ಡಾ. ಬಸು ಬೇವಿನಗಿಡದ ಆವರ ಓಡಿಹೋದ ಹುಡುಗ' ಎನ್ನುವ ಕಾದಂಬರಿ ಮಕ್ಕಳ ಸಾಹಿತ್ಯ ಲೋಕದಲ್ಲಿ ತುಂಬ ಗಮನಾರ್ಹ ಕೃತಿಯಾಗಿದೆ, - ಬಸು ಬೇವಿನಗಿಡದ ಆವರು ನಾಡಿನ ಒಬ್ಬ ಮಹತ್ವದ ಕಥೆಗಾರ, ಕವಿ, ಅನುವಾದಕರಾಗಿದ್ದಾರೆ.
ಆಧುನೀಕರಣ ಹಾಗೂ ಜಾಗತೀಕರಣದ ನಡುವೆ ಕಳೆದು ಹೋಗುತ್ತಿರುವ ಇಂದಿನ ಮಕ್ಕಳಿಗೆ ಕೈಪಿಡಿಯಾಗಿದೆ. ಗಜ್ಯಾ ಎಂಬ ಪುಟ್ಟ ಹುಡುಗನ ಬದುಕಿನ ಸಂಘರ್ಷ, ಬದುಕಿಗಂಟಿದ ಬಡತನ, ಎಡತಾಕುವ ಸವಾಲುಗಳನ್ನು ಲೇಖಕ ಎಳೆಎಳೆಯಾಗಿ ಇಲ್ಲಿ ವಿವರಿಸಿದ್ದಾರೆ. ಕಾದಂಬರಿಯುದ್ದಕ್ಕೂ ಆಲದ ಮರದ ಅಜ್ಜನ ಪಾತ್ರ ಗಮನ ಸೆಳೆಯುತ್ತದೆ. ಹುಡುಗ ಮತ್ತು ನಗೆಕಾಟಕೆಗಳೊಂದಿಗೆ ಬಸು ಅವರು ಈ ಕೃತಿಯನ್ನು ರಚಿಸಿದ್ದಾರೆ. ಹಳ್ಳಿಯ ಕಾಲುದಾರಿಯಲ್ಲಿ ಅಡ್ಯಾಡಿ, ಜಿಗಿದಾಡಿ.ಓಡಾಡಿ, ಧೂಳು ಮತ್ತು ಶಿಸುವಿನಲ್ಲಿ ಕೊಳ್ಳಾಡಿ, ಹಳ್ಳಿಕೆರೆ-ಬಾವಿಗಳಲ್ಲಿ ಈಸಾಡಿ, ಸೈಕಲ್ ಸವಾರಿ ಮಾಡಿದ ಸಂಗತಿಗಳು ಈ ಕಾದಂಬರಿಯಲ್ಲಿ ಗ್ರಾಮೀಣ ಜನಜೀವನದ ಪ್ರತಿಬಿಂಬಗಳಾಗಿ ಮೂಡಿಬಂದಿವೆ
ಕಥೆ ಹೇಳುವ, ಅನುಭವ ಹಂಚಿಕೊಳ್ಳುವ, ಮಕ್ಕಳಿಗೆ ತಿಳಿ ಹೇಳುವ ಆತನ ಸಾಂಗತ್ಯ ಗಜ್ಯಾ ಮತ್ತು ಸಂಗಡಿಗರಿಗೆ ಅಪ್ಯಾಯಮಾನವಾಗಿದೆ. ವಿಭಿನ್ನ ಕಥಾ ಹಂದರವಿರುವ ಈ ಪುಸ್ತಕ ಸರಳ ಮತ್ತು ಸುಲಲಿತ ನಿರೂಪಣಾ ಶೈಲಿಯಿಂದಾಗಿ ಓದುಗರ ಗಮನ ಸೆಳೆದಿದೆ. ಮಕ್ಕಳ ಮಾನಸ ಲೋಕಕ್ಕೆ ತುಸು ಹತ್ತಿರವಾಗುವಂತಿದೆ. ಉತ್ತರ ಕರ್ನಾಟಕದ ಗ್ರಾಮೀಣ ಸೊಗಡು, ಭಾಷೆ, ಹಸರುಗಳಿಂದ ಕಾದಂಬರಿಗೆ ಮತ್ತಷ್ಟು ಸೊಗಸು ಸಿಕ್ಕಿದೆ.
ಮಕ್ಕಳ ಸಾಹಿತ್ಯಕ್ಕೆ ಸಾರ್ಥಕ ಕೊಡುಗೆಗಳು
‘ಓಡಿಹೋದ ಹುಡುಗ' ಕಿರುಕಾದಂಬರಿ ವಿಭಿನ್ನ ಕಥಾವಸ್ತುವನ್ನು ಒಳಗೊಂಡಿದ್ದು ಕುತೂಹಲದಿಂದ ಓದಿಸಿಕೊಳ್ಳುತ್ತದೆ. ಹಳ್ಳಿಯ ಪರಿಸರ, ಭಾಷೆ, ಮಕ್ಕಳೊಂದಿಗೆ ಮುದನೀಡುತ್ತದೆ. 'ಗಜ್ಯಾ ಎಂಬ ಹುಡುಗನೊಬ್ಬ ತನ್ನ ದೈಹಿಕ ಚಟುವಟಿಕೆ, ಪಾದರಸದಂತಹ ಚುರುಕಿನಿಂದ ಹೇಗೆ ಎಲ್ಲರ ಪ್ರೀತಿಗೆ ಪಾತ್ರನಾಗುತ್ತಾನೆ, ತ್ಯಾಗ ಸಹನೆಯ ನಡವಳಿಕೆಗಳಿಂದ ನಾಯಕ ಗುಣ ಹೊಂದುತ್ತಾನೆ, ಗ್ರಾಮೀಣ ಹುಡುಗನೊಬ್ಬನಲ್ಲಿರುವ ಅಂತಃಸತ್ವ ಹೇಗೆ ಇಡೀ ಸಮುದಾಯವನ್ನು ಒಂದುಗೂಡಿಸುವ ಶಕ್ತಿಯಾಗುತ್ತದೆ ಎಂದು ಗಜ್ಯಾನ ಅನೇಕ ಹೋರಾಟ-ಸಾಹಸಗಳನ್ನು ಹಳ್ಳಿಯ ತಂದೆತಾಯಂದಿರು ತಮ್ಮ ಮಕ್ಕಳಿಗೆ ಮಾದರಿ ವ್ಯಕ್ತಿಯನ್ನಾಗಿ ತೋರಿಸುತ್ತಾರೆ. ಎಲ್ಲರೂ ಒಂದೇ ಎಂಬ ಭಾವನೆಯನ್ನು ಕಾದಂಬರಿ ಯಶಸ್ವಿಯಾಗಿ ತಲುಪಿಸುತ್ತದೆ. ನಿಜಕ್ಕೂ ಇಂದಿನ ಮಕ್ಕಳಿಗೆ ಬೇಕಾದ ಮೌಲ್ಯಗಳನ್ನು ತಣ್ಣಗೆ ಉಪದೇಶವಿಲ್ಲದೆ ಹೇಳುವ ಈ ಎರಡೂ ಕೃತಿಗಳ ಲೇಖಕರಾದ ಡಾಬಸೂ ಬೇವಿನಗಿಡದ ಅವರ ಪ್ರಯತ್ನಕ್ಕೆ ಅಭಿನಂದನೆಗಳು ಸಲ್ಲುತ್ತವೆ.
-ಮಂಜುಳಾ ಎಂ. ರಾಜು
ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ಪತ್ರಿಕೆ ( ಜುಲೈ 2019)
©2025 Book Brahma Private Limited.