`ಹೇಳದೇ ಉಳಿದ ಅದ್ಭುತ ಕಥೆಗಳು' ಕೃತಿಯು ಡಾ. ಶಂಸುಲ್ ಇಸ್ಲಾಂ ಅವರ ಮೂಲ ಕೃತಿಯಾಗಿದ್ದು, ಕನ್ನಡಕ್ಕೆ ಬಿ.ಆರ್. ಮಂಜುನಾಥ್ ಅವರು ಅನುವಾದಿಸಿದ್ದಾರೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ದೂರದ ಇಂಗ್ಲೆಂಡ್‌ನಲ್ಲಿದ್ದ, ಮಹಾನ್ ಹೋರಾಟಗಾರರು ಹಾಗೂ ವಿದ್ವಾಂಸರಾಗಿದ್ದ ಕಾರ್ಲ್ ಮಾರ್ಕ್ಸ್ ಮತ್ತು ಫೆಡೆರಿಕ್ ಏಂಗೆಲ್ಸ್ ರವರು ಈ ಬಂಡಾಯದಲ್ಲಿ ತೀವ್ರ ಆಸಕ್ತಿಯನ್ನು ತಳೆದು, ಇದರ ದೂರಗಾಮಿ ಪರಿಣಾಮಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದರು. ಅವರ ಮುನ್ನೋಟದಂತೆಯೇ ಈ ಮಹಾನ್ ಹೋರಾಟದ ನಂತರ ಭಾರತವು ಬಹಳ ದೊಡ್ಡ ಬದಲಾವಣೆಯನ್ನೇ ಕಂಡಿತು ಮತ್ತು ಮುಂದಿನ ರಾಷ್ಟ್ರೀಯ ವಿಮೋಚನಾ ಹೋರಾಟಗಳಿಗೆ ಬಹಳ ದೊಡ್ಡ ಕಾಣಿಕೆಯನ್ನು ನೀಡಿತು. ಈ ಸಂಗ್ರಾಮದ ಕುರಿತು ಪ್ರತಿ ತಲೆಮಾರಿನಲ್ಲಿಯೂ ಕೂಡ ಅನೇಕ ಹೊಸ ಹೊಸ ಸಂಪದ್ಭರಿತಗೊಳಿಸಿವೆ. ಹಾಗೂ ಆಳವಾಗಿಸುತ್ತಿವೆ. ಈ ಕಿರು ಹೊತ್ತಿಗೆಯಂತೂ ಇತಿಹಾಸದ ಪುನರ್ ರಚನೆ ಮತ್ತು ವ್ಯಾಖ್ಯಾನಕ್ಕೆ ಒದಗಿಸಿರುವ ಮಾಹಿತಿ ಮತ್ತು ವಾದಗಳು ನಮ್ಮ ಕಣ್ಣು ತೆರೆಸುವಂತಿವೆ ಮತ್ತು ಅರಿವಿನ ಕ್ಷಿತಿಜವನ್ನು ವಿಸ್ತರಿಸುವಂತಿವೆ. 1857ರ ಮಹಾಬಂಡಾಯವು ಒಂದೆರಡು ಉತ್ತರ ಭಾರತದ ಸಂಸ್ಥಾನಗಳಿಗೆ ಸೀಮಿತವಾದ ದಂಗೆಯಲ್ಲ, ಬದಲಿಗೆ ಭಾರತದಾದ್ಯಂತ ಕಂಡುಬಂದ ಪ್ರಘಟನೆ ಎಂಬುದು ಈ ಪುಸ್ತಕದಲ್ಲಿನ ಇನ್ನೊಂದು ಮುಖ್ಯವಾದ ಪ್ರತಿಪಾದನೆ. ದಕ್ಷಿಣ ಭಾರತದವರಾದ ಮತ್ತು ವಿಶೇಷವಾಗಿ ಕರ್ನಾಟಕದವರಾದ ನಾವು ಸಹ ಈ ಪ್ರತಿಪಾದನೆಯೊಂದಿಗೆ ನಮ್ಮ ದನಿಯನ್ನು ಸೇರಿಸಬಲ್ಲೆವು. ಹೈದರಾಲಿ ಮತ್ತು ಟಿಪ್ಪು ಸುಲ್ತಾನರ ಸುಪ್ರಸಿದ್ಧ, ಪ್ರಬಲ ಪ್ರತಿರೋಧದ ನಂತರವೂ ಕರ್ನಾಟಕದ ವಿವಿಧ ಮೂಲೆಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಬ್ರಿಟಿಷ್ ವಿರೋಧಿ ಹೋರಾಟಗಳು ಸ್ಫೋಟಗೊಂಡಿವೆ. ಬ್ರಿಟಿಷರ ಶಸ್ತ್ರಾಸ್ತ್ರ ಕಾಯಿದೆಯನ್ನು ವಿರೋಧಿಸಿ 1857ರಲ್ಲಿಯೇ ನಡೆದ ಮುಧೋಳ ತಾಲೂಕಿನ ಹಲಗಲಿ ಬೇಡರ ಹೋರಾಟ, ಸುರಪುರದ ವಿದ್ರೋಹ, ಮುಂಡರಗಿ ಭೀಮರಾಯ ಮತ್ತು ನರಗುಂದದ ಬಾಬಾ ಸಾಹೇಬರ ನೇತೃತ್ವದ ಬಂಡಾಯಗಳು ಬಹಳ ಮುಖ್ಯವಾದವು. ಇವರಲ್ಲಿ ಅನೇಕರಿಗೆ ಉತ್ತರ ಭಾರತದಲ್ಲಿ ನಡೆಯುತ್ತಿದ್ದ ಮಹಾನ್ ಹೋರಾಟದ ಸುದ್ದಿ ತಿಳಿದಿತ್ತು ಮತ್ತು ಅನೇಕರು ಪೇಶ್ವ ನಾನಾಸಾಹೇಬರೊಂದಿಗೆ ಸಂಬಂಧ ಸಂಪರ್ಕಗಳನ್ನು ಇಟ್ಟುಕೊಂಡಿದ್ದರು ಎಂಬುದು ಗಮನಾರ್ಹ. ಈ ಸಣ್ಣಪುಟ್ಟ ಬಂಡಾಯಗಳಲ್ಲಿ ಅಡಕವಾಗಿದ್ದ ಜನಪರ ಧೋರಣೆಗಳು, ಜನಸಾಮಾನ್ಯರ ಭಾಗವಹಿಸುವಿಕೆ, ರಾಷ್ಟ್ರವಾದದ ಅಂಕುರಗಳು ಇತ್ಯಾದಿಗಳ ಕುರಿತು ಇನ್ನಷ್ಟು ಸಂಶೋಧನೆ ಅಗತ್ಯವಾಗಿದೆ.
©2024 Book Brahma Private Limited.