ಸಾಹಿತಿ ಲಕ್ಷ್ಮೀಪತಿ ಕೋಲಾರ ಮತ್ತು ಸುರೇಶ್ ಭಟ್ ಬಾಕ್ರೆಬೈಲು ಅವರು ಬರೆದಿರುವ ಕೃತಿ ’ಹರಪ್ಪ ಡಿ ಎನ್ ಎ ನುಡಿದ ಸತ್ಯ’.
ಭಾರತದ ಇಂದಿನ ಎಲ್ಲಾ ಜನಸಮುದಾಯಗಳು ಹೇಗೆ ಪ್ರಮುಖವಾಗಿ ಎರಡು ಬಗೆಯ ಪೂರ್ವೀಕರ ಬೆರಕೆಯಿಂದ ಆಗಿವೆ, ಮತ್ತು ಕಕೇಷಿಯನ್ ಮೂಲದ ಆರ್ಯ ವೈದಿಕರು ಹೇಗೆ ಯೂರೇಷಿಯಾದ ಯಾಮ್ನಾಯ ಸಂಸ್ಕೃತಿಯಿಂದ ಬಂದರು,ಮತ್ತು ಅವರಿಗೆ ಮೊದಲೇ ಇಲ್ಲಿದ್ದ ದಕ್ಷಿಣ ಭಾರತೀಯ ದ್ರಾವಿಡರೊಂದಿಗೆ ಹೇಗೆ ಸಂಪರ್ಕ ಬೆಳೆಸಿದರು , ಹೇಗೆ ತಮ್ಮ ರಾಜಕೀಯ ಸಾಮಾಜಿಕ ನಿಯಂತ್ರಣ ಸಾಧಿಸಿದರು, ಭಾರತದ ಜಾತಿ ಕಗ್ಗಂಟು ಹೇಗಾಯಿತು , ಜಾತಿ ಒಳಮದುವೆಗಳು ತಂದಿತ್ತಿರುವ ಜೆನೆಟಿಕ್ ಸಮಸ್ಯೆ ಏನು ಮೊದಲಾದ ವಿಷಯಗಳು ಈ ಕೃತಿಯಲ್ಲಿ ಚರ್ಚಿತವಾಗಿದೆ. ಹರಪ್ಪ ನಾಗರಿಕತೆ ಮತ್ತು ದ್ರಾವಿಡ ಪೂರ್ವ ಸಂಸ್ಕೃತಿ ಚರಿತ್ರೆಯ ಚರ್ಚೆಗಳ ಪ್ರಸ್ತಾಪವನ್ನೂ ಈ ಕೃತಿ ಒಳಗೊಂಡಿದೆ.
ಆರ್ಯರು ಈ ದೇಶದ ಮೂಲ ನಿವಾಸಿಗಳೋ ಅಲ್ಲವೋ ಎಂಬುದು ಬಹಳ ದಿನಗಳಿಂದ ನಡೆದಿರುವ ಚರ್ಚೆ. ಆರ್ಯರು ಮಧ್ಯ ಏಷ್ಯಾದಿಂದ ವಲಸೆ ಬಂದವರು ಎಂಬುದು ಬ್ರಿಟಿಷ್ ವಸಾಹತುಶಾಹಿ ಒಡೆದಾಳಲು ಹುಟ್ಟು ಹಾಕಿದ ಸಂಗತಿ ಎಂಬ ವಾದವೂ ಕೇಳಿಬಂದಿದೆ. ಆದರೆ ಇತ್ತೀಚಿನ ಹರಪ್ಪ-ಮೊಹಂಜಾದಾರೋ ನಾಗರೀಕತೆಯ ಹರಪ್ಪ ನೆಲೆಗಳಲ್ಲಿನ ಇತ್ತೀಚಿನ ಉತ್ಖನನ ಮತ್ತು ಈ ಸಂಶೋಧನೆಗಳು ಮತ್ತು ಜಗತ್ತಿನ ಜನಾಂಗೀಯ ವಂಶವಾಹಿನಿಗಳ ನಕ್ಷೆಗಳನ್ನು ಕುರಿತ ಅಧ್ಯಯನಗಳು ಭರತಖಂಡದ ಉತ್ತರ ಭಾಗದಲ್ಲಿ ನೆಲೆಸಿದ ಆರ್ಯರು ಈಗಿನ ರಷ್ಯಾದ ದಕ್ಷಿಣಕ್ಕಿರುವ ಕಾಕಸಸ್ ಪರ್ವತಾವಳಿಯ ತಪಲಿನಿಂದ ಸಾವಿರಾರು ವರ್ಷಗಳ ಹಿಂದೆ ವಲಸೆ ಹೊರಟ ಕಕೇಶಿಯನ್ನರ ಒಂದು ಸಮೂಹ ಎಂದು ಖಚಿತಪಡಿಸಿದೆ ಎಂಬುದನ್ನು ಈ ಪುಸ್ತಕ ಹಲವು ಸಾಕ್ಷ ಮತ್ತು ಆಕರಗಳ ಆಧಾರದ ಮೇಲೆ-ಉದಾ: ಕುದುರೆಯ ಮೂಲಸ್ಥಾನ, ಭಾಷಿಕ ಸಾಮೀಪ್ಯ, ವಲಸೆ ಹಾದಿಯಲ್ಲಿನ ವಿದ್ಯಮಾನಗಳು, ವೇದಗಳಲ್ಲಿನ ವರ್ಣನೆಗಳ ಹಿನ್ನೆಲೆ(ಇವುಗಳಲ್ಲಿ ಕೆಲವು ತಪ್ಪು ಗ್ರಹಿಕೆಯವೂ ಆದಂತಿವೆ) ಇತ್ಯಾದಿ-ಹೇಳುವ ಪ್ರಯತ್ನ ಮಾಡುತ್ತದೆ. ಜೊತೆಗೆ ಹರಪ್ಪ ನಾಗರೀಕತೆಯ ಜನರ ಮೂಲವು ದ್ರಾವಿಡಪೂರ್ವ ದಕ್ಷಿಣ ಭಾರತೀಯ ಬುಡಕಟ್ಟುಗಳಲ್ಲಿದೆ ಎಂದು ಸೂಚಿಸುವ ಮೂಲಕ ದ್ರಾವಿಡರೂ ಇಲ್ಲಿಗೆ ವಲಸೆ ಬಂದ ಜನಾಂಗ ಎಂದೂ ಅವರು ವಿವರಿಸುತ್ತಾರೆ. ಆದರೆ ಅಷ್ಟೇ ಮುಖ್ಯವಾಗಿ, ಆರ್ಯರ ಮೂಲದ ಬಗ್ಗೆ ಇಷ್ಟೆಲ್ಲ ನಿರ್ಣಾಯಕವೆನ್ನಿಸುವ ಸಂಶೋಧನೆಗಳು ಮಂಡನೆಯಾದರೂ, ಆರ್ಯ ಸಂಸ್ಕೃತಿಯ ಮುಖವಾಣಿಯಂತಿರುವ ಆರೆಸ್ಸೆಸ್ ಮತ್ತು ಸಂಘಪರಿವಾರದ ಇತರ ಸಂಘಟನೆಗಳು ಬುಡವಿಲ್ಲದ ಸಂಶೋಧನೆಗಳನ್ನು ಉಲ್ಲೇಖಿಸುತ್ತಾ ಆರ್ಯರು ಈ ದೇಶದ ಮೂಲನಿವಾಸಿಗಳೇ ಆಗಿದ್ದು, ಅವರು ಇಲ್ಲಿಂದ ಜಗತ್ತಿನ ಇತರೆಡೆಗಳಿಗೆ ವಲಸೆ ಹೋಗಿದ್ದಾರಷ್ಟೆ ಎಂದು ಪ್ರಚಾರ ಕೈಗೊಂಡಿರುವ ಬಗ್ಗೆ ತನ್ನ ಆಕ್ರೋಶವನ್ನು ವ್ಯಕ್ತಪಡಿಸುತ್ತದೆ. ಈ ಆಕ್ರೋಶಕ್ಕೆ ಕಾರಣ, ಭಾರತದಲ್ಲಿ ಈ ಪ್ರಚಾರ ಕಾರ್ಯಕ್ರಮ ಭಾರತದ ನಿಜವಾದ ಮೂಲನಿವಾಸಿಗಳ ಧರ್ಮ-ಸಂಸ್ಕೃತಿಗಳ ಸತ್ವವನ್ನು ಒತ್ತಾಯಪೂರ್ವಕ ಸಂಕರಗಳ ಮೂಲಕ ದುರ್ಬಲಗೊಳಿಸಿ ಹಿನ್ನೆಲೆಗೆ ಸರಿಸಿದ ಪ್ರಾಚೀನ ಆರ್ಯ ಸಂಸ್ಕೃತಿ ಆಕ್ರಮಣದ ಮುಂದುವರಿದಿರುವ ಪ್ರಯತ್ನವೇ ಆಗಿದೆ ಎಂಬುದು. ಅಲ್ಲದೆ ಸಂಘ ಪರಿವಾರದ ಈ ಪ್ರತಿಪಾದನೆಯು ಯುದ್ಧೋನ್ಮಾದಿ ಕಕೇಶಿಯನ್ನರು ತಮ್ಮ ಜನಾಂಗವಾದಿ ಸರ್ವಶ್ರೇಷ್ಠತೆಯ ಪುರ್ನಸ್ಥಾಪನೆಗಾಗಿ ಕೆಕೆಕೆ ಎಂಬ ಸಂಘಟನೆಯೊಂದನ್ನು ಚಾಲನೆಯಲ್ಲಿಟ್ಟಿದ್ದಾರೆ ಎಂಬ ಆತಂಕವೂ ಇದರೊಂದಿಗೆ ಸೇರಿಕೊಂಡಿದೆ. ಈ ಸಂಬಂಧವಾಗಿ ಇವರು ನೀಡುವ ಇನ್ನೊಂದು ಮಾಹಿತಿ ಎಂದರೆ, ಉತ್ತರಭಾರತದ ಮೇಲ್ಬಾತಿಗಳ ಹಲವು ಸಮೂಹಗಳ ವಂಶವಾಹಿಗೂ ಕಕೇಶಿಯನ್ ಜನಾಂಗದ ವಂಶವಾಹಿಗೂ ತಾಳೆಯಾಗುತ್ತದೆ ಎಂಬುದು.
ಇದನ್ನೆಲ್ಲ ಒಪ್ಪಿಕೊಂಡರೂ ಒಂದು ಅಹಿತಕರ ಪ್ರಶ್ನೆ ಉಳಿದೇ ಉಳಿಯುತ್ತದೆ: ಈ ಲೇಖಕರೇ ಒಪ್ಪಿಕೊಂಡಿರುವಂತೆ ಸಾವಿರಾರು ವರ್ಷಗಳ ಮೇಲಾಟ, ಸಂಕರ ಮತ್ತು ಅನುಸಂಧಾನಗಳ ನಂತರ ಯಾವುದೇ ಜನಾಂಗ ಪರಿಶುದ್ಧವಾಗಿ ಉಳಿಯದೆ ನಾವೆಲ್ಲರೂ ಮಿಶ್ರತಳಿಯ, ಮಿಶ್ರ ಸಂಸ್ಕೃತಿಯ ಜನವೇ ಆಗಿರುವಾಗ, ಗುರುತಿಸಲು ಖಚಿತ ಚಹರೆಗಳ ಆಧಾರಗಳೇ ಇಲ್ಲದ ಒಂದು ಸಮೂಹವನ್ನು ಕಕೇಶೀನ್ ಮೂಲದವರೆಂದು ಗುರುತಿಸಿ ಚರಿತ್ರೆಯ ಎಲ್ಲ ಕಟ್ಟತನ'ಗಳನ್ನೂ ಸಾರಾ ಸಗಟಾಗಿ ಅವರ ಮೇಲೆ ಹೊರಿಸಿ, ಸಂಘ ಪರಿವಾರದ ಸಂಕುಚಿತ ರಾಜಕಾರಣಕ್ಕೆ ಪ್ರತಿಯಾಗಿ ನೀವೆಂತಹ ರಾಜಕಾರಣ ಮಾಡಲು ಹೊರಟಿದ್ದೀರಿ? ನಿಜ, ಇವರು ವಾದಿಸುವ ಹಾಗೆ ಈ ಎಲ್ಲ ಆರ್ಯ ರಾಜಕಾರಣದ ಕೇಂದ್ರದಲ್ಲಿರುವ 'ಹಿಂದೂ' ಎಂಬ ಶಬ್ದ ಗೊಂದಕಾರಿಯಾಗಿದ್ದು ಅದು ಇಂದಿನ ಕೋಮುವಾದಿ ಘಾತುಕ ರಾಜಕಾರಣದ ಸಾಧನವಾಗಿದೆ. ಹಾಗಾಗಿ ರಿಪೇರಿ ಆಗಬೇಕಾದ್ದು ಈ ನೆಲೆಯಲ್ಲೇ ಹೊರತು ಜನಾಂಗೀಯ ನೆಲೆಯ ವಿಶ್ಲೇಷಣೆ ಮತ್ತು ಆಕ್ರೋಶಗಳ ಆಧಾರದ ಮೇಲಲ್ಲ ಅಲ್ಲವೆ?
-ಡಿಎಸ್ಸೆನ್
ಕೃಪೆ : ಹೊಸ ಮನುಷ್ಯ ( ಫೆಬ್ರವರಿ 2019)
©2024 Book Brahma Private Limited.