ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ಸಂಪುಟ 2ರಲ್ಲಿ ಪ್ರಕಟವಾದ ಕೃತಿ ‘ಭಾರತ ಉಪಖಂಡದ ಆಧುನಿಕಪೂರ್ವ ಚರಿತ್ರೆ ವಿವಿಧ ಆಯಾಮಗಳು’. ತಂಬಂಡ ವಿಜಯ್ ಪೂಣಚ್ಚ ಅವರು ಈ ಕೃತಿಯ ಸಂಪಾದಕರು.
ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ವಿದ್ವಾಂಸರೊಂದಿಗೆ ನಾಡಿನ ಪ್ರಮುಖ ವಿದ್ವಾಂಸರ ಬರಹಗಳನ್ನು ಮತ್ತು ಅನುವಾದಗಳನ್ನು ಈ ಸಂಪುಟ ಒಳಗೊಂಡಿದೆ. ಚರಿತ್ರೆ ಅಥವಾ ಸಮಾಜ ವಿಜ್ಞಾನಗಳ ಜ್ಞಾನಶಿಸ್ತಿನಲ್ಲಿ ಕನ್ನಡದಲ್ಲಿ ಚರ್ಚೆಗಳು ಕಡಿಮೆ ಎನ್ನುವ ಮಿತಿಗಳನ್ನು ಈ ಸಂಪುಟಗಳು ಮೀರಿವೆ. ದೇಸೀ ಭಾಷೆಗಳಲ್ಲಿ ಜಗತ್ತಿನ ಜ್ಞಾನ ಪ್ರಕಾರಗಳನ್ನು ಸಮರ್ಥವಾಗಿ ನಿಭಾಯಿಸುವುದು ನಮ್ಮ ಭಾಷೆ, ಪರಂಪರೆ ಹಾಗೂ ಅನನ್ಯತೆಗಳನ್ನು ಕಾಪಾಡುವ ಬಗೆ ಈ ಪ್ರಯತ್ನದ ಒಂದು ಆಯಾಮವಾಗಿದೆ.
ಕನ್ನಡದ ಸಂದರ್ಭದಲ್ಲಿ ಪಾಶ್ಚಾತ್ಯ ಜಗತ್ತು ಅಥವಾ ಕರ್ನಾಟಕೇತರ ಜಗತ್ತು ನಿರ್ಣಯಿಸುವ ಮತ್ತು ನಿಯಂತ್ರಿಸುವ ಬೌದ್ದಿಕ ಆಕ್ರಮಣಗಳನ್ನು ಮತ್ತು ಸವಾಲುಗಳನ್ನು ಕನ್ನಡ ವಿಶ್ವವಿದ್ಯಾಲಯದ ಬೌದ್ಧಿಕ ಪರಂಪರೆ ಸಮರ್ಥವಾಗಿ ನಿಭಾಯಿಸುತ್ತಿದೆ. ಸಮಾಜವಿಜ್ಞಾನಗಳ ಬೌದ್ದಿಕ ಪರಂಪರೆಗಳು ಕನ್ನಡದಲ್ಲಿ ಈ ಬಗೆಯಲ್ಲಿ ಮೂಡಿ ಬರುತ್ತಿರುವುದು ಈ ದಿಶೆಯಲ್ಲಿ ಒಂದು ಪ್ರಮುಖ ಹೆಜ್ಜೆ.
ಚರಿತ್ರೆ ವಿಭಾಗವು ಈ ಹಿನ್ನೆಲೆಯಲ್ಲಿ ಹೊರತರುತ್ತಿರುವ ಕನ್ನಡ ವಿಶ್ವವಿದ್ಯಾಲಯ ಚರಿತ್ರೆ ಸಂಪುಟಗಳು ಒಂದು ಮೈಲುಗಲ್ಲು. ಚರಿತ್ರೆ ಲೇಖನ ಕ್ರಮಗಳು ಮತ್ತು ಸಂಶೋಧನಾ ವಿಧಾನ, ಭಾರತ ಉಪಖಂಡದ ಆಧುನಿಕಪೂರ್ವ ಚರಿತ್ರೆ, ಭಾರತ ಉಪಖಂಡದ ಆಧುನಿಕ ಚರಿತ್ರೆ, ಏಷ್ಯಾ, ಯುರೋಪ್, ಅಮೆರಿಕಾ, ಆಫ್ರಿಕಾ ಹಾಗೂ ಸಮಕಾಲೀನ ಕರ್ನಾಟಕಕ್ಕೆ ಸಂಬಂಧಿಸಿದ ವಿವಿಧ ಆಯಾಮಗಳನ್ನು ಈ ಎಂಟು ಸಂಪುಟಗಳು ಚರ್ಚಿಸಿವೆ.
ಕನ್ನಡದಲ್ಲಿ ಪ್ರಕಟಿಸಿ ಕನ್ನಡ ಓದುಗರಿಗೆ ಕನ್ನಡ ವಿಶ್ವವಿದ್ಯಾಲಯವು ಈ ಕೃತಿ ಅರ್ಪಿಸುತ್ತಿದೆ.
©2024 Book Brahma Private Limited.