‘ಹನಿ ಹನಿ’ ಲೇಖಕ ಎ.ಎನ್. ರಮೇಶ್ ಗುಬ್ಬಿ ಅವರ ಹನಿಗಳ ಸಂಕಲನ. ಈ ಕೃತಿಗೆ ದೇಜಗೌ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ.. ‘ಗುಬ್ಬಿಯ ಕಲರವವನ್ನು ಕೇಳದವರಿಲ್ಲ, ಕನ್ನಡಿಗರಿಗೆ ಗೊತ್ತಿರುವ ಗುಬ್ಬಿಯ ಮುದ್ದು ಹೆಸರು ರಮೇಶ್. ಈ ಕನ್ನಡದ ಗುಬ್ಬಿ ನಿರಂತರವಾಗಿ ಕಲರವ ಮಾಡುತ್ತಿದೆ. ಗುಬ್ಬಿಯ ಕಲರವವೆಂದೇ ಅದರ ಮೊದಲ ಕಲರವದ ಹೆಸರು. ಎರಡನೆಯ ಕಲರವದ ಹೆಸರು ಹನಿ: ಜೇನಿನ ಹನಿಯಾಗಬಹುದು, ಗಂಗೆ-ಕಾವೇರಿಯ ಹನಿಯಾಗಬಹುದು. ಕಲರವಕ್ಕೂ, ಶೃಂಗಾರಕ್ಕೂ ಹತ್ತಿರದ ನಂಟು. ಎರಡು ಕಲರವಗಳಲ್ಲಿಯೂ ಶೃಂಗಾರದ್ದೇ ದರ್ಬಾರು. ಅದು ರಸರಾಜವೂ ಹೌದು, ಬದುಕಿನ ಕಲ್ಪಭೂಜವೂ ಹೌದು. ಆನಂದವೇ ಸೃಷ್ಟಿ ಮೂಲ. ಅದುವೇ ಬದುಕಿನ ಮೂಲಮಂತ್ರ: ಅದುವೇ ಮುಕ್ತಿತಂತ್ರ. ಮಾನವನ ಸಕಲ ಪ್ರಯತ್ನಗಳ, ಕಷ್ಟ ಸಂಕಷ್ಟಗಳ ಗುರಿಯೇ ಆನಂದ. ಕಾವ್ಯದ ಉಗಮಕ್ಕೂ ಅದೇ ಮೂಲ. ರಮೇಶರ ಅರ್ಧಕ್ಕಿಂತಲೂ ಹೆಚ್ಚು ಚುಟುಕುಗಳು ಶೃಂಗಾರಮಯವಾಗಿವೆ. ಆನಂದವೇ ಅವುಗಳ ಉಗಮನಿಧಿ.
ಕಾವ್ಯವಲಯದಲ್ಲಿ ರಮೇಶ್ ರಿಗೆ ಒಳ್ಳೆಯ ಭವಿಷ್ಯವಿದೆ ಎನ್ನುವುದಕ್ಕೆ ಈ ಚುಟುಕೇ ನಿದರ್ಶನ. ಚುಟುಕೇ ಹಾಸಿಗೆ ಹೂದಿಕೆಯಾಗಿರುವ, ಅದೇ ಪ್ರಾಣವಾಗಿರುವ, ಬದುಕಾಗಿರುವ, ಅದೇ ಅವರ ಪ್ರಾಣವಾಗಿರುವ, ಬದುಕಾಗಿರುವ ಅದೇ ಅವರ ಯಜ್ಞವೇದಿಕೆಯಾಗಿರುವ ಡಾ.ಎಂ.ಜಿ.ಆರ್. ಅರಸು ಅವರೇ ಈ ಕೃತಿಯ ಪ್ರಕಾಶನದ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಕರ್ನಾಟಕದ ಮೂಲೆಮೂಲೆಗಳಲ್ಲಿ ಚುಟುಕು ಹರಡಿರಲು ಅವರೇ ಕಾರಣ. ರಮೇಶ್ ಗುಬ್ಬಿಯವರ ಆಶಯವನ್ನು, ಡಾ.ಎಂ.ಜಿ.ಆರ್. ಅರಸು ಈಗಾಗಲೇ ನೆರವೇರಿಸಿದ್ದಾರೆ. ಅಖಾಡ ಮುಂದುವರೆಸಿದ್ದಾರೆ. ಬದುಕೇ ಹೂರಣವಾಗಿರುವ ಚುಟುಕು ಸಮಾಜದ ಬದುಕನ್ನು ಹಸನುಗೊಳಿಸುತ್ತದೆಂಬ ವಿಶ್ವಾಸವಿರುವ ಚುಟುಕು ಸಾಹಿತ್ಯ ಪರಿಷತ್ತಿನ ಸಂಸ್ಥಾಪಕರಾದ ಅರಸು ಅವರ ಹಾರೈಕೆ. ನಿಜವಾಗಲೆಂಬುದೇ ಎಲ್ಲ ಕನ್ನಡಿಗರ ಬಯಕೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ.
©2024 Book Brahma Private Limited.