ವಿನಾಯಕ ರಾ. ಕಮತದ ಅವರ ಮಕ್ಕಳ ನಾಟಕಗಳ ಸಂಗ್ರಹ ಬೆಳ್ಳಕ್ಕಿ ಕೊಡೆ. ಮಕ್ಕಳ ಆಸಕ್ತಿಗಳು ಆಧುನಿಕಗೊಳ್ಳುತ್ತಿರುವ ಈ ಕಾಲದಲ್ಲಿ ಪರಿಸರ ಪ್ರಜ್ಞೆ, ಪ್ರಾಣಿಗಳ ರಕ್ಷಣೆ, ಶಿಕ್ಷಣದ ಮಹತ್ವ, ಪೂರ್ವಜರ ಆಹಾರ ಪದ್ದತಿ ಮತ್ತು ಮೇಲು ಕೀಳಿನ ತಾರತಮ್ಯದ ಭಾವಗಳನ್ನು ಪಕ್ಷಿಗಳ ಮೂಲಕ ತಾರ್ಕಿಕವಾಗಿ ಬಗೆ ಹರಿಸಲು ೫ ನಾಟಕಗಳ ಮೂಲಕ ಲೇಖಕರು ಪ್ರಯತ್ನಿಸಿದ್ದಾರೆ. "ಬೆಳ್ಳಕ್ಕಿ ಕೊಡೆ" ಪಕ್ಷಿಗಳ ಸಂಭಾಷಣೆಯ ಮೂಲಕ ಮನುಷ್ಯನ ಅಹಂಕಾರಕ್ಕೆ ಸವಾಲು ಹಾಕಿದರೆ, "ನಿಧಿ" ಎಂಬ ನಾಟಕ ಬಡತನದಲ್ಲಿ ಕಲಿಯ ಬರುವ ಮಕ್ಕಳ ಮೂಲಕ ಶಿಕ್ಷಣವೇ ನಿಜವಾದ ನಿಧಿ ಎಂದು ಪ್ರತಿಪಾದಿಸಿದರೆ, "ಮಂಗಗಳು" ನಾಟಕ ಮನುಷ್ಯನ ಅಸ್ವಾಭಾವಿಕ ಪ್ರಗತಿಯ ಭ್ರಮೆಗಳನ್ನು ಪ್ರಶ್ನಿಸುತ್ತದೆ. "ಮಿಸ್ ಮಜ್ಜಿಗೆ" ಅನಾರೋಗ್ಯಕರ ಪೇಯಗಳ ಹವ್ಯಾಸವನ್ನು ಪ್ರಶ್ನಿಸುತ್ತದೆ. "ಕಾಗೆ ರಾಗ" ನಾಟಕ ಕಾಗೆ ಕೋಗಿಲೆಗಳ ವಾಗ್ವಾದಗಳ ಮೂಲಕ ಮೇಲು ಕೀಳು ಭಾವಗಳ ಅಪ್ರಸ್ತುತೆಯ ಅಗತ್ಯವನ್ನು ಪ್ರತಿಪಾದಿಸುತ್ತದೆ.ಹೀಗೆ ವಿಭಿನ್ನ ವಸ್ತುಗಳನ್ನೊಳಗೊಂಡ ಈ ಸಂಕಲನದ ನಾಟಕಗಳು ಉತ್ತರ ಕರ್ನಾಟಕದ ಆಡು ಭಾಷೆ ಚುರುಕಾದ ಚಿಕ್ಕ ಚಿಕ್ಕ ಸಂಭಾಷಣೆಗಳ ಮೂಲಕ ಗಮನ ಸೆಳೆಯತ್ತವೆ ಎಂದು ಡಾ. ನಿಂಗು ಸೊಲಗಿ ಅವರು ಮುನ್ನುಡಿಯಲ್ಲಿ ಗುರುತಿಸಿರುವುದು ಸೂಕ್ತವಾಗಿದೆ. ಪ್ರಸ್ತುತ ಸಂಕಲನಕ್ಕೆ ಶ್ರೀ ಜಿ.ಬಿ. ಹೊಂಬಳ ಮಕ್ಕಳ ಸಾಹಿತ್ಯ ರಾಜ್ಯಪ್ರಶಸ್ತಿ 2018 ಹಾಗೂ ಬಾಲವಿಕಾಸ ಅಕಾಡೆಮಿಯಿಂದ 2018ನೇ ಸಾಲಿನ "ಮಕ್ಕಳ ಚಂದಿರ" ಪ್ರಶಸ್ತಿ ದೊರಕಿದ್ದು ಬೆಳ್ಳಕ್ಕಿ ಕೊಡೆ ನಿಧಿ ನಾಟಕಗಳು ಅನೇಕ ಪ್ರಯೋಗಗಳನ್ನು ಕಂಡಿವೆ. ಶಾಲಾ ಕಾಲೇಜಿನಲ್ಲಿ ಪ್ರಯೋಗಿಸಲು ಉಪಯುಕ್ತವಾದ ನಾಟಕಗಳ ಸಂಕಲನವಿದಾಗಿದೆ. ಲೇಖಕರೇ ಮುಖ ಪುಟ ವಿನ್ಯಾಸ ಮಾಡಿದ್ದಾರೆ.
©2024 Book Brahma Private Limited.