ಕೊಂಡಗುಳಿ ಕೇಶಿರಾಜ -ಶೀರ್ಷಿಕೆಯಡಿ ಲೇಖಕ ಡಾ. ಕಲ್ಯಾಣರಾವ ಜಿ. ಪಾಟೀಲ ಅವರು ರಚಿಸಿದ ಕಿರುಹೊತ್ತಿಗೆಯು 1997ರಲ್ಲಿ ಅಖಿಲ ಭಾರತ ಅನುಭವ ಮಂಟಪ, ಶರಣಬಸವೇಶ್ವರ ಸಂಸ್ಥಾನ, ಗುಲಬರ್ಗಾದಿಂದ ಪ್ರಕಟವಾಗಿತ್ತು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶರಣಬಸವ ವಿಶ್ವವಿದ್ಯಾಲಯ, ಕಲಬುರಗಿಯ ಪ್ರಸಾರಾಂಗದಿಂದ 2019ರಲ್ಲಿ ಈ ಕೃತಿಯ ಪರಿಷ್ಕೃತಗೊಂಡು ದ್ವಿತೀಯ ಆವೃತ್ತಿಯು ಕೊಂಡಗುಳಿ ಕೇಶಿರಾಜ ಎಂಬ ಶೀರ್ಷಿಕೆಯಡಿ ಪ್ರಕಟವಾಗಿದೆ. ಕಲ್ಯಾಣ ನಾಡಿನ ಆದ್ಯಶರಣ ಕೊಂಡಗುಳಿ ಕೇಶಿರಾಜನ ಕುರಿತು ಲೇಖಕರು 1997ರಲ್ಲಿ ಕಲಬುರಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಅನುಭವ ಮಂಟಪದಲ್ಲಿ ನೀಡಿದ ಉಪನ್ಯಾಸದ ಬರಹ ರೂಪ ಇದು.
ಲೇಖಕರ ವಿಸ್ತೃತ ಅಧ್ಯಯನ ಮತ್ತು ಸಂಶೋಧನಾ ಮನೋಭಾವಕ್ಕೆ ಈ ಕಿರು ಹೊತ್ತಿಗೆ ನಿದರ್ಶನ. ಈ ಹೊತ್ತಿಗೆಯಲ್ಲಿ. ಕವಿ ಪರಿಚಯ, ಕೃತಿಗಳ ಪರಿಚಯ, ಸಾಂಸ್ಕೃತಿಕ ಸಾಧನೆ , ಕಾವ್ಯ ಸಂದೇಶಗಳ ಸಂಗ್ರಹ ಹೀಗೆ ನಾಲ್ಕು ಅಧ್ಯಾಯಗಳಿವೆ. ಮೊದಲಿಗೆ ಕಲ್ಯಾಣ ನಾಡಿನ ಪರಿಸರದ ಹಿನ್ನೆಲೆ ಇದೆ. ಅಂದಿನ ಕಲ್ಯಾಣದ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಮಹತ್ವದ ಚಿತ್ರಣವಿದೆ. ಚಾಲುಕ್ಯ ಚಕ್ರವರ್ತಿ ಆರನೆಯ ವಿಕ್ರಮಾದಿತ್ಯನ ಮತ್ತು ಕವಿ ಕೊಂಡಗುಳಿ ಕೇಶಿರಾಜನಿಗೆ ಸಂಬಂಧಿಸಿದ ಶಾಸನಗಳ ಉಲ್ಲೇಖಗಳು ನೀಡಲಾಗಿದೆ. ಹರಿಹರ, ರಾಘವಾಂಕ, ಭೀಮಕವಿ, ಲಕ್ಕಣ ದಂಡೇಶ, ಗುಬ್ಬಿ ಮಲ್ಲಣಾರ್ಯ, ವೀರಭದ್ರರಾಜ, ನಂಜುಂಡದೇವ, ತೋಂಟದ ಸಿದ್ಧಲಿಂಗ ಶಿವಯೋಗಿ, ವಿರೂಪಾಕ್ಷ ಪಂಡಿತ, ಎಳಂದೂರ ಹರೀಶ್ವರ, ಸಿದ್ಧನಂಜೇಶ, ಷಡಕ್ಷರದೇವ ಹೀಗೆ 20ಕ್ಕೂ ಅಧಿಕ ವೀರಶೈವ ಕವಿಗಳ ಕಾವ್ಯ ಪುರಾಣಗಳ ಉಲ್ಲೇಖಗಳೊಂದಿಗೆ ಕೇಶಿರಾಜನ ಅನುಪಮ ಕವಿತ್ವ ಮತ್ತು ಭಕ್ತಿಯ ವ್ಯಕ್ತಿತ್ವವನ್ನು ಕಟ್ಟಿಕೊಡಲಾಗಿದೆ. ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಪ್ರಥಮ ವೀರಶೈವ ಕವಿಯಾಗಿರುವ ಕೊಂಡಗುಳಿ ಕೇಶಿರಾಜನ ಇತಿವೃತ್ತಗಳನ್ನು ಉಲ್ಲೇಖಿಸಿರುವ ಆಧುನಿಕ ವಿದ್ವಾಂಸರ 25 ಕ್ಕೂ ಹೆಚ್ಚಿನ ಸಂಪಾದಿತ, ಸಂಶೋಧಿತ ಕೃತಿಗಳನ್ನು ಪರಿಶೀಲಿಸಲಾಗಿದೆ. ಕೇಶಿರಾಜನ ಚಾರಿತ್ರಿಕ, ಸಾಹಿತ್ಯಕ, ಅನುಭಾವಿಕ ಸಾಧನೆಗಳ ಮೈಲಿಗಲ್ಲುಗಳನ್ನು ದಾಖಲಿಸಿರುವುದು ವಿಶೇಷ .
ಕೇಶಿರಾಜನಿಗೆ ಆಶ್ರಯ ನೀಡಿದ ಚಾಲುಕ್ಯ ಚಕ್ರವರ್ತಿ ಆರನೆಯ ವಿಕ್ರಮಾದಿತ್ಯನು ಮೌರ್ಯ ಚಕ್ರವರ್ತಿ ಅಶೋಕ ಸಾಮ್ರಾಟನ ನಂತರ ಭಾರತದ ಬಹುಬಾಗವನ್ನು ಆಳಿದ ಚಾರಿತ್ರಿಕ ಸಂಗತಿ ಮತ್ತು ವಿಕ್ರಮಾದಿತ್ಯನ ಸಾಂಸ್ಕೃತಿಕ ಸಾಧನೆಗಳ ವಿವರವೂ ಇದೆ. ಸಂಶೋಧನೆಯ ಶಿಸ್ತು ಮತ್ತು ವ್ಯವಸ್ಥಿತ ಅಧ್ಯಯನಕ್ಕೆ ಸಾಕ್ಷಿಯೆನ್ನುವಂತೆ, ಕೃತಿಯ ಕೊನೆಯಲ್ಲಿ ಆಕರ ಮತ್ತು ಪರಿಕರಗಳ ಯಾದಿ, ಕೇಶಿರಾಜನ ಕುರಿತಾದ ರೇಖಾಚಿತ್ರ, ಕಲ್ಯಾಣ ಚಾಲುಕ್ಯ ಚಕ್ರವರ್ತಿ ಆರನೆಯ ವಿಕ್ರಮಾದಿತ್ಯನ ಚಕ್ರಾಧಿಪತ್ಯದ ನಕಾಶೆಯನ್ನು ಕೊಟ್ಟಿರುವುದು ಗಮನಾರ್ಹ.
©2025 Book Brahma Private Limited.