ತಮ್ಮ ತಾಯಿ ಶ್ರೀಕಾಂತಮ್ಮಅವರೊಂದಿಗೆ ಕುಳಿತು ಅವರು ಹಾಡುವ ಜಾನಪದ ಹಾಡುಗಳನ್ನು ಕಾಲಕಾಲಕ್ಕೆ ಬರೆದುಕೊಂಡು ಸಂಪಾದಿಸಿ, ಅವುಗಳಿಗೆ ಸಾಹಿತಿ ಡಿ.ಎನ್. ಅಕ್ಕಿ (ದೇವೇಂದ್ರಪ್ಪ ನಾಭಿರಾಜ್ ಅಕ್ಕಿ) ಅವರು ಪುಸ್ತಕ ರೂಪು ನೀಡಿದ್ದೇ ’ಹಡದವ್ವ ಹಾಡ್ಯಾಳ’.
ಕೃತಿಯಲ್ಲಿಯ ಬಹುತೇಕ ಹಾಡುಗಳು ಜಾನಪದ ಸಾಹಿತ್ಯದಲ್ಲಿ ವಿರಳವಾಗಿ ಕಾಣಸಿಗುವಂತಹವು. ಡಾ. ದೇವೇಂದ್ರಕುಮಾರ ಹಕಾರಿ ಮುನ್ನುಡಿಯಲ್ಲಿ ಬರೆದಿರುವಂತೆ ’ದೈವ-ದೇವರ ಸ್ತುತಿ, ಬೀಸುವ, ಕುಟ್ಟುವ, ನೆಂಟಸ್ತಿಕೆಯ, ಹೊಲ-ಮನೆ ಹೀಗೆ ವೈವಿಧ್ಯಮಯ ಸಂದರ್ಭಗಳ ಕುರಿತು ವಿಶೇಷವಾಗಿ ಸಗರನಾಡಿನ ಸಾಂಸ್ಕೃತಿಕ ಸಮೃದ್ಧಿ ಹಾಗೂ ಜೀವನ ದರ್ಶನವನ್ನು ಹಾಡುಗಳಲ್ಲಿ ಕಾಣಬಹುದು. ಈ ಹಾಡುಗಳು ಕನ್ನಡ ಜಾನಪದ ಸಾಹಿತ್ಯಕ್ಕೆ ಅಮೂಲ್ಯ ಕೊಡುಗೆಗಳು. ತಾಯಿಯಲ್ಲಿರುವ ಅಪಾರವಾದ ಜಾನಪದ ಕಣಜವನ್ನು ಗುರುತಿಸಿ, ಅವುಗಳನ್ನು ಸಂಪಾದಿಸಿ, ಜಾನಪದ ಸಾಹಿತ್ಯಕ್ಕೆ ಕೊಡುಗೆ ನೀಡಿದ ಡಿ.ಎನ್. ಅಕ್ಕಿ ಅವರ ಕಾಳಿಜಿ-ಪರಿಶ್ರಮ ಅನುಕರಣೀಯ’ ಎಂದು ಪ್ರಶಂಸಿಸಿದ್ದಾರೆ.
ಕೃತಿಯ ಬೆನ್ನುಡಿಯಲ್ಲಿ ಡಾ. ಕಮಲಾ ಹಂಪನಾ, ’ಜಾನಪದೀಯ ನೂರಾರು ಹಾಡುಗಳನ್ನುಕಂಠಪಾಠ ಮಾಡಿದಂತೆ, ನಿಂತ ನಿಲುವಿನಲ್ಲೇ ಶ್ರೀಕಾಂತಮ್ಮ ಅವರು ಹಾಡುವ ಸಾಮರ್ಥ್ಯ ಹೊಂದಿದ್ದರು. ಈಗ ಆಗಬೇಕಿರುವುದು; ಡಿ.ಎನ್. ಅಕ್ಕಿ ಅವರಂತೆ ಜಾನಪದ ಸಾಹಿತ್ಯ ಸಂಪಾದನೆಯ ಕಳಕಳಿ’ ಎಂದಿದ್ದಾರೆ.
©2024 Book Brahma Private Limited.