‘ಮುತ್ತು ಮಲ್ಲಿಗೆ’ ಸದಾನಂದ ನಾರಾವಿ ಅವರ ಚುಟುಕುಗಳ ಸಂಕಲನ. ಚುಟುಕುಗಳೆಂದರೆ ಒಂದಷ್ಟು ತಮಾಷೆ, ಇನ್ನಷ್ಟು ಪೋಲಿಭಾಷೆ. ಮತ್ತೆ, ನಾಲ್ಕು ಸಾಲುಗಳು ಅವಶ್ಯ. ಅಂತ್ಯ ಪ್ರಾಸವಂತೂ ಅಗತ್ಯ ಹೀಗೆಂದು ಕೆಲವರು ಅಭಿಪ್ರಾಯಪಡುತ್ತಾರೆ. ಅದಲ್ಲ, ಅದಲ್ಲ, ಉಪದೇಶವೇ ಚುಟುಕಿನ ನಿಯತ್ತು ಎಂದು ವಾದಿಸುವವರೂ ಇನ್ನೊಂದೆಡೆ. ಹಾಗಲ್ಲ, ಟೀಕಿಸುವುದು ಬಿಟ್ಟು ಚುಟುಕಿಲ್ಲ, ಅದಿರದಿದ್ದರೆ ಚುಟುಕು ಅಲ್ಲ ಅಂತ ಪ್ರತಿಪಾದಿಸುವವರೂ ಒಂದು ಬದಿಯಲ್ಲಿ. ಇವರ ಮಧ್ಯೆ, ಚುಟುಕು ಅಂದರೆ ಕಾವ್ಯವೇ? ಕಾವ್ಯ ಆಗದ್ದು ಚುಟುಕು ಅಲ್ಲ ಎಂದು ನಿರ್ಧರಿಸುವವರೂ ಇದ್ದಾರೆ. ಆದರೆ ಇಂಥವರ ಸಂಖ್ಯೆ ಕಡಿಮೆ ಇದೆ. ವಾಸ್ತವದಲ್ಲಿ ಚುಟುಕು ಕಾವ್ಯವೇ ಆಗಿದೆ. ಕಾವ್ಯವೂ ಆಗಿರುವಂತೆ ಚುಟುಕು ಸಹ ಗಂಭೀರವಾಗಿರಬಲ್ಲುದು. ಪ್ರತಿಭೆಯ ಸಾವಿರದ ಅವತಾರಗಳಲ್ಲಿ ಒಂದಾದ ಚುಟುಕು-ಖಂಡಿತವಾಗಿ ನೆಗೆದು ಕಾಣಿಸಿಕೊಳ್ಳುವಂಥದ್ದು, ಗಾಢವಾಗಿ ಆವರಿಸಿಕೊಳ್ಳು ವಂಥದ್ದು, ಒಳಗೊಳಗೆ ಇಳಿದು ಕಾಡತೊಡಗುವಂಥದ್ದು. ಅಂಥಹ ಹಲವಾರು ಕಾಡುವ ಚುಟುಕುಗಳು ಈ ಸಂಕಲನದಲ್ಲಿವೆ. ತಮ್ಮ ಅನುಭವದಲ್ಲಿ ಕಂಡುಂಡ ಸತ್ಯಗಳನ್ನು ಅತ್ಯಂತ ತೀಕ್ಷ್ಣವಾಗಿ ಸದಾನಂದ ನಾರಾವಿ ಅವರು ಚುಟುಕುಗಳ ಮೂಲಕ ವ್ಯಕ್ತಪಡಿಸಿದ್ದಾರೆ.
©2025 Book Brahma Private Limited.