ತನಗೆ ಆಶ್ರಯವಿತ್ತ ದೊರೆ ಅರಿಕೇಸರಿಯನ್ನು ಅರ್ಜುನನಿಗೆ ಹೋಲಿಸುತ್ತಾ ಪಂಪ ರಚಿಸಿದ ಕೃತಿ ’ವಿಕ್ರಮಾರ್ಜುನ ವಿಜಯ’. ಹೇಳುತ್ತಿರುವುದು ಮಹಾಭಾರತದ ಕತೆಯಾದರೂ ಅಲ್ಲಿರುವುದು ಬನವಾಸಿಯ ಸೊಗಸು ಮತ್ತು ಪಂಪನ ಜೀವನೋತ್ಸಾಹ. ಹಳಗನ್ನಡದಲ್ಲಿರುವ ವಿಕ್ರಮಾರ್ಜುನ ವಿಜಯವನ್ನು ತಿಳಿಗನ್ನಡಕ್ಕೆ ತಂದಿರುವವರು ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿ. ಹೊಸಕಾಲದ ಜನರಿಗೆ ಪಂಪನನ್ನು ತಲುಪಿಸುವ ಅವರ ಯತ್ನ ನಿಜಕ್ಕೂ ಸ್ತುತ್ಯರ್ಹ.
ಕೃತಿಯ ಬಗ್ಗೆ ಹಿರಿಯ ವಿಮರ್ಶಕ ಪ್ರೊ. ಓ.ಎಲ್. ನಾಗಭೂಷಣಸ್ವಾಮಿ, ’ಪಂಪಭಾರತವನ್ನು ಹೊಸ ಪೀಳಿಗೆಗೆ ತಲುಪಿಸುವ ಈ ಬಗೆಯ ಕೆಲಸ ನನಗೆ ಭಾಷೆಯೊಳಗೆ ನಡೆಯುವ ಭಾಷಾಂತರವಾಗಿ ಮುಖ್ಯವೆನ್ನಿಸಿದೆ. ಇಂಥ ಭಾವಾಂತರವೆನ್ನುವುದು ಜನ ಸಮುದಾಯದ ನಡುವೆ ಒಯ್ಯುವ ಉತ್ಸವಮೂರ್ತಿಯನ್ನು ರೂಪಿಸುವ ಕೆಲಸ, ಪಂಪನ ಈ ಇನ್ನೊಂದು ರೂಪ, ಹೊಸಪೀಳಿಗೆಯ ಓದುಗರಿಗೆ ಮಾತ್ರವಲ್ಲ, ಕವಿಗಳಿಗೂ ಅಗತ್ಯವಾದದ್ದು ಅನ್ನಿಸುತ್ತದೆ. ಮಾತ್ರಾವೃತ್ತಗಳ ಲಕ್ಷಣವನ್ನು ಬಹುಮಟ್ಟಿಗೆ ಉಳಿಸಿಕೊಂಡು ನಮ್ಮ ಕಾಲದ ಕನ್ನಡ ಗದ್ಯದಲ್ಲಿ ನಿರೂಪಿಸುವ ಸಾಹಸ ದೊಡ್ಡದು. ಛಂದಸ್ಸಿನ ಶಿಸ್ತು ಗದ್ಯದ ಸುಭಗತೆ ಎರಡನ್ನೂ ಮೇಳೈಸುವ ನಿಮ್ಮ ಹಂಬಲ ತನ್ನಷ್ಟಕ್ಕೆ ಮಹತ್ವದ್ದು’ ಎಚ್‌ಎಸ್‌ವಿ ಅವರ ಶ್ರಮವನ್ನು ಕೊಂಡಾಡಿದ್ದಾರೆ.
ಮುಂದುವರಿದು, ’ಪಂಪನ ಭಾಷೆಗೂ ಅವನು ಮೂಡಿಸುವ ಅನುಭವಕ್ಕೂ ಬಿಡಿಸಲಾಗದ ನಂಟು ಇದೆ. ನಮ್ಮೊಳಗಿನ ಪಂಪನನ್ನು ನಮ್ಮ ಕಾಲದ ಭಾಷೆಗೆ ತರುವಾಗ ಓದುಗರು ಕಟ್ಟಿಸಿಕೊಂಡ ಅರ್ಥಕ್ಕೂ ಎಚ್‌ಎಸ್‌ವಿ ನಿರೂಪಣೆಯಲ್ಲಿ ಮೂಡುವ ಅರ್ಥಕ್ಕೂ ವ್ಯತ್ಯಾಸ ಕೆಲವು ಕಡೆಗಳಲ್ಲಿ ಕಂಡಿತು. ಅದು ದೋಷವಲ್ಲ:ಭಿನ್ನ ಅಭಿಪ್ರಾಯಗಳೇ ನಮ್ಮ ಅರಿವನ್ನು ಹೊಸತುಗೊಳಿಸುವ, ಬೆಳಗುವ ಪರಿಕರಗಳು. ಪಂಪನು ವ್ಯಾಸನ ಕವಿತೆಯ ಕಡಲನು ಈಸಿದಂತೆ ಎಚ್‌ಎಸ್ವಿ ಪಂಪಾಸಾಗರವನ್ನು ಈಸಿದ್ದಾರೆ. ಅಷ್ಟೇ ಅಲ್ಲ, ಹೊಸ ಮನಸ್ಸುಗಳು ಕೂಡ ಪಂಪನೆಂಬ ಕಡಲನ್ನು ಇಸಬೇಕೆಂಬ ಉತ್ಸಾಹ ತಳೆಯುವಂತೆ ಮಾಡಿದ್ದಾರೆ. ಎಚ್‌ಎಸ್ವಿ ಅವರ ಈ ಸಾರ್ಥಕ ಪ್ರಯತ್ನ ಹೊಸ ಪೀಳಿಗೆಯ ಮನಸ್ಸನ್ನು ಸೆಳೆಯಲಿ, ಹಾಗೇ ಹೊಸ ಕವಿಗಳಿಗೆ ನುಡಿವ್ಯಾಯಾಮದ ಅಗತ್ಯ ಮನಗಾಣಿಸಲಿ’ ಎಂದಿದ್ದಾರೆ.
©2024 Book Brahma Private Limited.