ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ ವಿದ್ವಾಂಸರಾದ ಚಂದ್ರಶೇಖರ ಕಂಬಾರರು ಜನಿಸಿದ್ದು 1937 ಜನವರಿ 2 ರಂದು, ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ. ಅವರ ವಿದ್ಯಾಬ್ಯಾಸ ಗೋಕಾಕ್, ಬೆಳಗಾವಿ ಮತ್ತು ಧಾರವಾಡದಲ್ಲಿ ನಡೆಯಿತು. ಗೋಕಾಕ ಮತ್ತು ಬೆಳಗಾವಿಯ ಬ್ರಿಟಿಷರ ಭಯದ ನೆರಳು ಆವರಿಸಿದ್ದ ಪರಿಸರದಿಂದ ಲೇಖಕನಾಗಿ ಮೈಪಡೆದ ಕಂಬಾರರ ಬಾಲ್ಯದ ಆತಂಕಗಳು ಅವರ ಕೃತಿಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. ಉನ್ನತ ಶಿಕ್ಷಣಕ್ಕಾಗಿ ಧಾರವಾಡಕ್ಕೆ ಬಂದು ಎಂ.ಎ ಮತ್ತು ಪಿ.ಎಚ್.ಡಿ ಪದವಿಗಳನ್ನು ಪಡೆದರು. ಅಮೆರಿಕಾದ ಚಿಕಾಗೋ ವಿಶ್ವವಿದ್ಯಾಲಯದಲ್ಲಿ (1968-69), ಬೆಂಗಳೂರು ವಿಶ್ವವಿದ್ಯಾಲಯದಲ್ಲಿ (1971-1991) ಅಧ್ಯಾಪಕರಾಗಿ, ಪ್ರವಾಚಕರಾಗಿ ಸೇವೆ ಸಲ್ಲಿಸಿದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೊಟ್ಟಮೊದಲ ಕುಲಪತಿ (1992-1998) ಗಳಾಗಿ ಕಾರ್ಯ ನಿರ್ವಹಿಸಿದರು.
ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ, ದೆಹಲಿಯ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ’ ಶಾಲೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಇಪ್ಪತ್ತೈದು ನಾಟಕಗಳು, ಹತ್ತಕ್ಕೂ ಹೆಚ್ಚು ಕವನ ಸಂಕಲನಗಳು, ಮೂರು ಕಾದಂಬರಿಗಳು, ಹತ್ತಕ್ಕೂ ಹೆಚ್ಚು ಜಾನಪದ ಕೃತಿ ರಚಿಸಿದ್ದಾರೆ.
ಕಂಬಾರರ ಐದು ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಕಂಬಾರರ ‘ಜೋಕುಮಾರಸ್ವಾಮಿ’ ಭಾರತದ ಅತ್ಯುತ್ತಮ ನಾಟಕವೆಂದು ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿ ಪಡೆದಿದೆ. ‘ಜೈ ಸಿದ್ಧ ನಾಯಕ’ ವರ್ಧಮಾನ್ ಪ್ರಶಸ್ತಿ ಪಡೆದಿದೆ. ‘ಸಾವಿರ ನೆರಳು’ ಕವನ ಸಂಕಲನ ಕೇರಳ ರಾಜ್ಯದ ‘ಆಶಾನ್’ ಪ್ರಶಸ್ತಿ ಪಡೆಯಿತು. ಭಾರತ ನಾಟಕ ಆಕಡೆಮಿಯ ‘ಶ್ರೇಷ್ಠ ನಾಟಕಕಾರ’ ಪ್ರಶಸ್ತಿ, ಆಂಧ್ರ ಸರ್ಕಾರದ ‘ಅತ್ಯುತ್ತಮ ಕವಿ’ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಕಂಬಾರರಿಗೆ ದೊರೆತಿದೆ. ಇವೆಲ್ಲಕ್ಕೂ ಮಿಗಿಲಾಗಿ ಅವರಿಗೆ ಸಾಹಿತ್ಯದ ಮೇರುಪ್ರಶಸ್ತಿಯಾದ ‘ಜ್ಞಾನಪೀಠ’ ಸಂದಿದೆ.
ಕಂಬಾರರು ಸಿನಿಮಾದಲ್ಲಿಯೂ ಸಾಧನೆ ಮಾಡಿದ್ದಾರೆ ಕಂಬಾರರು. ಇವರು 5 ಚಲನಚಿತ್ರಗಳನ್ನೂ, 8 ಸಾಕ್ಷಗಳನ್ನೂ ತಯಾರಿಸಿದ್ದಾರೆ. ಅನೇಕ ಚಲನಚಿತ್ರಗಳಿಗೆ ಹಾಗೂ ಸಾಕ್ಷಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇವರ ‘ಕಾಡುಕುದುರೆ’ ಭಾರತೀಯ ಪನೋರಮ ಪ್ರವೇಶಿಸಿತು ಹಾಗೂ ಉತ್ತಮ ಹಿನ್ನಲೆ ಗಾಯನಕ್ಕಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆಯಿತು. 1981ರಲ್ಲಿ ‘ಸಂಗೀತಾ’ ಚಿತ್ರ ರಾಜ್ಯಪ್ರಶಸ್ತಿ ಪಡೆಯಿತು. ಸಂಭಾಷಣೆ, ನಿರ್ದೇಶನ, ಸಂಗೀತ ನಿರ್ದೇಶನ, ಉತ್ತಮ ಚಿತ್ರಕತೆ ಈ ಎಲ್ಲ ಪ್ರಶಸ್ತಿಗಳನ್ನೂ ಕಂಬಾರರು ಪಡೆದಿದ್ದಾರೆ.
ಕಂಬಾರರದು ವಿಶಿಷ್ಟ ಅಭಿವ್ಯಕ್ತಿಯಾಗಿದೆ. ಸ್ಥಳೀಯತೆಯ ಸತ್ವಗಳನ್ನು ಕೇಂದ್ರಪ್ರಜ್ಞೆಯನ್ನಾಗಿಸಿಕೊಂಡ ಅವರ ಕೃತಿ ಸಮೂಹ ಸ್ವಾತಂತ್ರ್ಯಾ ನಂತರದ ನೆಲೆಯಲ್ಲಿ ನಿಂತು ವಸಾಹತುಶಾಹಿಯ ಪ್ರಭಾವ ಪರಿಣಾಮಗಳು ನಮ್ಮ ಸಾಂಸ್ಕೃತಿಕ ಸಂದರ್ಭದಲ್ಲಿ ಬೇರೂರಿದ ನೆಲೆಗಳನ್ನು ಮುಖ್ಯಭಿತ್ತಿಯನ್ನಾಗಿಸಿಕೊಂಡು ಚರ್ಚಿಸಿತು.
ಕೃತಿಗಳು : ಹೇಳತೆನೆ ಕೇಳ, ತಕರಾರಿನವರು, ಬೆಳ್ಳಿಮೀನು,ಅಕ್ಕಕ್ಕು ಹಾಡುಗಳೇ, ಎಲ್ಲಿದೆ ಶಿವಾಪುರ, ಮತ್ತೆ ಮತ್ತೆ ಶಿವಾಪುರ(ಕವನ ಸಂಗ್ರಹಗಳು), ಋಷ್ಯಶೃಂಗ, ಜೋಕುಮಾರ ಸ್ವಾಮಿ, ಜೈಸಿದ್ದನಾಯಕ, ಕಾಡುಕುದುರೆ, ಸಿರಿಸಂಪಿಗೆ, ತುಕ್ರನ ಕನಸು, ಮಹಾಮಾಯಿ,ಶಿವರಾತ್ರಿ, ಮಹಮೂದ್ ಗವಾನ್ (ನಾಟಕಗಳು), ಕರಿಮಾಯಿ, ಸಿಂಗಾರೆವ್ವ ಮತ್ತು ಅರಮನೆ, ಶಿಖರ ಸೂರ್ಯ, ಶಿವನ ಡಂಗುರ, ಚಾಂದಬೀ ಸರಕಾರ (ಕಾದಂಬರಿಗಳು)