ಲೇಖಕ ಎಸ್.ಜಿ. ಸರ್ದೇಸಾಯಿ ಅವರ ಕೃತಿ ‘ಭಾರತೀಯ ಇತಿಹಾಸದ ವೈಲಕ್ಷಣಗಳು. ಈ ಕೃತಿಯನ್ನು ಲೇಖಕ ಕೆ.ಎಲ್. ಗೋಪಾಲಕೃಷ್ಣರಾವ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಪ್ರಾಚೀನ ಭಾರತೀಯ ಸಂಸ್ಕೃತಿಯ ಆಚರಣಾ ವಿಧಾನಗಳನ್ನು ವೇದಪೂರ್ವ ವೇದೋತ್ತರ ಮತ್ತು ಉಪನಿಷತ್ತಿನ ಕಾಲದ ವ್ಯಾಪ್ತಿಯಲ್ಲಿ ವಿಮರ್ಶೆಗೊಳಪಡಿಸಿದ ಒಂದು ಅಪೂರ್ವ ಇತಿಹಾಸದರ್ಶನ ಇಲ್ಲಿದೆ. ನವನವೀನ ಸಿದ್ಧಾಂತಗಳು ವಿಕಾಸಗೊಳ್ಳುತ್ತ ಹೊಸ ಹೊಸ ಕಲ್ಪನೆಗಳು ಗರಿಗೆದರುತ್ತ ಸಾಗಿದ ವೇದಕಾಲೀನ ಸಂಸ್ಕೃತಿ ಇಲ್ಲಿ ಪರಿಚಯಿಸಲ್ಪಟ್ಟಿದೆ. ಬೇಟೆಯ ಹಂತದಿಂದ ಕೃಷಿಯ ಹಂತಕ್ಕೆ ತಲುಪಿದ ಮಾನವನಿಗೆ ಫಲವತ್ತಾದ ಭೂಮಿಯಲ್ಲಿ ಬೆಳೆಯುವುದೆಲ್ಲ ಯಾರದೋ ಕೃಪೆಯಿಂದ ಎಂಬ ನಂಬಿಕೆ ಬೆಳೆಯಿತು. ಸಾಕಷ್ಟು ಬದಲಾವಣೆ ಹೊಂದಿದ ಸಂಸ್ಕೃತಿಗಳು ಇಂದು ನಮ್ಮ ಮುಂದಿವೆ. ಪರಸ್ಪರ ಸಂಘರ್ಷಕ್ಕೆ ಇಳಿದಿವೆ. ಈ ಎಲ್ಲ ಸಂಗತಿಗಳನ್ನು ಒಳಗೊಂಡ ಚಿಂತನಾರ್ಹ ಬರೆಹಗಳು ಇಲ್ಲಿವೆ.
(ಭಾರತೀಯ ಇತಿಹಾಸದ ವೈಲಕ್ಷಣಗಳು, ಮಾರ್ಚ್ 2014, ಹೊಸತು, ಪುಸ್ತಕದ ಪರಿಚಯ)
ಭಾರತೀಯ ಇತಿಹಾಸವನ್ನು ವೇದಪೂರ್ವ – ವೇದಕಾಲೀನ - ವೇದೋತ್ತರವೆಂಬ ದೀರ್ಘ ವಿಸ್ತಾರದಲ್ಲಿ ಆಳವಾಗಿ ಅಧ್ಯಯನ ಮಾಡಿದವರು ವಿದ್ವಾಂಸರಾದ ಎಸ್. ಜಿ. ಸರ್ದೇಸಾಯಿ, ನಿಖರ ಮಾಹಿತಿ ಹುಡುಕುತ್ತ ಅವರು ಜಾಲಾಡಿದ ಸಂಸ್ಕೃತಿಯ ಪಾಂಡಿತ್ಯಪೂರ್ಣ ಬರಹದ ಒಂದೆರಡು ಅಧ್ಯಾಯಗಳ ಅನುವಾದ ಮಾತ್ರವಾಗಿದೆ ಈ ಕೃತಿ. ಭೂಮಿಯ ಮೇಲೆ ಮಾನವನ ಶಕೆ ಆರಂಭದ ನಂತರ ಅದೆಷ್ಟೋ ನಾಗರಿಕತೆಗಳು ಅರಳಿ, ಮೆರೆದು, ಉಚ್ಛಾಯಸ್ಥಿತಿ ತಲುಪಿದವು. ಕೆಲವು ಬದಲಾದುವು, ಕಾಲ ಕಳೆದಂತೆ ನಶಿಸಿ ಕುರುಹನ್ನು ಮಾತ್ರ ಉಳಿಸಿದವು. ಇಂದಿಗೂ ಪಳೆಯುಳಿಕೆಯೆಂಬಂತೆ ಅದೇ ಸಂಸ್ಕೃತಿಯ ಬದಲಾದ ಆಚರಣೆಗಳು ನಮ್ಮೊಂದಿಗೆ ಉಳಿದಿವೆ. ವೇದಪೂರ್ವ ಕಾಲವು ಮಾನವನ್ನು ಬೇಟೆಯ ಹಂತದಿಂದ ಕೃಷಿಯ ಕಡೆಗೆ ವಾಲಿ ಒಂದೆಡೆ ನೆಲೆನಿಂತು ಬುಡಕಟ್ಟು ವ್ಯವಸ್ಥೆ, ಸಮುದಾಯಜೀವನ ಆರಂಭಿಸಿದ ಕಾಲ. ಮುಂದೆ ಪ್ರಕೃತಿಯ ವೈವಿಧ್ಯಮಯ ವಿದ್ಯಮಾನಗಳನ್ನು ಅಚ್ಚರಿ ಮತ್ತು ಕೃತಜ್ಞತಾಭಾವದಿಂದ ಅವಲೋಕಿಸಿ ರಹಸ್ಯ ಮತ್ತು ನಿಜವನ್ನರಸುತ್ತ ಮಾನವ ನಡೆದ. ಮಾತೇ ಮಂತ್ರವಾಯಿತು. ಹಾಡೇ ಸಾಹಿತ್ಯವಾಯಿತು. ರಾಗ ತಾಳಗಳೇ ಸಂಗೀತ ನಾಟ್ಯಗಳಾದುವು. ನಾಲ್ಕು ವೇದಗಳು ರೂಪುಗೊಳ್ಳಲು ಸಾವಿರಾರು ವರ್ಷಗಳೇ ಸಂದವು. ಕ್ರಮೇಣ ಹಲವಾರು ಆಚರಣೆಗಳನ್ನು ರೂಢಿಗೆ ತಂದು ಪ್ರಕೃತಿಯನ್ನು ದೇವತಾಸ್ವರೂಪವೆಂದು ಬಗೆದು ಮನದಣಿಯೇ ಸ್ತುತಿಸಿದ... ಹೀಗೆ ಅಂದಿನ ಸಂಸ್ಕೃತಿ-ಆಚರಣೆಗಳನ್ನು ವೈಲಕ್ಷಣ್ಯಗಳನ್ನು ವಿಮರ್ಶೆಗೊಳಪಡಿಸಿ, ನಡೆದುಹೋದ ಘಟನಾವಳಿಗಳನ್ನು ಕಣ್ಮುಂದೆ ಹಾದುಹೋದಂತೆ ಚಿತ್ರಿಸಿದ ಅಪೂರ್ವ ಜ್ಞಾನಧಾರೆಯಿದು. ನಮ್ಮ ಸಂಸ್ಕೃತಿ – ತಿಳಿದುಕೊಳ್ಳೋಣ. ನಮ್ಮ ದೌರ್ಬಲ್ಯಗಳನ್ನು ಅರಿಯೋಣ.
©2024 Book Brahma Private Limited.