ಖ್ಯಾತ ಕಾದಂಬರಿಕಾರ ಡಾ. ಕೆ. ಶಿವರಾಮ ಕಾರಂತರ ಸಮಗ್ರ ಸಾಹಿತ್ಯ ಸಾರ ಸಂಗ್ರಹ ಕೃತಿಯನ್ನು ಸಾಹಿತಿ ಬಿ. ಮಾಲಿನಿ ಮಲ್ಯ ಅವರು ಸಂಪಾದಿಸಿದ್ದಾರೆ. ‘1974ರಲ್ಲಿ ಕಾರಂತರ ಬಳಿ ಅವರ ಬರವಣಿಗೆಯ ಕೆಲಸಕ್ಕೆ ಸಹಾಯಕಿಯಾಗಿ ಸೇರಿಕೊಂಡ ನಾನು, ಅವರ ಬರವಣಿಗೆಯ ವಿಸ್ತಾರ, ವೈವಿಧ್ಯತೆ, ವೈಚಾರಿಕತೆಗಳಿಗೆ ಮಾರು ಹೋಗಿ ಇಲ್ಲಿಯತನಕವೂ ಅವರ ಪರಿಚಾರಿಕೆಯಾಗಿ ಮುಂದುವರಿಸಿಕೊಂಡು ಬಂದಿದ್ದೇನೆ. ಕಾರಂತರ ಸಮಗ್ರ ಸಾಹಿತ್ಯ ಕೃತಿಗಳ ಸ್ಥೂಲ ಅವಲೋಕನವನ್ನು ಒಂದೆಡೆಯಲ್ಲಿ ಸಾರ ಸಂಗ್ರಹವಾಗಿ ಕೊಟ್ಟಿದ್ದು, ಓದುಗರ ಕಣ್ಮುಂದೆ ಇರಿಸುವ ಹಂಬಲದಿಂದ ಹಾಗೂ ಬಹಳಷ್ಟು ಜನರು ಕಾರಂತರ ಕೆಲವು ಕೃತಿಗಳನ್ನು ಓದಿರಲಾರರು ಎಂಬ ದೃಷ್ಟಿಯಿಂದಲೂ ಈ ಕೃತಿಯನ್ನು ಸಂಪಾದಿಸಲಾಗಿದೆ. ಕಾರಂತರ ಕೃತಿಗಳ ಸಮಗ್ರ ಸಂಪುಟವಂತೂ ಅಸಾಧ್ಯ. ಅಲ್ಲಿಯ ತನಕ ಕಾರಂತರ ಕೈಪಿಡಿ ಅಥವಾ ವಾಙ್ಮಯ ವೃತ್ತಾಂತದಂತಹ ಸಾರ ಸಂಗ್ರಹ ಬೇಕಾಗುತ್ತದೆ. ಅದಕ್ಕಾಗಿ ಈ ಕೃತಿ ಮಹತ್ವ ಪಡೆಯುತ್ತದೆ’ ಎಂಬುದು ಸಂಪಾದಕರ ನುಡಿ.
ಕೃತಿಯ ಭಾಗ-1ರಲ್ಲಿ, ಕಾರಂತರ ಜೀವನ ಪರಿಚಯ, ಹಸ್ತಾಕ್ಷರ ಮಾದರಿಗಳು, ದೊರೆತ ಗೌರವ ಪ್ರಶಸ್ತಿಗಳು, ಭಾಗ2ರಲ್ಲಿ, ವಾಙ್ಮಯ ವಿಶ್ವ, ಲಲಿತ ಸಾಹಿತ್ಯ, ಕಥೆ-ಕವನ-ಕಾದಂಬರಿ-ನಾಟಕ-ಹರಟೆ ಇತ್ಯಾದಿ, ಬಾಲ ಸಾಹಿತ್ಯ, ವಿಚಾರ ಸಾಹಿತ್ಯ ಹೀಗೆ ಕಾರಂತರ ಒಟ್ಟು ಸಾಹಿತ್ಯವನ್ನು ಸಂಗ್ರಹಿಸಿದ ಬೃಹತ್ ಸಂಪುಟವಿದು.
©2024 Book Brahma Private Limited.