ತೆಲುಗಿನ ಫೆಮಿನಿಸ್ಟ್ ಸ್ಟಡಿ ಸರ್ಕಲ್ ಸ್ತ್ರೀವಾದವನ್ನು ಪರಿಚಯಿಸುವ ಉದ್ದೇಶದಿಂದ ರಚಿಸಿದ ಕೃತಿಯನ್ನು ಕನ್ನಡಕ್ಕೆ ಬಿ. ಸುಜ್ಞಾನಮೂರ್ತಿ ಅವರು ’ನಮಗೆ ಗೋಡೆಗಳಿಲ್ಲ’ ಹೆಸರಿನಲ್ಲಿ ಅನುವಾದಿಸಿದ್ದಾರೆ. ಒಟ್ಟು ನಾಲ್ಕು ಪ್ರಬಂಧಗಳಿರುವ ಸಂಕಲನ ಇದು.
ಮೊದಲನೆಯ ಪ್ರಬಂಧ ವಸಂತ ಕಣ್ಣಭಿರಾನ್ ಅವರಿಗೆ ಸೇರಿದ್ದು. ’ಸ್ತ್ರೀವಾದ ಅಂದರೆ ಏನು?” ಎಂಬುದು ಅದರ ಶೀರ್ಷಿಕೆ. 1988ರಲ್ಲಿ ಕಣ್ಣಭಿರಾನ್ ನೀಡಿದ ಉಪನ್ಯಾಸವೊಂದನ್ನು ಪ್ರಬಂಧರೂಪಕ್ಕೆ ತರಲಾಗಿದೆ. ಸ್ತ್ರೀ ವಾದದ ವ್ಯಾಖ್ಯಾನ, ಲಿಂಗಭೇದ, ಲೈಂಗಿಕತೆ, ಮಾತೃತ್ವ ಇತ್ಯಾದಿ ವಿಚಾರಗಳನ್ನು ಅಧ್ಯಾಯದಲ್ಲಿ ಪ್ರಸ್ತಾಪಿಸಲಾಗಿದೆ.
ಚಿಂತಕಿ ಕೆ. ಲೀಲಾ ಅವರು ಬರೆದ ’ಅಂತಾರಾಷ್ಟ್ರೀಯ ಸ್ತ್ರೀ ವಿಮೋಚನಾ ಚಳವಳಿಯ ಇತಿಹಾಸ' ಜಾಗತಿಕ ಮಹಿಳಾವಾದ ಸಾಗಿಬಂದ ಹಾದಿಯನ್ನು ವಿವರಿಸುತ್ತದೆ. ಅಮೆರಿಕ, ರಷ್ಯಾ, ಚೀನಾದಂತಹ ರಾಜ್ಯದಲ್ಲಿ ಸ್ತ್ರೀವಾದ ಹೇಗೆ ಅರಳಿತು ಎಂಬುದನ್ನು ಚರ್ಚಿಸಲಾಗಿದೆ.
ಓಲ್ಲಾ ಅವರ ’ಸ್ತ್ರೀವಾದಿ ಅರಿವು’ ಲೇಖನ ಮಹಿಳಾವಾದ ಕುರಿತಂತೆ ಭಾರತದ ಗ್ರಹಿಕೆಯನ್ನು ಪರಾಮರ್ಶಿಸುತ್ತದೆ. ಇಲ್ಲಿ ಮಹಿಳೆಯರ ಅನುಭವದ ಮೂಲಕವೇ ಸ್ತ್ರೀವಾದವನ್ನು ಅವಲೋಕಿಸಿರುವುದು ವಿಶೇಷ.
ಕೊನೆಯ ಪ್ರಬಂಧ ರಮಾ ಮೇಲ್ನೋಟೆಯವರ ’ ಮೂರನೆ ಜಗತ್ತಿನ ರಾಷ್ಟ್ರಗಳಲ್ಲಿ ಮಹಿಳೆಯರ ಹೋರಾಟಗಳು’. ಏಷ್ಯಾ, ಆಫ್ರಿಕಾ, ದಕ್ಷಿಣ ಅಮೆರಿಕದಲ್ಲಿ ನಡೆದ ಸ್ವಾತಂತ್ರ ಹೋರಾಟಗಳಲ್ಲಿ ಸ್ತ್ರೀಯರ ಪಾತ್ರವನ್ನು ಅಧ್ಯಯನ ಮಾಡಲಾಗಿದೆ. ಪ್ರತಿ ಹೋರಾಟದಲ್ಲಿ ಅವರು ಎತ್ತಿದ ಮಹಿಳಾ ಹಕ್ಕುಗಳನ್ನು ವಿವರಿಸಲಾಗಿದೆ.
©2024 Book Brahma Private Limited.