ಸಾಹಿತಿ ಶೋಭಾದೇವಿ ಚೆಕ್ಕಿ ಅವರು ಸಂಗ್ರಹಿಸಿದ ಸಾಂಪ್ರದಾಯಿಕ ಹಾಗೂ ಜಾನಪದೀಯ ಹಾಡುಗಳ ಸಂಗ್ರಹ ಕೃತಿ-ಬೆಳ್ಳಕ್ಕಿ ಹಿಂಡು. ಕೃತಿಗೆ ಮುನ್ನುಡಿ ಬರೆದ ಸಾಹಿತಿ ರಂಜಾನ್ ದರ್ಗಾ ‘ಮಹಿಳೆಯರ ಬದುಕನ್ನು ದೃಷ್ಟಿಯಲ್ಲಿಟ್ಟುಕೊಂಡು ಅವರ ಜೀವನಕ್ಕೆ ಸಂಬಂಧಿಸಿದ ಎಲ್ಲ ಪ್ರಮುಖ ಘಟ್ಟಗಳ ಹಾಡುಗಳನ್ನು ಸಂಗ್ರಹಿಸಿದ ಕವಯತ್ರಿಯರ ಕಳಕಳಿ ಪ್ರಶಂಸಾರ್ಹ’ ಎಂದು ಶ್ಲಾಘಿಸಿದ್ದಾರೆ. ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಅವರ ಕೃತಿಗೆ ಬರೆದ ಬೆನ್ನುಡಿಯಲ್ಲಿ ‘ಹೈಟೆಕ್ ಯುಗದ ಇಂದಿನ ಕಾಲಘಟ್ಟದಲ್ಲಿ ಸಾಂಸ್ಕೃತಿಕ ಪ್ರಪಂಚಕ್ಕೂ ದಾಳಿ ಇಡುತ್ತಿರುವ ಜಾಗತೀಕರಣದ ಕಪ್ಪ ಛಾಯೆಯಲ್ಲಿ ...ತಾಳ್ಮೆ ಮತ್ತು ಪರಿಶ್ರಮಗಳ ಮಿಶ್ರ ಪಾಕವಾಗಿ ಇಲ್ಲಿಯ ಕವಿತೆಗಳಿವೆ. ಇವು ಸಾಂಸ್ಕೃತಿಕ ಚರಿತ್ರೆಯನ್ನು ದಾಖಲಿಸುತ್ತವೆ. ಸಾಂಪ್ರದಾಯಿಕ ಹಾಡುಗಳಲ್ಲೂ ಗುಣಾತ್ಮಕ ವಿಶೇಷತೆಗಳನ್ನು ಕವಯತ್ರಿ ಗುರುತಿಸಿದ್ದಾರೆ. ಸಮಾಜ ಕಳಕಳಿಯ ಸಾಂಪ್ರದಾಯಿಕ ಹಾಡುಗಳನ್ನು ಸಂಗ್ರಹಿಸಿದ್ದು ಕೃತಿಯ ವೈಶಿಷ್ಟ್ಯ’ ಎಂದು ಪ್ರಶಂಸಿಸಿದ್ದಾರೆ. ಜಾನಪದ ಹಾಗೂ ಸಾಂಪ್ರದಾಯಿಕ ಹಾಡುಗಳತ್ತ ಆಕರ್ಷಿತಳಾದ ತಮ್ಮಲ್ಲಿ ಸುಮಾರು 70 ಹಾಡುಗಳು ನೆನಪಿಗೆ ಬಂದಿದ್ದರೂ ಅವು ಪೂರ್ಣವಾಗಿ ಅಲ್ಲ; ಆದ್ದರಿಂದ, ಜನಪದೀಯ ಹಾಡುಗಾರರನ್ನು ಸಂಪರ್ಕಿಸಿ ಹಾಡುಗಳನ್ನು ಸಂಗ್ರಹಿಸಿದ್ದರ ಫಲವೇ ಈ ಕೃತಿ ಎಂದು ಸ್ವತಃ ಲೇಖಕಿ ಶೋಭಾದೇವಿ ಚೆಕ್ಕಿ ಹೇಳಿಕೊಂಡಿದ್ದಾರೆ.
©2024 Book Brahma Private Limited.