ಹಸಿರುದುಗೆ; ಲೇಖಕ ಪರಮೇಶ್ವರಯ್ಯ ಸೊಪ್ಪಿಮಠ ಅವರು ಮಕ್ಕಳಿಗಾಗಿ ಬರೆದ ಕಾದಂಬರಿ. ಕೃತಿಗೆ ಮುನ್ನುಡಿ ಬರೆದ ‘ಡಾ.ನಾ.ಡಿಸೋಜ ‘‘ದೊಡ್ಡವರೆಲ್ಲ ಜಾಣರಲ್ಲ’ ಎಂಬ ಸೂಕ್ತಿಯನ್ನು ಹೇಳುತ್ತಲೇ ಮಕ್ಕಳಿಗೆ ಮನರಂಜನೆ ಹಾಗೂ ತಿಳಿವಳಿಕೆಯನ್ನು ನೀಡುವಂತಹ ಕೆಲಸವನ್ನು ಮಾಡಿದ್ದಾರೆ. ಸಾಮಾನ್ಯವಾಗಿ ದೊಡ್ಡವರು ಅನಿಸಿ ಕೊಂಡವರು ತಮ್ಮನ್ನು ಭೇಟಿಯಾದ ಮಕ್ಕಳಿಗೆಲ್ಲ ಪರಿಸರ ಉಳಿಸಿ, ಹಸಿರು ಉಳಿಸಿ, ಮರ ಗಿಡ ನೆಡಿ ಎಂದು ಉಪದೇಶ ಹೇಳುತ್ತಿರುತ್ತಾರೆ. ಆದರೆ ಈ ವಿಷಯದಲ್ಲಿ ಅವರೇನು ಮಾಡಿರುವುದಿಲ್ಲ. ಬಾಯುಪಚಾರಕ್ಕೆ ಹಿರಿಯರು ಇಂತಹ ಮಾತುಗಳನ್ನು ಹೇಳಿರುತ್ತಾರಲ್ಲದೇ ಅವರಿಗೆ ಇದು ಮುಖ್ಯವೆಂದು ಅನಿಸುವುದೇ ಇಲ್ಲ. ಜನರ ಈ ಮನೋಭಾವದ ವಿರುದ್ಧ ಮಕ್ಕಳು ಬಂಡೇಳುವ ಒಂದು ಕಾರ್ಯವನ್ನು ಮಕ್ಕಳು ಮಾಡುತ್ತಾರೆ ಅನ್ನುವುದೇ ಈ ಪುಸ್ತಕದ ಸ್ವಾರಸ್ಯ. ಈ ಕೃತಿಯ ಮೂಲಕ ಲೇಖಕರು ಹೇಳುತ್ತಿರುವ ಒಂದು ಮಾತು ನಿಜ. ಇಂದು ಅರಣ್ಯ ರಕ್ಷಿಸಿ ಅನ್ನುವ ಮಾತು ಕೇವಲ ಒಂದು ಘೋಷಣೆಯಾಗಿ ಉಳಿದಿದೆ. ಅಲ್ಲದೆ ,ಅದು ಎಲ್ಲೂ ಕಾರ್ಯರೂಪಕ್ಕೆ ಇಳಿಯುತ್ತಿಲ್ಲ. ನೇಹಾಳ ಮೂಲಕ ಲೇಖಕರು ಹೇಳುವ ಮಾತು ಸತ್ಯಸ್ಯಸತ್ಯ, ಅಲ್ಲದೇ, ಮಕ್ಕಳನ್ನ ಪುಸ್ತಕದ ಮೂಲಕ ಪುಸ್ತಕಕ್ಕೆ ಕರೆದೊಯ್ಯುವ ಅವರ ಪ್ರಯತ್ನ ಕೂಡ ಮೆಚ್ಚಬೇಕಾದ್ದೆ. ಈ ಕೃತಿಯ ಸಾಹಸಿ ಮಕ್ಕಳು ಕೇವಲ ಘೋಷಣೆ ಕೂಗುವ ಗೊಂಬೆಗಳಾಗದೆ, ಕಾರ್ಯರೂಪಕ್ಕೆ ಇಳಿದು, ಏನನ್ನು ಸಾಧಿಸುವ ಮಕ್ಕಳಾಗುವಂತೆ ಲೇಖಕರು ಮಾಡಿದ್ದು ಒಂದು ಉತ್ತಮ ಪ್ರಯೋಗ. ಮಕ್ಕಳು ಸ್ವತಃ ಕಾಡನ್ನು ನೋಡಿದ್ದು, ಪುಸ್ತಕಗಳ ಓದು, ಪ್ರಖ್ಯಾತ ಲೇಖಕರ ಬದುಕನ್ನು ಅರ್ಥಮಾಡಿಕೊಳ್ಳುವುದರ ಮೂಲಕ ಮಕ್ಕಳು ಈ ಚಳವಳಿಗೆ ಇಳಿದದ್ದು, ಚರ್ಚೆಯ ಮೂಲಕ ಕೆಲ ವಿಷಯಗಳನ್ನು ಮಕ್ಕಳು ಅರ್ಥ ಮಾಡಿಕೊಳ್ಳುವ ವಿಧಾನ, ಎಲ್ಲವೂ ಕೂಡ ಈ ಪುಸ್ತಕದ ಪ್ಲಸ್ ಪಾಯಿಂಟ್ ಗಳು. ಈ ಕೃತಿಯ ನಾಯಕಿ ನೇಹಾ ಅವಳ ತರ್ಕಬದ್ಧ ಮಾತು ಬಹಳ ದಿನ ನೆನಪಿನಲ್ಲಿ ಉಳಿಯುವಂತಹುದು’ ಎಂದು ಪ್ರಶಂಸಿಸಿದ್ದಾರೆ.
ಕೃತಿಗೆ ಬೆನ್ನುಡಿ ಬರೆದ ಲೇಖಕ ಕೃಷ್ಣಮೂರ್ತಿ ಬಿಳಿಗೆರೆ ‘ಈ ಮಕ್ಕಳ ಕಾದಂಬರಿಯಲ್ಲಿ ಮರತ್ವ, ಮಣ್ಣತ್ವ, ಕೀಟತ್ವ ಒಟ್ಟಾರೆ ನೆಲದ ತತ್ವಗಳನ್ನು ಮನುಷ್ಯರೊಳಗೆ ಉದ್ದೀಪಿಸುವ ಆಶಯವಿದೆ. ನುಷ್ಯ ಕೇಂದ್ರಿತ ಅಪಾಯಕಾರಿ ಪ್ರಜ್ಞೆಯನ್ನು ಮೀರಿ, ಜೀವಿ ಕೇಂದ್ರಿತ ಪ್ರಜ್ಞೆಯ ಕಡೆಗೆ ಕಡ್ಡಾಯವಾಗಿ ಸಾಗಬೇಕಾದ ಯಾನಕ್ಕಾಗಿ ತುಡಿಯುವ ಕಾದಂಬರಿಯಿದು. ಮಕ್ಕಳನ್ನು ಊರು ಸ್ಕೂಲುಗಳಿಂದ, ಕಾಡಿಗೆ ಕಳಿಸುವ ಪರಮೇಶ್ವರಯ್ಯ ನಮ್ಮ ಈಗಿನ ಶಿಕ್ಷಣ ಮಾದರಿಗಳನ್ನು ಮತ್ತು ನಾಡ ಕಪಟನಾಟಕಗಳನ್ನು ದಿಟ್ಟವಾಗಿಯೇ ವ್ಯಂಗಿಸಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.
©2024 Book Brahma Private Limited.