‘ಬ್ರಿಟಿಷರ ವಿರುದ್ಧ ಜನತಾ ಬಂಡಾಯ’ ಕೃತಿಯು ಅರವಿಂದ ಚೊಕ್ಕಾಡಿ ಅವರ ವಸಾಹತು ಶಾಹಿ ಆಳ್ವಿಕೆಯ ಕುರಿತ ಕಥಾನಕವಾಗಿದೆ. ಕೃತಿಗೆ ಬೆನ್ನುಡಿ ಬರೆದಿರುವ ಡಾ. ಪುಂಡಿಕ್ಯಾ ಗಣಪಯ್ಯ ಭಟ್ ಅವರು, ‘ವಸಾಹತು ಶಾಹಿ ಆಳ್ವಿಕೆಯ ವಿರುದ್ಧ ಅಂದಿನ ಕೊಡಗು-ಕೆನರಾ ಪ್ರದೇಶದಲ್ಲಿ 1834 -37 ರ ಅವಧಿಯಲ್ಲಿ ನಡೆದ ಜನತಾ ಬಂಡಾಯ ಕುರಿತು ವಿಭಿನ್ನ ರೂಪದ ಹಲವಾರು ಕೃತಿಗಳು ಪ್ರಕಟಗೊಂಡಿವೆ. ಇದರ ಬಗ್ಗೆ ಹೊಸದಾಗಿ ಪುಸ್ತಕವೊಂದನ್ನು ರಚಿಸುವುದು ಕಷ್ಟಕರವೂ ಹೌದು; ಸವಾಲೂ ಹೌದು. ಆದರೆ ಸಿದ್ಧ ಮಾದರಿಗಳಿಗಿಂತ ಭಿನ್ನವಾದ ಬಂಡಾಯದ ಹಲವು ಒಳನೋಟಗಳನ್ನು ಮತ್ತು ಹೊಸ ಹೊಳಹುಗಳನ್ನು ಹೊಂದಿರುವ ಈ ಕೃತಿಯನ್ನು ರಚಿಸುವ ಮೂಲಕ ಅರವಿಂದ ಚೊಕ್ಕಾಡಿಯವರು, ಕಷ್ಟಕರವಾದ ಸವಾಲನ್ನೆದುರಿಸುವಲ್ಲಿ ಬಹುಮಟ್ಟಗೆ ಯಶಸ್ವಿಯಾಗಿದ್ದಾರೆ.
ಕೃತಿಯ ಮೊದಲನೆಯ ಅಧ್ಯಾಯದಲ್ಲಿ ಬಂಡಾಯದ ಸ್ವರೂಪವನ್ನು ಬಹುಕೋನೀಯ ವಿಶ್ಲೇಷಣೆಗೆ ಒಳಪಡಿಸಿದ್ದು 'ಪ್ರಾದೇಶಿಕ ರಾಷ್ಟ್ರೀಯತೆಯ’ ವ್ಯಾಪ್ತಿಯೊಳಗೆ ಈ ಬಂಡಾಯವನ್ನು ಅರ್ಥೈಸಿಕೊಳ್ಳುವ ನೆಲೆಯಲ್ಲಿ ನೀಡಿರುವ ಸ್ವಾತಂತ್ರ ಹೋರಾಟ, ಕ್ರಾಂತಿ, ಲೂಟಿ ಮತ್ತು ರಾಷ್ಟ್ರೀಯ ಚಳವಳಿಗಳ ವ್ಯತ್ಯಾಸಗಳ ಕುರಿತ ವಿಶ್ಲೇಷಣೆಯು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ; ಮಾತ್ರವಲ್ಲದೆ , ದೇಶದ ಇತರ ಭಾಗಗಳಲ್ಲಿ ನಡೆದ ಹಲವು ಬಂಡಾಯಗಳನ್ನು ಪುನರ್ವಿಮರ್ಶಿಸುವ ದೃಷ್ಟಿಯಿಂದಲೂ ಇದು ಮಹತ್ವದ್ದಾಗಿದೆ. ‘ಕೊನೆಯಿಲ್ಲದ ಸಂವಾದ’ ಎಂಬ ಕೂನೆಯ ಅಧ್ಯಾಯದಲ್ಲಿ. ಬಂಡಾಯವು ಹುಟ್ಟಿಸಿದ ಪ್ರಶ್ನೆಗಳಿಗೆ ತಾರ್ಕಿಕವಾಗಿ ಹಾಗೂ ಸಮರ್ಥನೀಯವಾಗಿ ಉತ್ತರವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇಡೀ ಬಂಡಾಯವನ್ನು ಗ್ರಹಿಸಿದ ದೃಷ್ಟಿ ಮತ್ತು ಅರ್ಥೈಯಿಸಿರುವ ಕ್ರಮ ವಿನೂತನವಾಗಿದೆ. ವಿಚಾರ ಮಂಡನೆಯಲ್ಲಿ ಸ್ಪಷ್ಟತೆ, ವ್ಯಕ್ತಪಡಿಸಿದ ಅಭಿಪ್ರಾಯಗಳಲ್ಲಿ ಖಚಿತತೆ, ಕೃತಿಯುದ್ದಕ್ಕೂ ಗುರುತಿಸಲು ಸಾಧ್ಯವಾಗುವ ಪೂರ್ವಗ್ರಹ ರಹಿತ ದೃಷ್ಟಿ ವಸ್ತುನಿಷ್ಟತೆ, ಇತಿಹಾಸ ನಿಷ್ಟತೆ, ಸರಳ ಹಾಗೂ ಪ್ರಭಾವಶಾಲಿ ನಿರೂಪಣೆ ಇವು ಈ ಕೃತಿಯ ವೈಶಿಷ್ಟ್ಯಗಳು. ಸ್ಥಾಪಿತ ಸಂಶೋಧನಾ ನಿಯಮಗಳಿಗೆ ಅತಿಯಾಗಿ ಬದ್ಧವಾಗದೆ. ಈ ಕೃತಿಯನ್ನು ರಚಿಸಿದ್ದಾಗಿ ಹೇಳಿಕೊಂಡಿದ್ದರೂ, ಒಂದು ಸಂಶೋಧನ ಪ್ರಬಂಧದ ಸರ್ವ ಲಕ್ಷಣಗಳನ್ನು ಹೊಂದಿರುವ ಈ ಪುಸ್ತಕವು, ಈ ತನಕ ಬಂದಿರುವ ಕೃತಿಗಳಿಗಿಂತ ಭಿನ್ನವಾಗಿ ನಿಲ್ಲುವ ಕೃತಿಯೆಂದು ಓದುಗನಿಗೆ ಅನಿಸುವುದು ಇದರ ವೈಶಿಷ್ಟ್ಯವೂ ಹೌದು ಸಾರ್ಥಕ್ಯವೂ ಹೌದು’ ಎಂದು ಪ್ರಶಂಸಿಸಿದ್ದಾರೆ.
©2024 Book Brahma Private Limited.