‘ಎಡನೀರೊಡೆಯನಿಗೆ ಚುಟುಕು ಪುಷ್ಪಾರ್ಚನೆ’ ಎ.ಎನ್. ರಮೇಶ್ ಗುಬ್ಬಿ ಅವರ ಕೃತಿ. ಈ ಕೃತಿಗೆ ಕೇರಳ ಸರ್ಕಾರಜ ಯಕ್ಷಗಾನ ಅಕಾಡೆಮಿಯ ಜಯರಾಮ್ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿರುವ ಎಡನೀರು ಶ್ರೀಕ್ಷೇತ್ರ, ಸಹಸ್ರಾರು ವರ್ಷಗಳಿಂದ ಪ್ರತಿವರ್ಷ ಲಕ್ಷಾಂತರ ಭಕ್ತರು, ರಾಷ್ಟ್ರದ ಮೂಲೆಮೂಲೆಗಳಿಂದ ಭಕ್ತಿಪೂರಕವಾಗಿ ಶ್ರದ್ದೆ, ಭಯ, ಗೌರವಗಳಿಂದ ಸಂದರ್ಶಿಸುವ ಪವಿತ್ರ ಸ್ಥಳವಾಗಿದೆ. ಬೇಡಿದ ವರವನ್ನು ಅರ್ಹ ಭಕ್ತರಿಗೆ ಅತಿ ಶೀಘ್ರವಾಗಿ ಅನುಗ್ರಹಿಸುವ ಪುಣ್ಯ ಕ್ಷೇತ್ರವೆಂದು ರಾಷ್ಟ್ರದಲ್ಲಿ ಜನಜನಿತವಾಗಿದೆ. ಶ್ರೀಕ್ಷೇತ್ರವನ್ನು, ಪೀಠಾಧಿಪತಿಗಳನ್ನು, ನಾನಾರೂಪದಲ್ಲಿ ವರ್ಣಿಸುವ, ಹಲವಾರು ಕೃತಿಗಳು, ವಿವಿಧ ಭಾಷೆಗಳಲ್ಲಿ ಪ್ರಕಟವಾಗಿವೆ. ಜೊತೆಗೆ ಧ್ವನಿಸುರಳಿಗಳು ಮುದ್ರಿತವಾಗಿ ಭಕ್ತರ ಮನೆ-ಮನದಲ್ಲಿ ಪ್ರತಿಧ್ವನಿಸುತ್ತಿವೆಯ. ಕೈಗಾದ ಖ್ಯಾತ ರಂಗಕರ್ಮಿ, ಯುವ ಚುಟುಕು ಸಾಹಿತಿ ಶ್ರೀ.ಎ.ಎನ್. ರಮೇಶ್ ಗುಬ್ಬಿ ಅವರು ರಚಿಸಿರುವ ಎಡನೀರೊಡೆಯನಿಗೆ ಚುಟುಕು ಪುಷ್ಪಾರ್ಚನೆ ಕೃತಿಯು ಬದುಕಿನ ಬವಣೆಗಳನ್ನು ನೀಗಿಸುವ, ಸಾರ್ಥಕ ಜೀವನಕ್ಕೆ ನೆಮ್ಮದಿ, ಶಾಂತಿ, ಮುದನೀಡುವ, ಕ್ಷೇತ್ರದ ಪೀಠಾಧಿಪತಿಗಳನ್ನು ಮತ್ತು ಕ್ಷೇತ್ರದ ಮಹತ್ವವನ್ನು ವರ್ಣಿಸುವ 165 ಚುಟುಕುಗಳು ಅತ್ಯಂತ ಗಮನಾರ್ಹವಾಗಿವೆ.
ದೇವರು, ಧರ್ಮ, ಪೀಛಾಧಿಪತಿಗಳು, ನೀತಿ, ಸತ್ಯ, ನಿಷ್ಟೆಗಳ ಬಗ್ಗೆ ಗೌರವದೊಂದಿಗೆ, ಭಕ್ತಿಯ ಸೆಲೆ, ಅಲೆ, ಕಂಪನವುಂಟು ಮಾಡುವ ಚುಟುಕುಗಳು ಅದ್ಭುತವಾಗಿವೆ. ಪೀಠದ ಪರಂಪರೆಗೆ, ಘನತೆಗೆ, ಹಿರಿಮೆಗೆ ಧಕ್ಕೆ ತಾರದಂತೆ ರಮೇಶ್ ಅವರು ಅತಿ ಜಾಗ್ರತೆ ವಹಿಸಿದ್ದಾರೆ ಎಂಬುದು ಮೆಚ್ಚುಗೆಯ ಅಂಶವಾಗಿದೆ. ಇಲ್ಲಿನ ಎಲ್ಲಾ ಚುಟುಕುಗಳು ಆಪ್ತವಾಗಿವೆ. ಮನನ ಮಾಡಲು ಸರ್ವಥಾ ಯೋಗ್ಯವಾಗಿವೆ. ಕೇಶವನ ಒಲುಮೆಗಾಗಿ ಅರ್ಪಿಸುವ ಭಕ್ತಿ ಭಾವನೆಗಳಿಗೆ ಜೀವ ತುಂಬುವುದರೊಂದಿಗೆ, ಚುಟುಕುಗಳ ರಚನೆಯಲ್ಲಿನ ಮಹತ್ವಾಕಾಂಕ್ಷೆ ಹೃದಯವನ್ನು ಸ್ಪರ್ಶಿಸುತ್ತದೆ. ಸಂಕೇತಗಳು, ಪ್ರತಿಮೆಗಳು, ಉಪಮೇಯಗಳು ಸಾದೃಶ್ಯವಾಗಿ ಕಂಗೊಳಿಸುತ್ತವೆ. ಮೌಲ್ಯಯುತವಾಗಿ ಪಠನೆ ಯೋಗ್ಯವಾಗಿರುವ ಈ ಕೃತಿಗೆ ಮತ್ತಷ್ಟು ಮೌಲ್ಯವನ್ನು ವೃದ್ಧಿಸುವಂತೆ ಮಾಡುವಲ್ಲಿ ಕೈಗಾದ ಶ್ರೀಮತಿ ಭಾರತಿಭಟ್, ಶ್ರೀಮತಿ ರಮಾರಮೇಶ್ ಮತ್ತು ಕರ್ನಾಟಕ ಸರಕಾರದ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಎಮ್.ಜಿ.ಆರ್. ಅರಸ್ ಅವರುಗಳು ಸಫಲರಾಗಿದ್ದಾರೆ. ಒಟ್ಟಿನಲ್ಲಿ ಸರ್ವಾಂಗ ಸುಂದರವಾಗಿ ಮೂಡಿಬಂದಿರುವ ಈ ಕೃತಿಗೆ, ಬೆನ್ನುಡಿ ಬರೆಯಲು ಸಂತಸವಾಗುವುದರ ಜೊತೆಗೆ, ರಮೇಶ್ ಅವರಿಗೆ ಕೇಶವನ ರಕ್ಷೆ ಕ್ಲಿಷ್ಟಗಳನ್ನು ದೂರವಾಗಿಸಲಿ, ಮತ್ತಷ್ಟು ಕೃತಿಗಳು ಬೆಳಕು ಕಾಣಲಿ, ಅವರ ಭವಿಷ್ಯ ಮಂಗಳವಾಗಲಿ ಎಂದು ಜಯರಾಮ್ ಹಾರೈಸಿದ್ದಾರೆ.
©2024 Book Brahma Private Limited.