‘ಗುಬ್ಬಿಗೊಂದು ಮನೆಯ ಮಾಡಿ’ ಪರಿಸರ ಅಧಾರಿತ ಮಕ್ಕಳ ಕಾದಂಬರಿ. ಲಿಂಗರಾಜ ವೀ. ರಾಮಾಪೂರ ಲೇಖಕರು. ಮಕ್ಕಳನ್ನು ಗುಬ್ಬಚ್ಚಿಗಳ ಕಲ್ಪನಾಲೋಕದಲ್ಲಿ ತೇಲುವಂತೆ ಮಾಡುತ್ತದೆ. ಮಕ್ಕಳೊಂದಿಗೆ ಮಾತನಾಡುವ ಗುಬ್ಬಚ್ಚಿ ಮಕ್ಕಳ ಹೃದಯದಲ್ಲಿ ಮನೆ ಮಾಡುತ್ತದೆ. ಮಕ್ಕಳು ಗುಬ್ಬಚ್ಚಿಗಳ ಜೀವನಶೈಲಿಯನ್ನು ಅಭ್ಯಸಿಸುತ್ತಾ ಅವು ಹೇಗೆ ಅಪಾಯದ, ಅಳಿವಿನ ಅಂಚಿನಲ್ಲಿವೆ ಎಂಬುದನ್ನು ಸರಳ ಭಾಷೆಯಲ್ಲಿ ತಿಳಿಯುತ್ತಾ ಸಾಗುತ್ತಾರೆ. ಇಲ್ಲಿ ಗುಬ್ಬಚ್ಚಿ ಇಡೀ ಪಕ್ಷಿ ಪ್ರಪಂಚವನ್ನು ಪ್ರತಿನಿಧಿಸುವುದರ ಮೂಲಕ ಪಕ್ಷಿಗಳ ಅದ್ಭುತ ಲೋಕವನ್ನು ಬಿಚ್ಚಿಡುತ್ತಾ ಸಾಗುತ್ತದೆ-ಈ ಕಾದಂಬರಿ.
‘ಗುಬ್ಬಿಗೊಂದು ಮನೆಯ ಮಾಡಿ’ ಮಕ್ಕಳ ಕಾದಂಬರಿಯ ವಿಮರ್ಶೆ
ಇಂದು ಗುಬ್ಬಚ್ಚಿಗಳು ಮಾಯಯಾಗಿವೆ. ಪ್ರತೀ ಗ್ರಾಮದ ಗಲ್ಲಿ ಗಲ್ಲಿ, ಮನೆ ಮನೆಗಳಲ್ಲಿ, ಜಮೀನುಗಳಲ್ಲಿ ಕಂಡು ಬರುತ್ತಿದ್ದ ಗುಬ್ಬಚ್ಚಿಗಳು ಇಂದು ಕಾಣ ಸಿಗುತ್ತಿಲ್ಲ. ಇನ್ನು ಶಹರ ಪ್ರದೇಶಗಳಲ್ಲಂತೂ ಅವುಗಳ ಸುಳಿವೇ ಇಲ್ಲಾ. ಗುಬ್ಬಚ್ಚಿಗಳು ಈ ರೀತಿ ಅಳಿವಿನ ಅಂಚಿಗೆ ಬರುವುದಕ್ಕೆ ಹಲವು ಕಾರಣಗಳಿವೆ. ಮನುಷ್ಯನ ಹಲವಾರು ಚಟುವಟಿಕೆಗಳು ಪರಿಸರದ ಹಲವು ಜೀವಿಗಳ ನಾಶಕ್ಕೆ ಕಾರಣವಾಗುತ್ತಿದೆ. ಈಗಾಗಲೇ ಹಲವಾರು ಸಸ್ಯ, ಪ್ರಾಣಿ, ಪಕ್ಷಿ ಪ್ರಬೇಧಗಳು ಅಳಿದುಹೋಗಿದ್ದು, ಇನ್ನಷ್ಟು ಅಳಿದುಹೋಗುವ ಮುನ್ನ ನಾವು ಎಚ್ಚೆತ್ತುಕೊಳ್ಳಬೇಕಿದೆ. ನಾಳಿನ ಭವ್ಯ ಭಾರತದ ನಾಗರಿಕರಾದ ಮಕ್ಕಳ ಮೇಲಂತೂ ಗುರುತರ ಜವಾಬ್ದಾರಿ ಇದೆ.
ಈ ದಿಶೆಯಲ್ಲಿ ‘ಗುಬ್ಬಿಗೊಂದು ಮನೆಯ ಮಾಡಿ’ ಪರಿಸರ ಅಧಾರಿತ ಮಕ್ಕಳ ಕಾದಂಬರಿ ಮಕ್ಕಳನ್ನು ಗುಬ್ಬಚ್ಚಿಗಳ ಕಲ್ಪನಾಲೋಕದಲ್ಲಿ ತೇಲುವಂತೆ ಮಾಡುತ್ತದೆ. ಮಕ್ಕಳೊಂದಿಗೆ ಮಾತನಾಡುವ ಗುಬ್ಬಚ್ಚಿ ಮಕ್ಕಳ ಹೃದಯದಲ್ಲಿ ಮನೆ ಮಾಡುತ್ತದೆ. ಮಕ್ಕಳು ಗುಬ್ಬಚ್ಚಿಗಳ ಜೀವನಶೈಲಿಯನ್ನು ಅಭ್ಯಸಿಸುತ್ತಾ ಅವು ಹೇಗೆ ಅಪಾಯದ, ಅಳಿವಿನ ಅಂಚಿನಲ್ಲಿವೆ ಎಂಬುದನ್ನು ಸರಳ ಭಾಷೆಯಲ್ಲಿ ತಿಳಿಯುತ್ತಾ ಸಾಗುತ್ತಾರೆ. ಇಲ್ಲಿ ಗುಬ್ಬಚ್ಚಿ ಇಡೀ ಪಕ್ಷಿ ಪ್ರಪಂಚವನ್ನು ಪ್ರತಿನಿಧಿಸುವುದರ ಮೂಲಕ ಪಕ್ಷಿಗಳ ಅದ್ಭುತ ಲೋಕವನ್ನು ಬಿಚ್ಚಿಡುತ್ತಾ ಸಾಗುತ್ತದೆ.
ವಿಜ್ಞಾನದ ಚಿಂತನೆಗಳನ್ನು ಈ ಹಿಂದೆ ಕಥೆ, ಕವಿತೆ, ನಾಟಕ, ಪ್ರಬಂಧ, ಒಗಟು ಮುಂತಾದ ಲೇಖನ ಸಾಹಿತ್ಯ ಪ್ರಕಾರಗಳ ಮೂಲಕ ಹರಿಬಿಡಲಾಗಿದೆ. ಮಕ್ಕಳ ಕಾದಂಬರಿ ಮೂಲಕ ವೈಜ್ಞಾನಿಕ ಚಿಂತನೆಗೆ ಕಿಚ್ಚು ಹಚ್ಚುವ ಪ್ರಯತ್ನ ಹೊಸದೆಂದು ಹೇಳಬಹುದು. ‘ಗುಬ್ಬಿಗೊಂದು ಮನೆಯ ಮಾಡಿ’ ಪರಿಸರ ಅಧಾರಿತ ಮಕ್ಕಳ ಕಾದಂಬರಿ ಸರಳ ನಿರೂಪಣೆಯೊಂದಿಗೆ ಮಕ್ಕಳ ಮನಸ್ಸನ್ನು ಹಿಡಿದಿಟ್ಟುಕೊಳ್ಳುತ್ತದೆ. ಇಲ್ಲಿ ಕೆಲ ಅಮೂರ್ತ ವಿಚಾರಗಳು ಅವೈಜ್ಞಾನಿಕ ಅನ್ನಿಸಿದರೂ ಪರಿಸರ ವಿನಾಶದ ಚಿತ್ರಣವನ್ನು ನೀಡುವಾಗ ಅದು ಅನಿವಾರ್ಯವೆನಿಸುತ್ತದೆ. ಈ ಕಾದಂಬರಿ ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಪರಿಣಾಮ ಬೀರಿ ಮಕ್ಕಳು ಗುಬ್ಬಚ್ಚಿಗಳ ಅಥವಾ ಇನ್ನಾವುದೇ ಜೀವಿಗಳ ರಕ್ಷಣೆಗೆ ಕಂಕಣಬದ್ಧರಾದರೆ ನಮ್ಮ ಶ್ರಮ ಸಾರ್ಥಕ ಎನ್ನುತ್ತಾರೆ ಲೇಖಕರಾದ ಲಿಂಗರಾಜ ರಾಮಾಪೂರ.
ಚಿಲಿಪಿಲಿ ಪ್ರಕಾಶನದ ‘ಗುಬ್ಬಚ್ಚಿ ಗೂಡು’ ಮಕ್ಕಳ ಪತ್ರಿಕೆಯಲ್ಲಿ ಈ ಕಥೆ 13 ತಿಂಗಳು ಧಾರಾವಾಹಿ ರೂಪದಲ್ಲಿ ಪ್ರಕಟವಾಗಿತ್ತು. ಅಗ ನಾಡಿನಾದ್ಯಂತ ಮಕ್ಕಳ ಸಾಹಿತಿಗಳ, ಓದುಗ ಮಕ್ಕಳಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಲವು ಸಲಹೆ ಸೂಚನೆಗಳು ಬಂದಿದ್ದವು. ಆ ಸಲಹೆಗಳನ್ನು ಈ ಪುಸ್ತಕದಲ್ಲಿ ಅಳವಡಿಸಿಕೊಳ್ಳಲಾಗಿದೆ. ಒಳ್ಳೆಯ, ಮೌಲ್ಯಯುತ ಮಕ್ಕಳ ಸಾಹಿತ್ಯವನ್ನು ಪ್ರಕಟಿಸಿದರೆ ಮಕ್ಕಳು ಓದುತ್ತಾರೆ ಎನ್ನುವುದಕ್ಕೆ ಈ ಕೃತಿ ನಿದರ್ಶನ.
ಶಿಕ್ಷಕರಾದವರು ಬರೀ ವರ್ಗದ ಕೋಣೆಗೆ ಸೀಮಿತವಾಗಿರದೇ ಸಮಾಜಮುಖಿಯಾಗಿ ಸಮಾಜದ ಆಗು ಹೋಗುಗಳಿಗೆ ಸ್ಪಂದಿಸುವ ಮನೋಭಾವ ಹೊಂದಿರಬೇಕು. ಅಂತಹ ಶಿಕ್ಷಕ ಮಾತ್ರ ಮಕ್ಕಳಿಗೆ ಪರಿಪೂರ್ಣ ಶಿಕ್ಷಣ ನೀಡುವ ಸಾಮಥ್ರ್ಯ ಹೊಂದಿರುತ್ತಾನೆ. ಹಾಗೆಯೇ ಓದುವ ಮತ್ತು ಬರೆಯುವ ಅಭಿರುಚಿ ಹೊಂದಿದ್ದರೆ ಮಕ್ಕಳಲ್ಲೂ ಆ ಅಭಿರುಚಿಯನ್ನು ಬೆಳೆಸಬಲ್ಲ. ಈ ಸಾಲಿನಲ್ಲಿ ಲೇಖಕರಾದ ರಾಮಾಪೂರ ನಿಲ್ಲುತ್ತಾರೆ.
-ಗುರುಮೂರ್ತಿ ಯರಗಂಬಳಿಮಠ, ಸಹಸಂಪಾದಕರು, ‘ಜೀವನ ಶಿಕ್ಷಣ’ ಡೈಟ್, ಧಾರವಾಡ
©2024 Book Brahma Private Limited.