‘ಚುಟುಕು ಚಿತ್ತಾರ’ ಲೇಖಕ ಎ.ಎನ್. ರಮೇಶ್ ಗುಬ್ಬಿ ಅವರ ಚುಟುಕು ಸಂಕಲನ. ಈ ಕೃತಿಗೆ ಎಚ್.ಬಿ. ಸೋಮಶೇಖರ್ ರಾವ್ ಬೆನ್ನುಡಿ ಬರಹವಿದೆ. ಚುಟುಕು ಸಾಹಿತ್ಯವಲಯದಲ್ಲಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ಚುಟುಕುಗಳು ಚಿಮ್ಮಿ ಬರುತ್ತಿವೆ. ಚುಟುಕುಗಳನ್ನು ಅಷ್ಟಾಗಿ ಗಮನಿಸದಿದ್ದ ಸಾಹಿತಿಗಳೂ ಕೂಡ ಅದನ್ನು ಮೆಚ್ಚುತ್ತಿದ್ದಾರೆ. ಕೆಲವರು ಸ್ವತಃ ಚುಟುಕಗಳನ್ನು ರಚಿಸುತ್ತಿದ್ದಾರೆ. ಈಗ ಅದಕ್ಕೇ ಒಂದು ವಿಶಿಷ್ಟ ಸ್ಥಾನ ದೊರಕಿದೆ. ಚುಟುಕು ಚಿತ್ತಾರದಲ್ಲಿನ ಚುಟುಕುಗಳಲ್ಲಿ ಭಾಷೆಯ ಚಾಕಚಕ್ಯತೆ, ವಸ್ತು ವೈವಿಧ್ಯತೆ, ಚುರುಕಿನ ಚಿನಕುರುಳಿಯ ಹಾರಿಕೆ, ವಿಸ್ತಾರ-ಎಲ್ಲವೂ ಜನಾದರಣೀಯವಾಗುತ್ತಿವೆ. ಈಗ ಜನರಿಗೆ ಸಮಯಾಭಾವದ ಸಮಸ್ಯೆಯಿದೆ. ಕೊಂಚ ಕಾಲ ಒಂದೆಡೆ ಕೂರಲೂ ಸಮಯವಿಲ್ಲದವರಿಗೆ- ಚುರುಕು ಬದುಕಿನವರಿಗೆ, ಚುಟುಕು-ಚಿತ್ತಾರದಂಥವು ಜೀವನೋತ್ಸಾಹಕ್ಕೊಂದು ಸಂಜೀವಿನಿ. ಈ ಚುಟುಕುಗಳು ಚಿಕ್ಕದಾಗಿ ಚೊಕ್ಕವಾಗಿವೆ. ಪ್ರತಿ ಚುಟುಕದಲ್ಲೂ ವಿವೇಕದ- ವಿವೇಚನೆಯ ಪುಟ್ಟ ಪಟಾಕಿಯಿದೆ. ಅದ್ಯಾವುದೂ ಟುಸ್ ಆಗುವಂಥದ್ದಲ್ಲ. ಇಲ್ಲಿರುವ 127 ಚುಟುಕಗಳು ವಿವಿಧ ವಸ್ತುಗಳನ್ನೊಳಗೊಂಡಿವೆ. ಇದೆಲ್ಲದರಲ್ಲೂ ಕಲ್ಪನೆಯಿದೆ. ಕನಸಿದೆ, ಬದುಕಿದೆ ವಾಸ್ತವವಿದೆ. ತ್ರಾಸವಿಲ್ಲದ ಸುಖದ ಪ್ರಾಸವಿದೆ. ಅದು ತಿಣುಕಿದ್ದಲ್ಲ, ಸಂಕ್ಷಿಪ್ತತೆ, ಸಹಜತೆ, ವಿಡಂಬನೆ, ವಿನೋದ, ವಿಷಾದ ಮೃದುಹಾಸ್ಯ ಇದ್ದು ಖುಷಿಕೊಡುತ್ತದೆ. ಕೆಲವು ಚುಟುಕಗಳ ಕುತೂಹಲಕಾರಿ ಕೊನೆಯ ತಿರುವುಗಳು ಸೊಗಸಾಗಿವೆ. ಎಲ್ಲೂ ಗಾಂಭೀರ್ಯದ ಗೆರೆ ದಾಟಿಲ್ಲ ಎಂದು ಎಚ್.ಬಿ.ಸೋಮಶೇಖರ್ ರಾವ್ ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.