ಈ ನೆಪದಲ್ಲಿ ಇಲ್ಲಿಯ 'ಎದೆಗೆ ಬೆಂಕಿ ಬಿದ್ದಾಗಿನ ಬೆಳಕು' ಎಂಬ ಕೆಲವು ಲೇಖನಗಳ ಸಂಕಲನಕ್ಕೆ ಮುನ್ನುಡಿ ನೆಪದಲ್ಲಿ ನಾಲ್ಕು ಸಾಲು ಬರೆಯಬೇಕಾಗಿದೆ. ಒಂದು ದೃಷ್ಟಿಯಿಂದ ಇದು ಒಬ್ಬ ಸಮಾಜ ಶಾಸ್ತ್ರಜ್ಞ ಮಾಡಬೇಕಾದ ಕೆಲಸ. ಯಾಕೆಂದರೆ ಇಲ್ಲಿಯ ಎಲ್ಲಾ ಹತ್ತು ಲೇಖನಗಳು ಹೆಣ್ಣು ಗಂಡಿನ ಸಂಬಂಧಗಳ ಸುತ್ತ ವ್ಯಾಪಕಗೊಂಡಿರುವಂಥವು.ಜಗತ್ತಿನ ಉದ್ದಗಲಕ್ಕೂ ಗಂಡು ಹೆಣ್ಣಿನ ನಡುವೆ ಅರಿವು ಮೂಡಿದಾಗಿನಿಂದ ಇವೆರಡೂ ಸಂಬಂದಗಳ ಸೂಕ್ಷ್ಮತೆ ಕುರಿತಂತೆ ನಾನಾ ರೂಪಗಳಲ್ಲಿ ಜಿಜ್ಞಾಸೆ ನಡೆಯುತ್ತಲೇ ಬಂದಿದೆ. ಒಂದು ಸ್ಪಷ್ಟ ಚಿತ್ರಣ ಕೊಡದಿದ್ದರೂ ಪ್ರಜ್ಞೆಯ ಹಂತದಲ್ಲಿ ಗಣನೀಯ ಪ್ರಮಾಣದಲ್ಲಿ ಚರ್ಚೆ, ಸಂವಾದ ಮುಖಾಮುಖಿಯಾಗಿದೆ. ನಮ್ಮ ಎಲ್ಲಾ ವಿಧದ ಸಾಹಿತ್ಯ ಕೃತಿಗಳು ಈ ಎರಡೂ ಪಾತ್ರಗಳ ನೆಲೆಯಿಲ್ಲದೆ ಪರಿಪೂರ್ಣಗೊಂಡಿರುವುದಿಲ್ಲ. ಅಷ್ಟೇ ಏಕೆ ಈ ಎರಡೂ ಸೂಕ್ಷ್ಮ ವ್ಯಕ್ತಿತ್ವಗಳ ಕಾರಣದಿಂದಾಗಿ ಒಟ್ಟು ಇತಿಹಾಸದಲ್ಲಿ ಎಂತೆಂಥ ಘರ್ಷಣೆಗಳು, ಯುದ್ಧಗಳು ನಡೆದು ಹೋಗಿವೆ.ಅದರಿಂದ ನಿರ್ಲಿಪ್ತರಾಗಿರುವ ಜನಸಾಮಾನ್ಯರ ಮೇಲೂ ಪರೋಕ್ಷವಾಗಿ ಸಂಶಯದ ಪ್ರಭಾವಕ್ಕೆ ಸಿಕ್ಕಿ ನಲುಗಿ ಹೋಗಿದ್ದಾರೆ. ಅದನ್ನು ಕುರಿತಂತೆ ಲಕ್ಷಾಂತರ ಪುಟಗಳಷ್ಟು ಕೃತಿಗಳು ಬಂದು ಹೋಗಿವೆ. ಇರಲಿ, ಸಾವಿರಾರು ವರ್ಷಗಳಿಂದ ಹೆಣ್ಣು ಗಂಡಿನ ನಡುವೆ ನವಿರಾದ ಆಕರ್ಷಣೆ ಮತ್ತು ಪ್ರೇಮ ಸಂಬಂಧಗಳು ನಡೆದು ಬಂದಿರುವಂಥವೇ ಆಗಿವೆ.
©2024 Book Brahma Private Limited.