‘ದಿ ರೇಲ್ವೆ ಚಿಲ್ಡ್ರನ್’ ಇಂಗ್ಲೆಂಡಿನ ಮಹತ್ವದ ಲೇಖಕಿ ಎಡಿತ್ ನೆಸ್ಬಿಟ್ ಅವರ ಕೃತಿಯ ಕನ್ನಡಾನುವಾದ. ಅಭಿನವದ ನ. ರವಿಕುಮಾರ ಅವರ ಪ್ರಧಾನ ಸಂಪಾದಕತ್ವದಲ್ಲಿ ಡಾ.ಅರವಿಂದ ಪಟೇಲ್ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಗೆ ಆನಂದ ಪಾಟೀಲ ಅವರು ಬೆನ್ನುಡಿಯ ಮಾತುಗಳನ್ನು ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ “ದಿ ರೇಲ್ವೆ ಚಿಲ್ಲನ್' ಕೃತಿ ಕನ್ನಡಕ್ಕೆ ಬರುತ್ತಾ ಕನ್ನಡ ಮಕ್ಕಳ ಸಾಹಿತ್ಯದ ವಾತಾವರಣದಲ್ಲಿ ಕೆಲವೆಲ್ಲ ಅಗತ್ಯದ ಮಾತುಗಳನ್ನು ಆಡುತ್ತಿದೆ. ಮಕ್ಕಳ ಸಾಹಿತ್ಯ ಸೊಗಸಾಗಿ ಬೆಳೆದು ಮಹತ್ವದ್ದಾಗಿ ಗೋಚರಿಸಿರುವ ಇಂಗ್ಲಿಷಿನಿಂದ ಅದು ಕನ್ನಡಕ್ಕೆ ಬಂದಿದೆ, ಮಕ್ಕಳ ಸುತ್ತಲಿನ ವಾಸ್ತವಕ್ಕೆ ತೆರೆದುಕೊಂಡು ಇಂಗ್ಲಿಷಿನಲ್ಲಿ ಹೊಸ ಹೆಜ್ಜೆಗಳಿಗೆ ಕಾರಣವಾದ ಕೃತಿಯಾಗಿದೆ. ಈಗ ಕನ್ನಡದಲ್ಲಿಯೂ ಅದರ ಚಲನೆಯನ್ನು ಹಿಗ್ಗಿಸುತ್ತಿದೆ. ಮಕ್ಕಳ ಸುತ್ತಲೇ ನಿಡಿದಾಗಿ ಹರವಿಕೊಂಡಿರುವ ಒಂದು ಕಾದಂಬರಿಯಾಗಿ ಕನ್ನಡದ ಮಕ್ಕಳಿಗೆ ಹೊಸ ಓದಿನ ಸವಿಯನ್ನು ನೀಡಲಿದೆ ಎನ್ನುತ್ತಾರೆ ಆನಂದ ಪಾಟೀಲ.
ಜೊತೆಗೆ ಇಪ್ಪತ್ತನೆಯ ಶತಮಾನದ ಆರಂಭದ ಹೊತ್ತಿಗೆ ಇಂಗ್ಲಿಷ್ ವಾತಾವರಣದಲ್ಲಿ ಈ ಕೃತಿ ಹುಟ್ಟಿಕೊಂಡಿತು. ಅಂದಿನ ವಾತಾವರಣವನ್ನು ಮುಂದಿಡುತ್ತಲೇ, ಅಲ್ಲಿ ನಿಧಾನವಾಗಿ ಹರಡಿಕೊಳ್ಳ ತೊಡಗಿದ್ದ ಮಕ್ಕಳ ಸಾಹಿತ್ಯದ ವಾತಾವರಣಕ್ಕೂ ಕಿಟಕಿಯಾಯಿತು. ಇಂದು ಕನ್ನಡ ಮಕ್ಕಳ ಸಾಹಿತ್ಯದ ಓದುಗ, ಅಧ್ಯಯನಾಸಕ್ತರಿಗೂ ವಿಶಿಷ್ಟವಾದ ಕಥನದ ಮೂಲಕ ಅಲ್ಲಿನ ಬೆಳಕು ತೆರೆದುಕೊಳ್ಳುತ್ತಿದೆ ಎಂದಿದ್ದಾರೆ. ಎಡಿತ್ ನೆಸ್ಬಿಟ್ ತನ್ನ ಬದುಕನ್ನು ದಿಟ್ಟವಾಗಿ ಕಟ್ಟಿಕೊಂಡ ಲೇಖಕಿ, ಅವರ ಕಾದಂಬರಿಯಲ್ಲಿ, ಒಂದೇ ಮನೆಯ ವಿಭಿನ್ನ ಸ್ವಭಾವದ ಮಕ್ಕಳು ರೈಲು ನಿಲ್ದಾಣದ ಸುತ್ತ ತಮ್ಮ ಬಾಲ್ಯದ ಅನುಭವಗಳನ್ನು ಕಟ್ಟಿಕೊಳ್ಳುತ್ತಾರೆ. ಇದು, ಅವರ ಬದುಕು ಮಕ್ಕಳ ಲೋಕದ ಹಂಬಲಗಳಿಗೂ ಮಾತಾಗುತ್ತಾ ಆಸಕ್ತಿ ಮೂಡಿಸುತ್ತಿರುವುದನ್ನು ಸೂಚಿಸುತ್ತದೆ. ಹೀಗೆ ಕನ್ನಡದ ಮಕ್ಕಳಿಗೂ, ಮಕ್ಕಳ ಸಾಹಿತ್ಯಾಸಕ್ತ ಮನಸ್ಸುಗಳಿಗೂ ಒಂದು ಸೊಗಸಿನ ಉಣಿಸನ್ನ ಈ ಕಾದಂಬರಿ ನೀಡುವಂತಿದೆ. ಹಿರಿಯ ವೈದ್ಯ, ಸಾಂಸ್ಕೃತಿಕ ಆಸಕ್ತಿಯ ಡಾ. ಅರವಿಂದ ಪಟೇಲರ ಮಕ್ಕಳ ಲೋಕದ ಒಲವನ್ನೂ ಅದು ಮೊದಲ ಬಾರಿಗೆ ಬಲು ನಿಡಿದಾಗಿ ತೋರುತ್ತಲೂ ವಿಶೇಷದ್ದಾಗುತ್ತಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2025 Book Brahma Private Limited.