ಹಾಡು ಕಲಿಸಿದ ಹರ

Author : ಸುರೇಶ್ ನಾಗಲಮಡಿಕೆ

Pages 330

₹ 300.00




Year of Publication: 2020
Published by: ದೀಪಾಂಕರ ಪುಸ್ತಕ
Address: ಸುರೇಶ ನಾಗಲಮಡಿಕೆ S/o ನಾಗರಾಜಪ್ಪ ನಾಗಲಮಡಿಕೆ, ನಾಗಲಮಡಿಕೆ ಹೋಬಳಿ, ಪಾವಗಡ ತಾಲೂಕು, ತುಮಕೂರು
Phone: 9886279441

Synopsys

ಹಾಡು ಕಲಿಸಿದ ಹರ-ಈ ಕೃತಿಯು ಜಾನಪದ ಮಹಾಕಾವ್ಯಗಳು: ಸಂಸ್ಕೃತಿ ಕಥನಗಳನ್ನು ಒಳಗೊಂಡಿದೆ. ಸುರೇಶ ನಾಗಲಮಡಿಕೆ ಅವರು ತೌಲನಿಕವಾಗಿ ಅಧ್ಯಯನ ಮಾಡಿದ್ದಾರೆ. ಈ ಜನಪದ ಅಧ್ಯಯನವು ಐದು ಜನಪದ ಮಹಾಕಾವ್ಯಗಳನ್ನು ಒಳಗೊಂಡಿದ್ದು, ಅನೇಕ ಇನ್ನಿತರ ಮೌಖಿಕ ಕಾವ್ಯಗಳು ಸೇರ್ಪಡೆಗೊಂಡಿರುವುದು ಮತ್ತೊಂದು ವಿಶೇಷ. ‘ಮಂಟೇಸ್ವಾಮಿ' ಹಾಗೂ 'ಮಾದಪ್ಪ'ರ ಕಾವ್ಯಗಳು ಮತ್ತು ಅವುಗಳ ತಾತ್ವಿಕ ವಿನ್ಯಾಸಗಳ ಬಗ್ಗೆ ಕನ್ನಡದಲ್ಲಿ ಗಂಭೀರ ಚರ್ಚೆಗಳು ನಡೆದಿವೆ. ಆದರೆ, ಯಾವ ಚರ್ಚೆಗಳೂ ಅಂತಿಮವಲ್ಲ. ಈ ಜನಪದ ಕಾವ್ಯಗಳನ್ನು ಕುರಿತು ನಡೆದ ವ್ಯಾಪಕ ಚರ್ಚೆಗಳು ಜನಾಂಗಿಕ ಮೌಖಿಕ ಕಾವ್ಯಗಳ ಬಗ್ಗೆ ಅಷ್ಟಾಗಿ ನಡೆದಿಲ್ಲ. ಹಾಗಾಗಿ, ಈ ಅಧ್ಯಯನ ಮೇಲಿನ ಎರಡೂ ಕಾವ್ಯಗಳ ಜೊತೆಯಲ್ಲಿ 'ಹಾಲುಮತ' ಮತ್ತು 'ಜುಂಜಪ್ಪ' ಕಾವ್ಯಗಳನ್ನು ಲೇಖಕರು ತಾತ್ವಿಕವಾಗಿ ಹಾಗೂ ತೌಲನಿಕವಾಗಿ ವಿವರಿಸಲು ಯತ್ನಿಸಿದ್ದಾರೆ. 

About the Author

ಸುರೇಶ್ ನಾಗಲಮಡಿಕೆ
(02 May 1981)

ಬೆಂಗಳೂರಿನ ವಿವೇಕಾನಂದ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಸುರೇಶ್ ನಾಗಲಮಡಿಕೆ ಅವರು ಹುಟ್ಟಿದ್ದು ಆಂಧ್ರದ ಗಡಿಭಾಗ ಪಾವಗಡದ ನಾಗಲಮಡಿಕೆಯಲ್ಲಿ. ಸದ್ಯ ಜನಪದ ಮಹಾಕಾವ್ಯಗಳ ಅಧ್ಯಯನದಲ್ಲಿ ತೊಡಗಿಸಿಕೊಡಿರುವ ಇವರು  ಮುತ್ತು ಬಂದಿದೆ ಕೇರಿಗೆ, ತಕ್ಕ ಮಣ್ಣಿನ ತೇವಕ್ಕಾಗಿ, ಕನಕ ಸಾಹಿತ್ಯ ಮತ್ತು ಲೋಕದೃಷ್ಟಿ, ಕಾಣ್ಕೆ ಕಣ್ಕಟ್ಟು, ಬಯಲಾಗುವ ಪರಿ, ಉಳಿದದ್ದು ಆಕಾಶ, ಹಲವು ಬಣ್ಣದ ಹಗ್ಗ, ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ವಿಮರ್ಶೆಗಳಲ್ಲಿಯೇ ಹೆಚ್ಚಿನ ಆಸಕ್ತಿಯನ್ನು ಹೊಂದಿದ ಸುರೇಶ್ ಅವರ ಹೇಚ್ಚಿನ ಪುಸ್ತಕಗಳು ಗದ್ಯಕ್ಕೇ ಸೇರಿವೆ. ...

READ MORE

Conversation

Reviews

ಚರ್ಚೆಗೊಳಪಡಬಲ್ಲ ಸಂಶೋಧನಾ ಕೃತಿ ‘ಹಾಡು ಕಲಿಸಿದ ಹರ’: ಬುಕ್‌ ಬ್ರಹ್ಮ 

ಜನಪದ ಅಧ್ಯಯನಕ್ಕೆ ಆಕರ ಗ್ರಂಥ

‘ಮುತ್ತು ಬಂದಿದೆ ಕೇರಿಗೆ’, ‘ತಕ್ಕ ಮಣ್ಣಿನ ತೇವಕ್ಕಾಗಿ’, ‘ಬಯಲಾಗುವ ಪರಿ’ ಮೊದಲಾದ ಕೃತಿಗಳ ಮೂಲಕ ಓದುಗರ ಮನ ಗೆದ್ದಿರುವ ಲೇಖಕ ಸುರೇಶ್‌ ನಾಗಲಮಡಿಕೆ ಅವರಿಗೆ ಈಗ ಜನಪದ ಮಹಾಕಾವ್ಯಗಳ ಕುರಿತು ಧ್ಯಾನ. ಅವರ ಆ ಧ್ಯಾನದ ಫಲವೇ ‘ಹಾಡು ಕಲಿಸಿದ ಹರ’. ಜನಪದವನ್ನು ಹತ್ತು–ಹಲವು ಆಯಾಮಗಳಿಂದ ನೋಡುವ ಪ್ರಯತ್ನವನ್ನು ಕೃತಿಯಲ್ಲಿ ಕಾಣಬಹುದು. ಕವಿರಾಜಮಾರ್ಗದಿಂದ ಆರಂಭಗೊಂಡು ಆಧುಕಿನ ಕನ್ನಡ ಸಾಹಿತ್ಯದವರೆಗೆ ಜನಪದ ಬೆಳೆದುಬಂದ ದಾರಿಯ ನೋಟ ಇಲ್ಲಿದೆ.

 ಐದು ಮುಖ್ಯ ಶೀರ್ಷಿಕೆಗಳ ಅಡಿಯಲ್ಲಿ ಬರಹಗಳನ್ನು ವಿಂಗಡಣೆ ಮಾಡಲಾಗಿದ್ದು, ಅಧ್ಯಯನದ ಹಾದಿಯನ್ನು ಸಲೀಸಾಗಿಸಿದೆ. ಕನ್ನಡ ಸಾಹಿತ್ಯ ಚರಿತ್ರೆಯನ್ನು ಜನಪದದ ನೆಲೆಗಟ್ಟಿನಲ್ಲಿ ನೋಡುವ ಪ್ರಯತ್ನ ಅಪೂರ್ವವಾದುದು. ಜನಪದ ಮಹಾಕಾವ್ಯಗಳ ಸಾಂಸ್ಕೃತಿಕ ನೆಲೆಗಳನ್ನು ಕೃತಿಯಲ್ಲಿ ತುಂಬಾ ದೀರ್ಘವಾಗಿ ಚರ್ಚಿಸಲಾಗಿದೆ. ಆದಿಮರು, ಸಿದ್ಧರು, ನಾಥರು, ಮಂಟೇಸ್ವಾಮಿ, ಮಾದಪ್ಪ, ಜುಂಜಪ್ಪ ಎಲ್ಲರೂ ಇಲ್ಲಿ ಸಂಗಮಿಸಿದ್ದಾರೆ.

ಜನಪದ ಕಾವ್ಯಗಳು ತಾವು ಎಂದಿಗೂ ವೈದಿಕ–ಅವೈದಿಕ ಎಂದು ಕರೆದುಕೊಂಡಿಲ್ಲ. ಆದರೆ, ಅವುಗಳ ಜೀವನ ಮೀಮಾಂಸೆಯ ಒಳಗಡೆ ಅವೈದಿಕ ನಿಲುವುಗಳು ಕಾಣಬರುತ್ತವೆ. ಈ ಕುರಿತ ಒಳನೋಟಗಳು ಕೃತಿಯಲ್ಲಿ ಬೇಕಾದಷ್ಟು ಸಿಕ್ಕುತ್ತವೆ. ಬೆನ್ನುಡಿಯಲ್ಲಿ ಎಸ್‌.ಎಫ್‌. ಯೋಹಪ್ಪನವರ್‌ ಅವರು ಬರೆಯುತ್ತಾರೆ: ‘ಸದಾ ಶಿಷ್ಟ ಸಾಹಿತ್ಯದ ಆಕ್ರಮಣಕ್ಕೆ ಗುರಿಯಾಗುತ್ತಾ ಬಂದಿರುವ ಜನಪದ ಸಾಹಿತ್ಯ ಈ ಕೃತಿಯಲ್ಲಿ ನಿಟ್ಟುಸಿರು ಬಿಟ್ಟು, ಮೊದಲ ಬಾರಿಗೆ ಎನ್ನುವಂತೆ ಸಮಾಧಾನದಲ್ಲಿ ಮೈ ಸಡಿಲಿಸಿದೆ.’ ಜನಪದದ ಅಧ್ಯಯನ ಆಸಕ್ತರಿಗೆ ಇದೊಂದು ಆಕರ ಗ್ರಂಥವೇ ಆಗಿದೆ. 

ಕೃಪೆ : ಪ್ರಜಾವಾಣಿ (2020 ಆಗಸ್ಟ್ 30)

.............................................................

ಹಾಡು ಕಲಿಸಿದ ಹರ ಕೃತಿಯ ವಿಮರ್ಶೆ

ಈ ಹೊತ್ತಿಗೆಯು ಮಂಟೇಸ್ವಾಮಿ, ಮಾದಪ್ಪ, ಜುಂಜಪ್ಪ, ಹಾಲುಮತ, ಜನಪದ ಮಹಾಭಾರತ ಮೊದಲಾದ ಐದು ಜನಪದ ಮಹಾಕಾವ್ಯಗಳನ್ನು ನೆಲೆಯಾಗಿಸಿಕೊಂಡು, ಐದು ಪ್ರಮುಖ ಅಧ್ಯಾಯಗಳಲ್ಲಿ ಸಂಸ್ಕೃತಿ ಸ೦ಕಥನವನ್ನು ಕಟ್ಟುವ ಮಹತ್ವದ ಅಧ್ಯಯನವಾಗಿದೆ. ಈ ಪುಸ್ತಕದ ಎಲ್ಲಾ ಸಂಗತಿಗಳನ್ನು ಕುರಿತು ಈ ಚಿಕ್ಕ ಬರಹದಲ್ಲಿ ಚರ್ಚಿಸುವುದು ದುಸ್ತರವೇ ಸರಿ. ಹಾಗಾಗಿ ಇದರ ಒಟ್ಟು ಆಶಯವನ್ನು ತಾತ್ವಿಕವಾಗಿ ವಿವರಿಸಲು ಯತ್ನಿಸುತ್ತೇನೆ. ಅಂದರೆ ಈ ಅಧ್ಯಯನದ ಒಟ್ಟು ತಾತ್ವಿಕತೆ ಏನು? ಇದನ್ನು ಹೇಗೆ ಇಲ್ಲಿ ಮಂಡಿಸಲಾಗಿದೆ ಮತ್ತು ಇಂತಹ ವೈಚಾರಿಕ ಚೌಕಟ್ಟನ್ನು ನೆಲೆಗೊಳಿಸುವಲ್ಲಿ

ಅನುಸರಿಸಿದ ವಿಧಿ-ವಿಧಾನಗಳು ಎಂತಹವು? ಈ ಅಧ್ಯಯನದ ವಿಶ್ಲೇಷಣೆಗೆ ಬಳಸಿಕೊಂಡ ಆಕರಗಳು ಹಾಗೂ ಪರಿಕರಗಳು ಯಾವವು? ಎಂಬಿತ್ಯಾದಿ ನೆಲೆಗಳನ್ನು ಸ್ಕೂಲವಾಗಿ ಚರ್ಚಿಸುವ ಪ್ರಯತ್ನವನ್ನು ಮಾಡಲಾಗಿದೆ. ಕ್ಷೇತ್ರಕಾರ್ಯ ಮತ್ತು ವ್ಯಾಪಕವಾದ ಅಧ್ಯಯನಗಳ ಪರಿಣಾಮವಾಗಿ ಈ ಸಂಶೋಧನೆಯನ್ನು ನಾಗಲಮಡಿಕೆ ಅವರು ಕೈಗೊಂಡಿದ್ದಾರೆ. ಯುವತಲೆಮಾರಿನ ಈಗಿನ ಬಹುತೇಕ ವಿದ್ವಾಂಸರು ತುಳಿಯದ ದಾರಿಯನ್ನು ಈ ಲೇಖಕರು ಆಯ್ಕೆ ಮಾಡಿಕೊಂಡಿದ್ದಾರೆ. ಜನಪದ ಮಹಾಕಾವ್ಯಗಳ ಮೂಲಕ ಜ್ಞಾನಪರಂಪರೆ, ಸಾಹಿತ್ಯ ಮೀಮಾಂಸೆ ಮತ್ತು ಸಾಹಿತ್ಯ ಚರಿತ್ರೆಯ ವಿಭಿನ್ನ ಮಾದರಿಗಳನ್ನು ಶೋಧಿಸುವ ಗುರಿಯನ್ನು ಇಲ್ಲಿ ಕಾಣುತ್ತೇವೆ. ಯಾವುದೇ ಅಧ್ಯಯನಶಿಸ್ತು, ತತ್ವಶಾಸ್ತ್ರ ಹಾಗೂ ದರ್ಶನಶಾಸ್ತ್ರಗಳ ಮೂಲಭೂತ ಗುರಿಯೇ ಸಮೂಹಗಳ ಬದುಕಿನ ಅಸ್ಮಿತೆ, ಅಸ್ತಿತ್ವ, ಜ್ಞಾನಮೀಮಾಂಸೆಗಳನ್ನು ಕುರಿತ ಪ್ರಶ್ನೆಗಳನ್ನು ಮುಂಚೂಣೆಗೆ ತರುವುದಾಗಿರುತ್ತದೆ. ಆದರೆ ಸಾಂಸ್ಕೃತಿಕ ರಾಜಕಾರಣದಿಂದ ಜನಬದುಕಿನಲ್ಲಿ ಹಾಸುಹೊಕ್ಕಾಗಿರುವ ಜನಪದ ಕಥನ, ಪುರಾಣ ಮತ್ತು ಮಹಾಕಾವ್ಯಗಳು ಅಲಕ್ಷ ಕ್ಕೆ ಒಳಗಾಗಿರುತ್ತವೆ. ಇಂತಹ ಅಲಕ್ಷಕ್ಕೆ ವಸಾಹತುಶಾಹಿ, ಮಾರ್ಗ ಪರಂಪರೆಗಳು ಕಾರಣವಾಗಿರುವುದನ್ನು ಈ ಪುಸ್ತಕದ ಚರ್ಚೆಯುದ್ದಕ್ಕೂ ನೋಡುತ್ತೇವೆ. ಧರ್ಮದ ಪ್ರಶ್ನೆಗಳು, ಭಾಷೆಯ ಪ್ರಶ್ನೆಗಳು ಹೇಗೆ ಒಂದು ಪ್ರದೇಶ, ಸಮೂಹ ಮತ್ತು ಜನಾಂಗಗಳ ಕಥನಗಳನ್ನು ರೂಪಿಸುವಲ್ಲಿ ಮಹತ್ವವನ್ನು ಪಡೆದಿವೆ ಎನ್ನುವುದನ್ನು ಅತ್ಯಂತ ಖಚಿತವಾಗಿ ಇಲ್ಲಿ ವಿಶ್ಲೇಷಿಸಲಾಗಿದೆ. ಶಿಷ್ಟ ಸಾಹಿತ್ಯ, ಜನಪದ ಸಾಹಿತ್ಯ ಮೌಖಿಕ ಸಾಹಿತ್ಯ ಎಂಬಿತ್ಯಾದಿ ವೈರುಧ್ಯಗಳನ್ನು ಪ್ರಶ್ನಿಸುವುದು ಮಾತ್ರವಲ್ಲದೇ, ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿದ ನಿಖರವಾದ ಮಾಹಿತಿಗಳ ಮೂಲಕ ಸಾಹಿತ್ಯ ಚರಿತ್ರೆಯ ಭಿನ್ನ ಮಾದರಿಯನ್ನು ನೆಲೆಗೊಳಿಸುವ ಇರಾದೆಯನ್ನು ಇಲ್ಲಿ ಅತ್ಯಂತ ಸ್ಪಷ್ಟವಾಗಿ ಗುರುತಿಸಬಹುದು.

ಇವತ್ತು ಸಂಸ್ಕೃತಿಯ ಅಧ್ಯಯನದ ವ್ಯಾಪ್ತಿ ಅತ್ಯಂತ ವಿಶಾಲವಾಗಿ ಹರಡಿಕೊಂಡಿದೆ. ಒಂದು ಕಾಲದಲ್ಲಿ ಸಂಸ್ಕೃತಿ ಅಧ್ಯಯನ ಎನ್ನುವುದು ಮಾಹಿತಿಗಳ ವರ್ಣಾತ್ಮಕ ವಿವರಣೆ ಮಾತ್ರವೇ ಆಗಿತ್ತು. ಒಂದು ಆಲೋಚನಾ ಕ್ರಮವನ್ನು ಕಟ್ಟುವ ಇಲ್ಲವೇ ಸಂಕಥವನ್ನಾಗಿ ಅರಿಯುವ ಬದಲಾಗಿ ಕೇವಲ ಮಾಹಿತಿಯನ್ನು ಕ್ರೋಢೀಕರಿಸಿವುದಾಗಿತ್ತು. ಸಂಸ್ಕೃತಿ ಓದಿನ ಇಂತಹ ಮಿತಿಗಳನ್ನು ಮೀರುವ ಮಾದರಿ ಪಲ್ಲಟವನ್ನು ಮತ್ತು ನುಡಿಗಟ್ಟುಗಳನ್ನು ಈ ಪುಸ್ತಕದಲ್ಲಿ ಮನಗಾಣುತ್ತೇವೆ. ಈಗಾಗಲೇ ನೆಲೆಗೊಂಡಿರುವ ಜ್ಞಾನಪರಂಪರೆಗಳನ್ನು ಒಡೆದು ಕಟ್ಟುವಲ್ಲಿ ಜನಪದ ಕಥನಗಳು ಹೇಗೆ ಮಹತ್ವವನ್ನು ಪಡೆಯುತ್ತವೆ ಹಾಗೂ ಸಂಸ್ಕೃತಿಯೊಂದರ ಚಹರೆಗಳಾಗಿ ಇವು ಹೇಗೆ ಮೈದಾಳುತ್ತವೆ ಎನ್ನುವುದನ್ನು ಲೇಖಕರು ತಮ್ಮ ಖಚಿತ ವಿಶ್ಲೇಷಣೆಗಳ ಮೂಲಕ ಮಂಡಿಸಿದ್ದಾರೆ.

ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಹುದುಗಿದ್ದ ಸಾಂಸ್ಕೃತಿಕ ರಾಜಕಾರಣವನ್ನು ಎದುರಾಗಲು ಬೇಕಾದ ತಾತ್ವಿಕ ಬದ್ಧತೆ ಹಾಗೂ ಸಂಶೋಧನಾ ಪ್ರಾಮಾಣಿಕತೆಯನ್ನು ಲೇಖಕರಲ್ಲಿ ಕಾಣಬಹುದಾಗಿದೆ. ಶಂಬಾ, ಡಿ.ಎಲ್.ಎನ್, ಡಿ.ವಿ.ಜಿ, ಕಲಬುರ್ಗಿ, ಚಿಮೂ ಶಟ್ಟರ್, ಎ.ಕೆ ರಾಮಾನುಜನ್ ಮತ್ತು ಡಿ.ಆರ್ ನಾಗರಾಜ್ ಮೊದಲಾದವರು ರೂಪಿಸಿದ ಮಾದರಿಗಳನ್ನು ನೇರವಾಗಿ ಅನುಸರಿಸದೇ, ತನ್ನದೇ ಅಧ್ಯಯನ ಮಾದರಿಯನ್ನು ರೂಪಿಸಿಕೊಳ್ಳುವ ತುಡಿತವು ಸುರೇಶ್ ಅವರಲ್ಲಿ ಗೋಚರಿಸುತ್ತದೆ. ಅಂದರೆ ಸಾಹಿತ್ಯ ಚರಿತ್ರೆಯನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಜನಪದ ಕಾವ್ಯಗಳ ಮಹತ್ವವನ್ನು ಗುರುತಿಸುವಲ್ಲಿ ಇಂದಿಗೂ ಎದುರಾಗುವ ವಿದ್ರೋಹತನಗಳನ್ನು ನೋಡಿದರೆ, ನಮ್ಮ ಹಿರಿಯರು ರೂಪಿಸಿದ ಮಾದರಿಗಳನ್ನು ಪಲ್ಲಟಗೊಳಿಸುವ ಜರೂರಿತ್ತು ಅನ್ನುವುದನ್ನು ಇಲ್ಲಿ ಗುರುತಿಸಬಹುದು. ಅಂದರೆ ಒಂದು ಪ್ರಾದೇಶಿಕ ಭಾಷೆಯ ಚರಿತ್ರೆ ಮತ್ತು ಸಾಹಿತ್ಯದ ಚರಿತ್ರೆಯ ಕಟ್ಟೋಣದಲ್ಲಿ ಎದುರಾಗುವ ಸಾಂಸ್ಕೃತಿಕ ಬಿಕ್ಕಟ್ಟುಗಳು ಹಾಗೂ ಪರಿಣಾಮಗಳು ಎಂತಹವು, ಇವುಗಳನ್ನು ವಿಶ್ಲೇಷಿಸಲು ನಾವು ರೂಪಿಸಿಕೊಳ್ಳಬೇಕಾದ ಪರಿಕರಗಳ ಸ್ವರೂಪ ಹೇಗಿರಬೇಕು ಮತ್ತು ಆಕರಗಳನ್ನು ಬಳಸಿಕೊಳ್ಳುವ ವಿನ್ಯಾಸಗಳು ಯಾವವು ಎಂಬುದನ್ನು ಅತ್ಯಂತ ನಿಖರವಾಗಿ ಚರ್ಚಿಸಲಾಗಿದೆ. ಕವಿರಾಜಮಾರ್ಗದಂತಹ ಕಾವ್ಯದಲ್ಲಿಯೂ ಜನಪದ ಆಯಾಮಗಳು ನೆಲೆಗೊಂಡಿರುವುದನ್ನು ಇಲ್ಲಿ ಸರಿಯಾಗಿಯೇ ಗುರುತಿಸಲಾಗಿದೆ.

ಗತವನ್ನು ಕುರಿತು ಚರ್ಚಿಸುವಾಗ ಇಲ್ಲಿವೇ ಸಮೂಹಗಳ ಮೌಖಿಕ ಕಥನಗಳನ್ನು ವಿಶ್ಲೇಷಿಸುವ ಪ್ರಕ್ರಿಯೆಯಲ್ಲಿ ವರ್ತಮಾನಗೊಳಿಸುವ ಕ್ರಿಯೆ ಅತ್ಯಂತ ಮಹತ್ವದ್ದಾಗಿರುತ್ತದೆ. ಮೌಖಿಕತೆ ಮತ್ತು ಮೌಖಿಕ ಚರಿತ್ರೆಯಲ್ಲಿ ಜನಪದರ ಭಾಷೆ ಹಾಗೂ ಲೋಕದೃಷ್ಟಿಗಳು ಮಹತ್ವದ ಆಕರಗಳಾಗಿವೆ. ಕೆಲವು ಚಾರಿತ್ರಿಕ ಹಾಗೂ ಸಾಹಿತ್ಯಕ ಗ್ರಹಿಕೆಗಳನ್ನು ಒಪ್ಪಿಯೂ ಹಲವು ಮಹತ್ವದ ಪ್ರಶ್ನೆಗಳನ್ನು ಇಲ್ಲಿ ಎತ್ತಲಾಗಿದೆ. ಸಾಹಿತ್ಯ ಚರಿತ್ರೆ ಇಲ್ಲವೇ ಕವಿ ಚರಿತ್ರೆಯನ್ನು ಕಟ್ಟುವಲ್ಲಿ ನಿರ್ದಿಷ್ಟ ತಾತ್ವಿಕತೆ-ವಿಧಿವಿಧಾನಗಳನ್ನು ಪ್ರಶ್ನಿಸುವ ವಿನ್ಯಾಸಗಳೂ ಸರಿಯಾಗಿಯೇ ಇವೆ. ಚರಿತ್ರೆ ಎನ್ನುವುದು ಸಂಸ್ಕೃತಿಗಳ ವಿಕಾಸ ಪಥವೇ ಹೊರತು ಅದೊಂದು ನಿರ್ಮಿತಿಯಲ್ಲ ಎಂಬ ಅಭಿಪ್ರಾಯ ಬಲವಾಗಿಯೇ ಮಂಡಿತವಾಗಿದೆ. ಅಂದರೆ ಚರಿತ್ರೆಯ ಕಟ್ಟೋಣದಲ್ಲಿ ಏರ್ಪಟ್ಟಿರುವ ಅಸಮಾನತೆಯ ಬಗೆಗಿನ ವಿಶ್ಲೇಷಣೆಗಳು ಅತ್ಯಂತ ಪರಿಣಾಮಕಾರಿಯಾಗಿ ಪ್ರಕಟಗೊಂಡಿವೆ. ಸಮೂಹಗಳ ಬದುಕಿನ ಸಾಹಿತ್ಯ, ಚರಿತ್ರೆ, ಪುರಾಣ, ಸಂಸ್ಕೃತಿ ಕುರಿತು ಮಾತಾಡುವಾಗ ಅವುಗಳಿಗೆ ಖಚಿತ ತಾತ್ವಿಕತೆ ಮತ್ತು ವೈಚಾರಿಕ ಚೌಕಟ್ಟುಗಳನ್ನು ರೂಪಿಸುವುದು ಎಷ್ಟು ಅವಶ್ಯವೆಂಬುದನ್ನು ಈ ಕೃತಿ ಮನವರಿಕೆ ಮಾಡುತ್ತದೆ. ಕೇವಲ ವಿವರಗಳನ್ನು ನಿರೂಪಿಸುತ್ತ ಹೋಗುವುದರಿಂದ ಚರಿತ್ರೆಯ ಅಪಕಲ್ಪನೆಗಳನ್ನು ನಿರ್ನಾಮಮಾಡುವ ಬದಲಾಗಿ ಅವುಗಳನ್ನು ಮುಂದುವರೆಸುವ ಅಪಾಯವೇ ಹೆಚ್ಚಾಗಿರುತ್ತದೆ. ಇಂತಹ ಅಪಾಯಗಳನ್ನು ಮುಖಾನುಖಿಯಾಗುವ ಮುಖ್ಯ ಇರಾದೆಯೇ ಈ ಪುಸ್ತಕದ ಮೊದಲ ಆದ್ಯತೆಯಾಗಿದೆ. ಆದರೆ ಇಲ್ಲಿಯ ವಿಶ್ಲೇಷಣೆಗಳಿಗೆ ಬಳಸಿರುವ ಮೆಥಡಾಲಜಿಯನ್ನು ಇನ್ನಷ್ಟು ತಾತ್ವಿಕವಾಗಿ ಪಕ್ವಗೊಳಿಸುವ ಅಗತ್ಯವಿದೆ.

 (ಕೃಪೆ; ಹೊಸ ಮನುಷ್ಯ ಫೆಬ್ರವರಿ 2021, ಬರಹ- ಮೇಟಿ ಮಲ್ಲಿಕಾರ್ಜುನ)

Related Books