‘ಕಾವ್ಯ ಸಂಜೀವಿನಿ’ ಲೇಖಕ ಕೆ. ಪುಂಡಲೀಕ ನಾಯಕ್ ಅವರ ಹನಿಗವನಗಳ ಸಂಕಲನ. ಈ ಪುಸ್ತಕಕ್ಕೆ ಖ್ಯಾತ ಹಾಸ್ಯ ಬರಹಗಾರ ಎಚ್. ಡುಂಡಿರಾಜ್ ಬೆನ್ನುಡಿ ಬರೆದಿದ್ದಾರೆ. ‘ಸಹಕಾರ ಕ್ಷೇತ್ರದಲ್ಲಿ ವೃತ್ತಿ ಜೀವನ ನಡೆಸಿದ ಕೆ. ಪುಂಡಲೀಕ ನಾಯಕರು ಈಗ ಕಾವ್ಯ ಲೋಕದಲ್ಲಿ ಸಂತೋಷವನ್ನು ಕಾಣುತ್ತಿದ್ದಾರೆ. ಸಾಹಿತ್ಯ ಹಾಗೂ ಸಾಹಿತಿಗಳ ಬಗ್ಗೆ ಅವರಿಗೆ ಅಪಾರವಾದ ಪ್ರೀತಿ ಇದೆ’ ಎನ್ನುತ್ತಾರೆ ಡುಂಡಿರಾಜ್. ಚುಮು ಚುಮು ಚಳಿಯಲ್ಲಿ / ನಿಂತ ಹೆಮ್ಮರಕೆ ಹಿತವಾಯಿತು / ಹಿಮದ ಹೊದಿಕೆ ಇಲ್ಲಿ ಪ್ರಾಸದ ಜೊತೆಗೆ ನಿಸರ್ಗದ ಸುಂದರ ಚಿತ್ರವಿದೆ. ಹುಣ್ಣಿಮೆಯ ಚಂದ/ ಬೆಳದಿಂಗಳಿಂದ ಅಮಾವಾಸ್ಯೆ ಚಂದ/ ಚುಕ್ಕಿಗಳಿಂದ ಎನ್ನುವ ಕವನ ಧನಾತ್ಮಕ ಮನೋಭಾವಕ್ಕೆ ಒಳ್ಳೆಯ ಉದಾಹರಣೆಯಂತಿದೆ. ಕಂದನ ಕಿರುನಗೆ/ ಅಮ್ಮನಿಗೆ ಕೊಪ್ಪರಿಗೆ ತಂದೆಯ ಹೆಗಲೆ/ ಕಂದನ ಉಪ್ಪರಿಗೆ ಎನ್ನುವ ಕಲ್ಪನೆ ಸೊಗಸಾಗಿದೆ. ಓಟು ನೀಡುವಾಗ ನಾಮ ಹಾಕಿಸಿಕೊಳ್ಳಬೇಕು ಬೆರಳಿಗೆ ಎಂಬ ಮಾತಲ್ಲಿ ವಿಡಂಬನೆ ಧ್ವನಿಪೂರ್ಣವಾಗಿದೆ. ರಾಜಕೀಯ, ಪ್ರೇಮ, ಕುಟುಂಬ, ಕೊರೋನಾ, ವೇದಾಂತ ಇತ್ಯಾದಿ ವಿವಿಧ ವಿಷಯಗಳ ಮೇಲೆ ನಾಯಕರು ಚುಟುತು ರಚಿಸಿದ್ದಾರೆ. ಚುಟುಕುಗಳು ಶಂಕರಪೋಳೆಯಂತೆ ಹಿತಮಿತವಾಗಿ ಕರಿದರೆ ಚೆನ್ನಾಗಿರುತ್ತವೆ ಎಂದು ನಾಯಕರೇ ಹೇಳಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
©2024 Book Brahma Private Limited.