ಡಿ.ಎನ್. ಅಕ್ಕಿ ಎಂದು ಸಾಹಿತ್ಯಲೋಕದಲ್ಲಿ ಚಿರಪರಿಚಿತವಾಗಿರುವ ದೇವೇಂದ್ರ ನಾಭಿರಾಜ ಅಕ್ಕಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಗೋಗಿ ಗ್ರಾಮದವರು.
ಗೋಗಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಶಿಕ್ಷಕರಾಗಿ ನಿವೃತ್ತರಾಗಿದ್ದು, ಅವಗಣನೆಗೆ ಒಳಗಾಗಿದ್ದ ಹೈದರಾಬಾದ್ ಕರ್ನಾಟಕ ಪ್ರದೇಶದ ಐತಿಹಾಸಿಕ ಸ್ಮಾರಕಗಳ ಬಗ್ಗೆ ಅವರು ಮಾಡಿದ ಕೆಲಸ ಅನನ್ಯ.
ಕವಿತೆಯ ಮೂಲಕ ಸಾಹಿತ್ಯಲೋಕ ಪ್ರವೇಶಿಸಿದ ಅಕ್ಕಿ ಅವರ ಬಹುತೇಕ ನಾಟಕಗಳು ಬಾನುಲಿಯಲ್ಲಿ ಪ್ರಸಾರಗೊಂಡಿವೆ. ಮೂಡಬಿದಿರೆ ಜೈನಮಠದಿಂದ ಸ್ವಸ್ತಿ ಶ್ರೀ ಭಟ್ಟಾರಕ ಪುರಸ್ಕಾರ ಪ್ರಶಸ್ತಿ, ಹೊಂಬುಜದ ಜೈನ್ ಮಠದಿಂದ ಸಿದ್ದಾಂತ ಕೀರ್ತಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದಲೂ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಸಂಶೋಧನೆ, ಕವನ ಸಂಕಲನ, ವ್ಯಕ್ತಿಚಿತ್ರ ಸೇರಿದಂತೆ ಸುಮಾರು 24ಕ್ಕೂ ಅಧಿಕ ಕೃತಿಗಳು, ನಾಡಿನುದ್ದಕ್ಕೂ 31ಕ್ಕೂ ಅಧಿಕ ಪ್ರಶಸ್ತಿ-ಪುರಸ್ಕಾರಗಳು ಸಂದಿವೆ.