ಕ್ವಿಟ್ ಇಂಡಿಯಾ ಚಳವಳಿ ಸೇರಿದಂತೆ ಇಡೀ ಸ್ವಾತಂತ್ಯ್ರ ಹೋರಾಟದ ಬಗ್ಗೆ ಹೊಸ ತಲೆಮಾರಿಗೆ ಅತಿರಮ್ಯ, ಧೀರೋದಾತ್ತ ಎನಿಸುವಂತಹ ಅಭಿಪ್ರಾಯವಿದೆ. ಅಂದಿನ ನಾಯಕರೆಲ್ಲರ ತ್ಯಾಗ ಬಲಿದಾನದ ಫಲವಾಗಿ ಸ್ವಾತಂತ್ಯ್ರ ಬಂತು ಎಂಬುದು ಜನಜನಿತ ಮಾತು. ಆದರೆ ವಾಸ್ತವ ಹಾಗಿಲ್ಲ ಎನ್ನುತ್ತಾರೆ 'ಕ್ವಿಟ್ ಇಂಡಿಯಾ-ಚಳವಳಿಯ ಒಳಗುಟ್ಟುಗಳು' ಕೃತಿ ಬರೆದಿರುವ ಯಡೂರ ಮಹಾಬಲ. ಅಂತಹ ಮಹಾನ್ ಆಂದೋಲನ ಕೂಡ ಸಂಚು, ಒಳಸಂಚು ಸ್ವಾರ್ಥಗಳಿಂದ ಕೂಡಿತ್ತು ಎಂಬುದು ಅವರ ಅಭಿಪ್ರಾಯ.
ರಾಜಕಾರಣಿ ಎಂಬ ಮಿತಿಯ ಆಚೆಗೆ ದಾಟಲು ಗಾಂಧೀಜಿ ಅವರಿಗೆ ಕೂಡ ಸಾಧ್ಯವಾಗಲಿಲ್ಲ ಎಂದು ಮಹಾತ್ಮನನ್ನು ತಮ್ಮ ವಿಮರ್ಶೆಯ ಅಲುಗಿನಿಂದ ಇರಿಯುತ್ತಾರೆ ಲೇಖಕರು. ನೇತಾಜಿ ಸುಭಾಷ್ ಚಂದ್ರಬೋಸ್ ಅವರ ನಾಯಕತ್ವ ಉತ್ತಮವಾಗಿತ್ತು ಎಂಬ ಧೋರಣೆ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಆದರೆ ನೇತಾಜಿ ಮತ್ತು ಹಿಟ್ಲರ್ ನಡುವಿನ ನಂಟನ್ನು ಅವರು ಪ್ರಸ್ತಾಪಿಸುವುದಿಲ್ಲ. ಗಾಂಧೀಜಿ ಸ್ವಾತಂತ್ಯ್ರ ಹೋರಾಟಕ್ಕೆ ನೀಡಿದ ಕೊಡುಗೆಗಳನ್ನು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳುವುದಿಲ್ಲ ಎಂಬ ಅಭಿಪ್ರಾಯ ಸಹೃದಯರಿಂದ ವ್ಯಕ್ತವಾಗಿದೆ. ಲೇಖಕರದ್ದು ಎಡಪಂಥೀಯ ವಿಚಾರ ಧಾರೆಯಾಗಿರುವುದು ಇದಕ್ಕೆ ಕಾರಣವಿರಬಹುದು ಎನ್ನಲಾಗಿದೆ. ಹೀಗಾಗಿ ಕೃತಿಯ ವಸ್ತು ಚರ್ಚೆಗೆ ಒಳಗಾಗಿರುವಂತೆ ಇಡೀ ಕೃತಿಯೇ ಸ್ವತಃ ಚರ್ಚಾಸ್ಪದವಾಗಿರುವಂತೆ ತೋರುತ್ತದೆ.
ಈ ಅಭಿಪ್ರಾಯಗಳಾಚೆಗೂ ಕೃತಿಯನ್ನು ಓದಬೇಕಿರುವುದು ಅಂದಿನ ರಾಜಕೀಯ ಚಿತ್ರಣವನ್ನು ಇನ್ನೊಂದು ಮಗ್ಗುಲಿನಿಂದ ನೋಡುವ ಕಾರಣಕ್ಕೆ. ಲೇಖಕರ ಅಭಿಪ್ರಾಯಗಳನ್ನು ಒಪ್ಪುವುದು ಬಿಡುವುದು ಓದುಗರಿಗೆ ಬಿಟ್ಟದ್ದು.
©2024 Book Brahma Private Limited.