ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ನೀಲಾವರ ಸುರೇಂದ್ರ ಅಡಿಗರು ಶಿಕ್ಷಣ, ಸಾಹಿತ್ಯ, ಸಂಘಟನೆಯಲ್ಲಿ ತಮ್ಮ ಛಾಪು ಮೂಡಿಸಿದವರು. ಅವರ ಐವತ್ತೈದು ಪುಸ್ತಕಗಳು ಪ್ರಕಟವಾಗಿವೆ. ಶೈಕ್ಷಣಿಕವಾಗಿ ಪಠ್ಯಪುಸ್ತಕರಹಿತ ಕಲಿಕೆಯ ಚಿಂತನೆ, ಅನುಷ್ಠಾನವೇ ಮೊದಲಾದ ಪ್ರಗತಿಪರ ಚಿಂತಕರು, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ಸಾಹಿತಿಗಳಾಗಿ, ಉತ್ತಮ ವಾಗ್ಮಿಯೂ ಹೌದು. ಸಂಘಟಕರಾಗಿ ನಾಡಿನಾದ್ಯಂತ ಶಿಕ್ಷಕರಿಗೆ, ಸಹೃದಯರಿಗೆ ಪರಿಚಿತರು. ಇವರ ’ಕಿಟ್ಟಜ್ಜಿ ಮತ್ತು ಹವಿಸ್ಸು ಪಾತ್ರೆ’ ಈ ಪುಸ್ತಕ ಹತ್ತು ವರ್ಷಗಳ ಕಾಲ ICSE ಶಾಲೆಯ ಹತ್ತನೆಯ ತರಗತಿಗೆ ಪಠ್ಯಪುಸ್ತಕವಾಗಿತ್ತು. ಬೋಧನೆ ಮತ್ತು ಕಲಿಕೆಯ ಸಾಮಗ್ರಿ ’ಹೊಸ ದಿಶೆಯ ಬೆಳಕು’ ಕೃತಿಯನ್ನು ಶಿಕ್ಷಕರಾಗಿ ಸಿದ್ಧಪಡಿಸಿದ್ದಾರೆ. 'ನಾಕ್ಕೊಂದ್ಲಿದಿ ನಾಲ್ಕು’ ಮುಕ್ತ ಚೌಪದಿಗಳ ಧ್ವನಿಸಾಂದ್ರಿಕೆ ಕೆದ್ಲಾಯರ ಸಂಗೀತ ಸಂಯೋಜನೆಯಲ್ಲಿ ಹೊರಬಂದಿದೆ. ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯರಾಗಿದ್ದಾರೆ. 'ಕನ್ನಡ ಕಟ್ಟಾಳು', 'ಡಾ. ರಾಧಾಕೃಷ್ಣನ್', 'ಜಿ. ಪಿ. ರಾಜರತ್ನಂ' ಪ್ರಶಸ್ತಿಗಳು ಇವರಿಗೆ ಲಭಿಸಿವೆ. ರಾಜ್ಯಮಟ್ಟದ ಅತ್ಯುತ್ತಮ ಕನ್ನಡ ಭಾಷಾ ಬೋಧಕ ಪ್ರಶಸ್ತಿಗೆ ಇವರು ಪಾತ್ರರಾಗಿರುವ ಅವರಿಗೆ 2018ರಲ್ಲಿ ರಾಜ್ಯ ಸರಕಾರ 'ವಿಶೇಷ ಶಿಕ್ಷಕ ರಾಜ್ಯಪ್ರಶಸ್ತಿ' ನೀಡಿ ಗೌರವಿಸಿದೆ.