ಸಹೋದ್ಯೋಗಿಗಳು, ಅಧಿಕಾರಿಗಳು, ಸಾಹಿತಿಗಳು, ವಿದ್ಯಾರ್ಥಿಗಳು, ಮಿತ್ರರೂ ಸೇರಿದಂತೆ ಒಟ್ಟು ಒಂದು ಸಾವಿರಕ್ಕೂ ಹೆಚ್ಚು ಹೆಸರುಗಳನ್ನು ಉಲ್ಲೇಖಿಸಿರುವ ಕೃತಿ ಲೇಖಕ ನೀಲಾವರ ಸುರೇಂದ್ರ ಅಡಿಗ ಅವರ ‘ನೆನಪಿನಾಳದಿಂದ’. ಸಣ್ಣ ಸಣ್ಣ ಘಟನೆಗಳನ್ನು ಅರ್ಥಪೂರ್ಣ ರೂಪ ಜೋಡಿಸಿಕೊಂಡು ಇಡೀ ಬರವಣಿಗೆಯನ್ನು ಬೇಸರವಿಲ್ಲದೇ ಓದಿಸಿಕೊಡ ಹೋಗುವಂತೆ ಪೋಣಿಸುವಲ್ಲಿ ಅಡಿಗರು ಯಶಸ್ಸು ಕಂಡಿದ್ದಾರೆ. ಆಯ್ಕೆ ಮತ್ತು ನಿರಾಕರಣೆಗಳು ಪ್ರತಿ ಆತ್ಮಕಥೆಯ ಅಡಿಗರಿಗೆ ಸಿಟ್ಟು ಬರುವ ಅಪರೂಪದ ಸಂದರ್ಭಗಳು ಇಲ್ಲಿ ಮಹತ್ವದ್ದಾಗಿದೆ. ತರಗತಿ ಕೋಣೆಯಲ್ಲಿ ಮೊದಲ ಬಾರಿಗೆ ಅವರು ಸಿಟ್ಟು ತೋರಿದಾಗ ಆ ವಿದ್ಯಾರ್ಥಿ ಶಾಲೆಯಿಂದ ಮನೆಗೆ ತೆರಳದೇ ಆತಂಕವನ್ನೇ ಸೃಷ್ಟಿಸುತ್ತಾನೆ. ತರಗತಿಯಲ್ಲಿ ಸಿಟ್ಟು ತೋರಬಾರದು ಎಂಬ ದೊಡ್ಡ ಪಾಠವನ್ನು ಅಡಿಗರು ಅವನಿಂದ ಕಲಿಯುತ್ತಾರೆ. ಶಿಕ್ಷಣ ವಾರ್ತೆ ಪತ್ರಿಕೆಗಾಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಲಂಚ ನೀಡಲು ಬಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕನ ಮೇಲೆ ರೇಗಾಡುವ ಅವರ ಸಾತ್ವಿಕ ಸಿಟ್ಟು ಬೇರೆಯದೇ ಕಥೆಯನ್ನು ಹೇಳುತ್ತದೆ. ಮುಖ್ಯರಸ್ತೆಯಿಂದ ದೂರದಲ್ಲಿದ್ದ ಶಾಲೆಯ ಶಿಕ್ಷಕ ಬೇಕಾಬಿಟ್ಟಿಯಾಗಿ ಹೋಗುತ್ತಿದ್ದ ಪ್ರಕರಣವನ್ನು ತಿಳಿದ ಅಡಿಗರು ನಿರಂತರವಾಗಿ ಒಂದು ವಾರ ಸರಿಯಾದ ಸಮಯಕ್ಕೆ ಶಾಲೆಗೆ ಭೇಟಿ ನೀಡಿ, ಅಷ್ಟೂ ಬಾರಿ ತಡವಾಗಿ ಬಂದ ಶಿಕ್ಷಕನಲ್ಲಿ ಪಶ್ಚಾತ್ತಾಪ ಮೂಡುವಂತೆ ಮಾಡುವಲ್ಲಿ ಯಶಸ್ಸು ಕಾಣುತ್ತಾರೆ. ತಾಳ್ಮೆಭರಿತ ನಿರಂತರ ಪ್ರಯತ್ನದಿಂದ ದಾರಿತಪ್ಪಿದ ಶಿಕ್ಷಕರನ್ನು ಕಲಿಕೆಯಲ್ಲಿ ಹಿಂದೆ ಉಳಿದ ವಿದ್ಯಾರ್ಥಿಗಳನ್ನು ಸರಿದಾರಿಗೆ ತರುವ ಅವರ ಪ್ರಯತ್ನ ಮಾದರಿಯಾಗಿದೆ. ಅತ್ಯಂತ ಸಣ್ಣದು ಎಂದು ನಾವು ನಿರ್ಲಕ್ಷಿಸುವ ಹತ್ತಾರು ಸಂಗತಿಗಳಿಗೆ ಅವರು ಬಹಳ ಗಂಭೀರವಾಗಿ ಪ್ರತಿಕ್ರಿಯಿಸಿದ್ದಾರೆ. ಆ ಘಟನೆಗಳನ್ನು ಮನಮುಟ್ಟುವಂತೆ ಹೇಳಿಕೊಂಡಿದ್ದಾರೆ. ಕಲಿಕೆಯನ್ನು ಪರಿಣಾಮಕಾರಿಯಾಗಿಸುವಲ್ಲಿ ಅವರು ಬಳಸಿದ ಕಲಿಕೋಪಕರಣಗಳು, ಕಿವುಡ ಮಕ್ಕಳ ಕಲಿಕೆಯ ಪುಸ್ತಕವನ್ನು ಓದಿ ಮಾತು ಬಾರದ ಮಗುವಿಗೆ ಪಾಠ ಕಲಿಸಿ ಪಟ್ಟ ತೃಪ್ತಿಯನ್ನು, ಬೇರೆ ಮನೆಗಳಲ್ಲಿ ಕಸ ಮುಸುರೆ ಮಾಡಿ ಶಾಲೆಗೆ ಬಂದ ಮಗುವಿಗೆ ಮನೆಗೆಲಸ ಮಾಡಿಲ್ಲ ಎಂದು ಶಿಕ್ಷೆ ನೀಡಿದ ಶಿಕ್ಷಕಿಗೆ ತಿಳಿಹೇಳುವ ಕ್ರಮ, ಸಾಮಾಜಿಕ ಕಾರಣಗಳಿಂದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮುಖ್ಯ ವಾಹಿನಿ ಕರೆತರಲು ಕೈಗೊಳ್ಳುವ ಕ್ರಮಗಳನ್ನು ಓದುವಾಗ ಮನಸ್ಸು ಆದ್ರ್ರವಾಗುತ್ತದೆ.
©2024 Book Brahma Private Limited.