. ವಿಚಾರಿಸಿದಾಗ ಗೂಬೆ, ನರಿ, ಹುಲಿಯ ಮಾತು ಕೇಳಿದ್ದಾಗಿ ಸೂರ್ಯ-ಚಂದ್ರರು ಹೇಳುತ್ತಾರೆ. ಸಿಟ್ಟಿಗೆದ್ದ ದೇವರು ಸೂರ್ಯನಿಗೆ ‘ಉರುಯುತ್ತಿರು’ ಎಂದು ಹಾಗೂ ಚಂದ್ರನಿಗೆ ‘ಕರ್ರಗೆ ಇರು’ ಎಂದು ಶಾಪ ಕೊಡುತ್ತಾನೆ. ಯುಗಗಳು ಕಳೆದ ನಂತರ ದೇವರು ತನ್ನ ಶಾಪವನ್ನು ಹಿಂಪಡೆಯುತ್ತಾನೆ. ಆಗ ಸೂರ್ಯ ಮತ್ತು ಚಂದ್ರರು ಆಕಾಶದಲ್ಲಿ ಬೆಳಗುತ್ತಾರೆ. ಮಕ್ಕಳಿಗೆ ಇಷ್ಟವಾಗುತ್ತಾರೆ. ಗೂಬೆ, ನರಿ, ಹುಲಿ ಇವುಗಳಿಗೆ ಹಗಲು ಸಹಿಸದೇ ಇರಲಿ ; ಅವರು ಕಳ್ಳರಿದ್ದಂತೆ ಎಂದು ದೇವರು ಶಾಪ ಕೊಡುತ್ತಾನೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಶಿವರಾಮ ಕಾರಂತರು ಈ ಕೃತಿಯನ್ನು ಮೊದಲ ಬಾರಿಗೆ ಪ್ರಕಟಿಸಿದ್ದರು.
©2024 Book Brahma Private Limited.