ವಿಶ್ವನಾಥ ಬಸಪ್ಪ ಅರಬಿ ಇವರು ಈ ಧರಣಿಯಲ್ಲಿ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕೆಂದು ಜನತೆಗೆ ತಿಳಿಸುವ ನಿಟ್ಟಿನಲ್ಲಿ ತಮ್ಮ ಧರಣಿ ಮತ್ತು ಬದುಕು ಎಂಬ ಚುಟುಕು ಸಂಕಲನವನ್ನು ಸಾಹಿತ್ಯ ಲೋಕಕ್ಕೆ ಪರಿಚಯಿಸುತ್ತಿದ್ದಾರೆ. ಇಲ್ಲಿನ ಪ್ರತಿ ಚುಟುಕುಗಳು ಸಹ ಧರಣಿ ಮತ್ತು ಬದುಕು ಎಂಬ ಪದಗಳನ್ನು ಹೊಂದಿರುವುದು ವಿಶೇಷ.ಇಲ್ಲಿನ ಚುಟುಕುಗಳು ಪ್ರೀತಿ-ಪ್ರೇಮ,ನಿಸರ್ಗ ಪ್ರೇಮ ಮತ್ತು ಕಾಳಜಿಯನ್ನು ತೋರುತ್ತವೆ.
ಭರವಸೆ ಮೂಡಿಸುವ ಚುಟುಕು ಸಂಕಲನ - ಧರಣಿ ಮತ್ತು ಬದುಕು
'ಧರಣಿ ಮತ್ತು ಬದುಕು' 'ವಿಶ್ವನಾಥ ಅರಬಿ' ಅವರ ಮೂರನೇ ಕೃತಿಯಾಗಿದ್ದು, ಮೊದಲ ಚುಟುಕು ಸಂಕಲನವಾಗಿದೆ. ಇದರಲ್ಲಿ ಹನಿಗವನ, ಮಿನಿಗವನ ಎಂದು ಕರೆಯುವ ಸುಮಾರು ಇನ್ನೂರಕ್ಕಿಂತ ಹೆಚ್ಚು ಚುಟುಕುಗಳಿದ್ದು, ವಿಷಯದ ವೈವಿಧ್ಯತೆಯಿಂದ ಗಮನಸೆಳೆಯುತ್ತವೆ. ಹೊಸಗನ್ನಡದಲ್ಲಿ 'ಚುಟುಕು' ರಚನೆಯು ತುಂಬಾ ಸಮೃದ್ಧವಾಗಿದ್ದು, ಸಾಹಿತ್ಯ ರೂಪವಾಗಿ ಬೆಳೆದು ಬಂದಿದೆ. ಚಂಪಾ, ದುಂಡಿರಾಜ, ಎಂ.ಜಿ.ಆರ್ ಅರಸ್, ಎಂ ಅರಬರಲಿ, ಲಂಕೇಶ್, ನೀಲು ಪದ್ಯಗಳು, ಜನಗನಹಳ್ಳಿ ಶಿವಶಂಕರ, ನೀ ಶ್ರೀಶೈಲ ಮುಂತಾದವರು ಈ ಕ್ಷೇತ್ರದಲ್ಲಿ ಅಗಾಧವಾದ ಸಾಧನೆ ಮಾಡಿದ್ದಾರೆ. ಒತ್ತಡದಲ್ಲಿ ಬಿಡುವು ಕೊಡುವ, ನಿರಾಳತೆಯನ್ನು ನೀಡುವ ಮಾಧ್ಯಮವಿದು. ಅವಸರದ ಬದುಕಿನಲ್ಲಿ ನಿಧಾನತೆ, ಏಕಾಂತತೆ ಸಾಧ್ಯವಾಗುತ್ತಿಲ್ಲ. ಅಂತಹ ಸಂದರ್ಭದಲ್ಲಿ ತುಂಬಾ ನೆರವಿಗೆ ಬರುವುದು ಚುಟುಕು ಸಾಹಿತ್ಯ. ಚುಟುಕು ತುಂಬ ಜನಪ್ರಿಯ ಮಾಧ್ಯಮ, ಸಮಕಾಲೀನ ಸ್ಪಂದನೆ ಇದರ ಮುಖ್ಯ ಲಕ್ಷಣ. "ಹತ್ತು ಕಟ್ಟುವಲ್ಲಿ ಮುತ್ತು ಕಟ್ಟು" ಎಂಬ ಪಡೆನುಡಿ ಇದಕ್ಕೊಪ್ಪುತ್ತದೆ. ಅಪಾರವಾದ ಅರ್ಥವನ್ನು ಕೆಲವೇ ಕೆಲವು ಪದಗಳಲ್ಲಿ ಹೇಳುವ ಸಾಮರ್ಥ್ಯ ಚುಟುಕು ಪ್ರಕಾರಕ್ಕಿದೆ. ಬದುಕಿನ ಎಲ್ಲ ಸ್ತರಗಳಲ್ಲಿ ಚುಟುಕು ತನ್ನದೇ ಆದ ರೀತಿಯಿಂದ ತೀವ್ರವಾಗಿ ಸ್ಪಂದಿಸುತ್ತದೆ.
ವಿಶ್ವನಾಥ ಅರಬಿಯವರು ಸೂಕ್ಷ್ಮ ಸಂವೇದನಾಶೀಲ ಕವಿಗಳು. ಇವರು ಮೂಲತಃ ವಿಜಯಪುರ ಜಿಲ್ಲೆಯವರು. ತಂದೆ ಬಸಪ್ಪ ತಾಯಿ ಶಂಕ್ರಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ವಿಜಯಪುರದ ಶ್ರೀ ಸದ್ಗುರು ಶಿವಾನಂದ ಶಾಲೆಯಲ್ಲಿ, ಪ್ರೌಢಶಾಲಾ ಶಿಕ್ಷಣವನ್ನು ಬಂಜಾರಾ ವಿದ್ಯಾವರ್ಧಕ ಸಂಘದಲ್ಲಿ, ಪಿಯುಸಿಯನ್ನು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೂರೈಸಿಕೊಂಡಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ ಎ ಪದವಿ ಪಡೆದು, ಇದೀಗ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಎಂ ಎ ಪದವಿಯ ವ್ಯಾಸಂಗದಲ್ಲಿದ್ದಾರೆ.
ವಿಶ್ವನಾಥ ಅರಬಿ ಅವರು ವೃತ್ತಿಯಿಂದ ಗ್ರಾಮಲೆಕ್ಕಾಧಿಕಾರಿಗಳು, ಪ್ರವೃತ್ತಿಯಿಂದ ಸಾಹಿತಿಗಳು. ಭಾಷಣ, ಆಶುಭಾಷಣ, ಚರ್ಚಾಸ್ಪರ್ಧೆ, ದೇಶಭಕ್ತಿಗೀತೆ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಕಾಲೇಜಿನ ಹಂತದಲ್ಲಿಯೇ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದವರು. ಚುಟುಕು, ಹನಿಗವನ, ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ವಿಶ್ವನಾಥರವರ 'ವಿಶ್ವ ಚೇತನ' ಕವನ ಸಂಕಲನ ಮತ್ತು ವಿಶೇಷ ಸಾಹಿತ್ಯ ಪ್ರಕಾರವಾದ ಹಾಯ್ಕು ಸಾಹಿತ್ಯದಲ್ಲಿ 'ವಿಶ್ವನ ಹಾಯ್ಕುಗಳು' ಹಾಯ್ಕು ಸಂಕಲನ ಎಂಬ ಎರಡು ಕೃತಿಗಳು ಈಗಾಗಲೇ ಕನ್ನಡ ಸಾರಸ್ವತ ಲೋಕಕ್ಕೆ ಪರಿಚಿತವಾಗಿವೆ. ಭಕ್ತಿಗೀತೆಗಳು, ಭಾವಗೀತೆಗಳು, ರುಬಾಯಿಗಳು, ಅಬಾಬಿಗಳನ್ನೂ ಸಹ ಶ್ರೀಯುತರು ರಚಿಸಿದ್ದಾರೆ. ಪ್ರಸ್ತುತ 'ಧರಣಿ ಮತ್ತು ಬದುಕು' ವಿಶಿಷ್ಟ ಚುಟುಕು ಸಂಕಲನವಾಗಿದೆ.
ಬದುಕನ್ನು ಅಪ್ಪಿಕೊಳ್ಳಬೇಡ
ಅದು ಬಂದಂತೆ ಸಾಗು ನೀ
ಧರಣಿಯಲ್ಲಿ ಅಬ್ಬರಿಸಬೇಡ
ಸಾಮಾನ್ಯ ಬದುಕ ನಡೆಸು ನೀ
ಎಂಬ ಮಾತು ಇಡೀ ಸಂಕಲನಕ್ಕೆ ದಿಕ್ಸೂಚಿಯಾಗಿ ನಿಲ್ಲುತ್ತದೆ. ಬದುಕಿನ ಸುತ್ತಮುತ್ತ ನಡೆಯುವ ಘಟನಾವಳಿಗಳನ್ನು ಆಧಾರವಾಗಿಟ್ಟುಕೊಂಡು ಅವುಗಳ ಅನುಭವದ ಮೇಲೆ ಚುಟುಕುಗಳನ್ನು ರಚಿಸಿದ್ದಾರೆ. ಇಲ್ಲಿರುವ ಚುಟುಕುಗಳು ಹತ್ತು ಹಲವಾರು ಅಂಶಗಳನ್ನು ವಿವರಿಸುತ್ತವೆ.
ಧರಣಿಯ ಹಸಿರದು ನಮಗೆ ಉಸಿರು
ನನ್ನೀ ಬದುಕಿಗೆ ನಿನ್ನದೇ ಹೊಸ ಹೆಸರು
ಹಸಿರಿನಲ್ಲೊಂದು ಹೊಸ ಚಿಗುರು
ಬೆಳೆಯದಿರಲಿ ಮೋಸದ ಉಗುರು
ಎಂಬ ರಚನೆಯು ಓದುಗರ ಗಮನ ಸೆಳೆಯುವಲ್ಲಿ ಸಫಲವಾಗುತ್ತದೆ. ಜೀವನದಲ್ಲಿ ಯಾರನ್ನೂ ಮೋಸ ಮಾಡುವುದು ಬೇಡ. ಪ್ರೀತಿಯ ಹೊಸ ಚಿಗುರು ಮೊಳಕೆಯೊಡೆಯಲಿ ಎಂಬ ಸದಾಶಯ ಚುಟುಕಿನಲ್ಲಿ ವ್ಯಕ್ತವಾಗುತ್ತದೆ.
ಧರಣಿಯೇ ನನ್ನ ಕೈಯಲ್ಲಿ ಎಂದು ಹಾರಾಡದಿರು ಮೂಢ
ಧರಣಿಯ ಯಜಮಾನ ಆ ದೇವ!
ಬದುಕಿನಲ್ಲಿ ತುಂಬಿವೆ ಸಾವಿರಾರು ನೋವ
ಧರಣಿಯ ಮೇಲೆ ಸ್ವಾರ್ಥ ನೃತ್ಯ ಮಾಡುತ್ತಿರಲು....
ಬದುಕಿಗೆಲ್ಲಿದೆ ಅರ್ಥ
ಧರಣಿಯಲ್ಲಿ ನಾ ಬಂದೆ, ಬದುಕಿನೊಳಗೆ ನೀ ಬಂದೆ.
ಎಂಬ ಮುಂತಾದ ಸತ್ವ ರೂಪದ ರಚನೆಗಳು ಧರಣಿಯ ಸುತ್ತ ಗಸ್ತು ಹೊಡೆಸುತ್ತವೆ. ಧರಣಿ ಪದವು ಪದೇಪದೇ ಪುನರಾವರ್ತನೆಯಾಗುತ್ತ ಹೋಗುತ್ತದೆ. ಧರಣಿ ಪದವು ಬಳಕೆಯಾದಗೊಮ್ಮೆ ನವನವೀನವಾದ ಅರ್ಥ ಸ್ಪುರಿಸುತ್ತದೆಯೆಂಬುದು ಕವಿಗಳ ತಿಳುವಳಿಕೆ ಮಟ್ಟದ ಹೆಚ್ಚುಗಾರಿಕೆಯಾಗಿದೆ.
ಧರಣಿ ಶಬ್ದವು ಅನುಕರಣಿಸುವಾಗ ಅಣ್ಣ ಬಸವಣ್ಣನವರ ವಚನ "ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ ಹರಿದ ಕುಳ್ಳಿರ್ದ ನಮ್ಮ ಮಹಾದೇವ ಸೆಟ್ಟಿ" ನೆನಪಾಗುತ್ತದೆ. ಆದರೆ ಇಲ್ಲಿನ ಧರಣಿಯೇ ಬೇರೆ. ಆರಂಭದಲ್ಲಿ ಧರಣಿಯು ಭೂಮಿ ಬದುಕಿಗೆ ರೂಪವಾದರೆ ಮುಂದೆ ಅಮ್ಮನಿಗೆ ಸಂಕೇತವಾಗುತ್ತದೆ. ಧರಣಿಯಷ್ಟೇ ಸಮಾನಳು ಅಮ್ಮ ಎನ್ನುವುದು ಈ ಕೃತಿಯಲ್ಲಿ ವ್ಯಕ್ತವಾಗುತ್ತದೆ. ಇಂತಹ ಧರಣಿ ಮುಂದೆ ಪ್ರೀತಿಯಾಗಿ ಪಲ್ಲವಿಸುತ್ತದೆ, ಪ್ರೇಮವಾಗಿ ನಳನಳಿಸುತ್ತದೆ. ಗೆಳತಿಯಾಗಿ, ಬಾಳ ಸಂಗಾತಿಯಾಗಿ ಧರಣಿ ಪರಿವರ್ತನೆಯಾಗುವುದು ಮುಂದಿನ ಹಂತದಲ್ಲಿದೆ.
ಬಾನಂಗಳದ ಚೆಲುವೆ
ಧರಣಿಯ ಗೆಲ್ಲುವೆ
ಬದುಕಿನ ಜೋಡಿಯೇ
ಜೀವನ ನೀಡುವೆ
ಎಂಬ ನಿಲುವಿಗೆ ಬಂದು ನಿಲ್ಲುತ್ತದೆ. "ಧರಣಿಗೆ ನಾ ಮಿತ್ರ ಬದುಕಿಗೆ ಅವಳೇ ಸಚಿತ್ರ, ಧರಣಿಯಲಿ ನವಿಲಿನ ನರ್ತನ, ಬದುಕಿಗೆ ಅವಳದೇ ಗಾಯನ" ಎಂಬ ಮಾತುಗಳು ಕಾವ್ಯದ ಬೆಳವಣಿಗೆಯಾಗಿದೆ. ಧರಣಿಯ ಹಲವು ಮಗ್ಗಲುಗಳು ಇಲ್ಲಿಯ ಚುಟುಕುಗಳಲ್ಲಿ ಸೊಗಸಾಗಿ ಅನಾವರಣಗೊಳ್ಳುತ್ತವೆ. ಪ್ರೀತಿ,ಪ್ರೇಮ,ರಾಗ,ಅನುರಾಗ ವಿವಿಧ ರಚನೆಗಳು ಧರಣಿಯ ಜೊತೆ ಜೊತೆ ಮೇಳೈಸುತ್ತವೆ. ಶೃಂಗಾರ ಗೀತೆಗಳು ಕಾರಂಜಿಯಾಗಿ ಚಿಮ್ಮುತ್ತವೆ. ವಯೋಸಹಜ ಭಾವನೆಗಳು, ಕನಸು ಕನವರಿಕೆಗಳು, ಹಂಬಲಗಳು ಚುಟುಕುಗಳಾಗಿ ಹರಳುಗಟ್ಟಿವೆ.
ಧರಣಿಯ ಮುಂದಿನ ಹಂತ ಬದುಕಿನ ವೈವಿಧ್ಯತೆಯ ಮುಖಗಳು ಈ ಸಂಕಲನದಲ್ಲಿ ಬಿಚ್ಚಿಕೊಳ್ಳುತ್ತವೆ. ಡಿ.ವಿ.ಜಿಯವರ ಬದುಕು ಜಟಕಾಬಂಡಿಯನ್ನು ನೆನಪಿಸುತ್ತವೆ. "ನೂರು ನೋವ ನುಂಗಿ, ಸತ್ತು ಸೆಟದ ತುಟಿಮೇಲೆ ನಗೆಬುಗ್ಗೆ ಚಿಮ್ಮಿಸುವುದೇ ನಿಜವಾದ ಬದುಕು" ಎಂಬುದಕ್ಕೆ ಸಾಕ್ಷಿಯಾಗುತ್ತವೆ. "ಬದುಕುತ್ತಾ ಇತರರ ಬದುಕಿಸೋಣ, ಬೆಳೆಯುತ್ತ ಇತರರ ಬೆಳೆಸೋಣ" ಎನ್ನುವ ಉದಾತ್ತ ಭಾವ ಮೂಡುತ್ತದೆ. ಇಂಥಲ್ಲಿ ಕಾವ್ಯದ ಧನ್ಯತೆ ಚುಟುಕಿನ ಸಾರ್ಥಕತೆ ಇದೆ.
ಬದುಕುವುದನ್ನು ಕಲಿಯಿರಿ
ಬದುಕಿಸುವುದನ್ನು ಕಲಿಯಿರಿ
ಬಾಳಬೇಕಾಗಿದೆ ಇತರರು ನಾಚುವಂತೆ
ಬದುಕಬೇಕಿದೆ ಧರಣಿಯಂತೆ
ಬದುಕೊಂದು ಸುಂದರ ಕವಿತೆ
ಧರಣಿಯಲ್ಲಿ ಹಾಡಬೇಕಿದೆ ಚಂದದ ಗೀತೆ
ಇಂತಹ ರಚನೆಗಳು ಈ ಸಂಕಲನದಲ್ಲಿವೆ. ಈ ಕೃತಿಯ ಎಲ್ಲ ಚುಟುಕುಗಳಲ್ಲಿ ಧರಣಿ ಮತ್ತು ಬದುಕು ಎಂಬ ಪದವನ್ನು ಬಳಸಿರುವ ಸಾಹಿತ್ಯ ರೀತಿ ವಿಶ್ವನಾಥರವರ ಕಾವ್ಯ ಕಟ್ಟುವ ಜಾಣ್ಮೆಯನ್ನು ಎತ್ತಿ ತೋರಿಸುತ್ತದೆ.
ಯುವಕವಿ, ಹೊಸಕವಿ, ಮುಂಬರುವ ದಿನಗಳಲ್ಲಿ ಹೊಸ ಹೊಸದನ್ನು ಸಾಧಿಸಲಿ. ಆರಂಭಿಕ ರಚನೆಗಳಲ್ಲಿ ಅಪಾರವಾದ ಭರವಸೆಯನ್ನು ಮೂಡಿಸಿರುವ ವಿಶ್ವನಾಥ ಅರಬಿಯವರಿಗೆ ಹಾರ್ದಿಕ ಅಭಿನಂದನೆಗಳು.
- ಡಾ.ಅಶೋಕ ನರೋಡೆ
ಶಿಕ್ಷಕರು ಮತ್ತು ಸಾಹಿತಿಗಳು
ಮಹಾಲಿಂಗಪುರ.
©2024 Book Brahma Private Limited.