ದಸ್ಕತ್ತು ಈ ಕೃತಿಯು ಹತ್ತು ಹನಿಗವನಗಾರರ ಕೃತಿಯಾಗಿದೆ. ಪತ್ರಿಕೆಗಳಲ್ಲಿ ಹೊಸ ಸಿನಿಮಾಗಳ ಬಗ್ಗೆ ಪ್ರಕಟವಾಗುವ ಸುದ್ದಿಗಳಲ್ಲಿ ಕೆಲವೊಮ್ಮೆ 'ಇನ್ನೂ ಹೆಸರಿಡದ ಚಿತ್ರ' ಎಂದು ಹೇಳುವುದುಂಟು. ಅದೇ ರೀತಿ ನಾನೀಗ ಪ್ರಸ್ತಾವನೆ ಬರೆಯುತ್ತಿರುವುದು ಇನ್ನೂ ಹೆಸರಿಡದೆ ನನಗೆ ಬಂದಿದ್ದ ಒಂದು ಅಪರೂಪದ ಹನಿಗವನ ಸಂಕಲನಕ್ಕೆ ಇದರಲ್ಲಿ ಹತ್ತು ಹೊಸ ಕವಿಗಳ ನಾಲ್ಕು ನೂರು ಹನಿಗವನಗಳಿವೆ. ಪ್ರಸ್ತಾವನೆ ಬರೆಯಲು ಹೇಳಿದ ಗೆಳೆಯ ಶ್ರೀಧರ ಕಾಡೂರು ಅವರ ಬಳಿ ಸಂಕಲನದ ಹೆಸರೇನೆಂದು ಕೇಳಿದ್ದಕ್ಕೆ ನೀವೇ ಒಂದು ಹೆಸರು ಸೂಚಿಸಿ ಅಂದರು. ಆಗ ನನಗೆ ಮೊದಲು ಹೊಳೆದ ಹೆಸರು 'ದಸ್ಕತ್ತು! ಈ ಪದವನ್ನು ಒಡೆದು 'ದಸ್ಯ ಕತ್ತು' ಅಂದರೆ ಇನ್ನಷ್ಟು ಅರ್ಥಪೂರ್ಣವಾಗುತ್ತದೆ. ಏಕೆಂದರೆ ಹತ್ತು ಕತ್ತುಗಳು ಸೇರಿ ಈ ಸಂಕಲನ ಸಿದ್ಧವಾಗಿದೆ. ಅವು ಬರೀ ಕತ್ತುಗಳಲ್ಲ. ತಲೆ ಇರುವ ಕತ್ತುಗಳು. ಪ್ರತಿಯೊಬ್ಬರ ದಸ್ಕತ್ತೂ ಭಿನ್ನ ಮತ್ತು ಅನನ್ಯವಾಗಿರುವಂತೆ ಇಲ್ಲಿರುವ ಹತ್ತು ಕವಿಗಳ ಹನಿಗವನಗಳು ವಿಭಿನ್ನವಾಗಿವೆ' ಎನ್ನುವುದನ್ನು ಓದುಗರು ಗುರುತಿಸಬಹುದು. ಹೀಗಾಗಿ ಇಲ್ಲಿ ಹತ್ತು ದಸ್ಯತ್ತುಗಳಿವೆ. ಆಂಗ್ಲ ಭಾಷೆಯಲ್ಲಿ ದಸ್ಕತ್ತಿಗೆ Signature ಅನ್ನುತ್ತೇವೆ. Signature ಎಂಬ ಹೆಸರಿನ ವಿಸ್ಕಿಯೂ ಇದೆ. ಆದರೆ ಅದಕ್ಕೂ ಈ ದಸ್ಕತ್ತಿಗೂ ಯಾವ ಸಂಬಂಧವೂ ಇಲ್ಲ! ಇದು ಹತ್ತು ಕವಿಗಳು ರಚಿಸಿದ ಹನಿಗವನಗಳ ಸಂಕಲನವಾಗಿದೆ ಎಂದು ಡುಂಡಿರಾಜ್ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2025 Book Brahma Private Limited.