ಪರಿಸರ ಕಾಳಜಿಯೊಂದಿಗೆ ಪ್ರತಿ ಪ್ರಜೆಯ ಹೊಣೆಗಾರಿಕೆಯನ್ನು ಹೆಚ್ಚಿಸುವ ವಿಚಾರ ಪ್ರೇರಣೆಯ ಒಟ್ಟು 12 ಲೇಖನಗಳ ಸಂಕಲನವೇ-ಮತ್ತೊಂದು ಮೌನ ಕಣಿವೆ. ಅರಣ್ಯ ಅಧಿಕಾರಿ ಅ.ನ. ಯಲ್ಲಪ್ಪ ರೆಡ್ಡಿ ಜೊತೆ ಸೇರಿ ಹಿರಿಯ ಪತ್ರಕರ್ತ ಸತೀಶ ಚಪ್ಪರಿಕೆ ಅವರು ಪರಿಸರ ಸಂರಕ್ಷಣೆಗಾಗಿ ವ್ಯಕ್ತ ಮಾಡಿರುವ ಅಭಿಪ್ರಾಯಗಳ ಮೊತ್ತ ಈ ಕೃತಿ.
ಕರ್ನಾಟಕದ ಕಾಂಡ್ಲಕಾಡು ಪುನರುಜ್ಜೀವನ ಯೋಜನೆಯಡಿ ಈ ಇಬ್ಬರೂ ಕೂಡಿ ಕೆಲಸ ಮಾಡುವ ವೇಳೆ ಚರ್ಚೆ-ವಿಚಾರ ವಿನಿಮಯದ ಫಲವಾಗಿ ಕೃತಿ ರಚನೆಗೆ ಪ್ರೇರಣೆಯಾಗಿದೆ. 12 ಲೇಖನಗಳ ಪೈಕಿ ಮೊದಲ 9 ಬರೆಹ ರೂಪದ ಚಿಂತನೆಗಳು ಪರಿಸರಕ್ಕೆ ಸಂಬಂಧಿಸಿದ ವಿಶೇಷವಾಗಿ ಕರ್ನಾಟಕದ ಪಶ್ಚಿಮ ಘಟ್ಟ, ಅದರ ಭೌಗೋಲಿಕ ಮಹತ್ವ, ನದಿಗಳ ಹರಿವು, ಸಸ್ಯ ಸಮೃದ್ಧಿ ಜೊತೆಜೊತೆಗೆ ಅಭಿವೃದ್ಧಿ ಹೆಸರಿನಲ್ಲಿ ವಿವಿಧ ಯೋಜನೆಗಳ (ಕೊಜೆಂಟ್ರಿಕ್ಸ್) ದಾಳಿ, ಅದರ ಸಾಧಕ-ಬಾಧಕಗಳು, ಹಸಿರು ಉಳಿಸುವಿಕೆಗೆ ಚಳವಳಿಯ ಅಗತ್ಯ ಹೀಗೆ ಪರಿಸರ ಸಂರಕ್ಷಣೆಗಾಗಿ ಸಾಧ್ಯವಿದ್ದ ಎಲ್ಲ ಮಗ್ಗಲುಗಳನ್ನು ಇಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಮೂರು ಲೇಖನಗಳು ಮಾತ್ರ ಜಾಗತಿಕ ವಿಷಯವನ್ನಾಧರಿಸಿದ್ದು, ಇಲ್ಲಿಯ ಬಹುತೇಕ ಲೇಖನಗಳು ಪ್ರಜಾವಾಣಿಯ ಸಾಪ್ತಾಹಿಕದಲ್ಲಿ ಹಾಗೂ ಸುಧಾ ವಾರಪತ್ರಿಕೆಯಲ್ಲಿ ಬೆಳಕು ಕಂಡಿವೆ.
ಈ ಕೃತಿಗೆ ಚಿಂತಕ ನಾಗೇಶ ಹೆಗಡೆ ಅವರು ಮುನ್ನುಡಿ ಬರೆದು ಪರಿಸರ ಕಳಕಳಿಯ ಅಭಾವ ಕಾಣುತ್ತಿದ್ದ ಸಂದರ್ಭದಲ್ಲೇ ಪರಿಸರ ಸಂರಕ್ಷಣೆಯನ್ನು ಪ್ರತಿಪಾದಿಸುವ ಇಂತಹ ಕೃತಿಗಳು ಹೆಚ್ಚು ಹೆಚ್ಚು ಬರಬೇಕಿದೆ ಎಂದು ಶ್ಲಾಘಿಸಿದ್ದಾರೆ.
ಮೊದಲ ಮುದ್ರಣ
ಅಕ್ಷರದ ಮೂಲಕ ಎಚ್ಚರ
ಈ ಶತಮಾನದ ಪ್ರಾರಂಭದಲ್ಲಿ ಭೂಮಿಯ ಮೇಲಿದ್ದ ಜೀವಿ ಪ್ರಭೇದಗಳಲ್ಲಿ ಶೇಕಡಾ ಇಪ್ಪರಷ್ಟು ಆಗಲೇ ನಶಿಸಿವೆ. ಮತ್ತೆ ಶೇಕಡಾ ೧೫ರಷ್ಟು ಪ್ರಭೇದಗಳು ಅವಸಾನದ ಅಂಚಿನಲ್ಲಿವೆ. ಹೀಗೆ ಭೂಮಿಯ ಮೂರರಲ್ಲೊಂದು ಪಾಲು ಜೀವಿಗಳನ್ನು ಅವನತಿಗೆ ಅಟ್ಟಿದ ಮಾನವ ಇದೇ ಅವಧಿಯಲ್ಲಿ ಸಾಧಿಸಿದ್ದೇನೆಂದರೆ ಆತ ತನ್ನ ಆರ್ಥಿಕ ಸಂಪತ್ತನ್ನು ೨೦ ಸಾವಿರ ಪಟ್ಟು ಹೆಚ್ಚಿಸಿಕೊಂಡಿದ್ದಾನೆ. ಆ ಸಂಪತ್ತು ಕೂಡ ಎಲ್ಲರಲ್ಲೂ ಏಕರೂಪವಾಗಿ ಹಂಚಿಲ್ಲ. ಶೇಕಡಾ ೨೦ರಷ್ಟು ಧನಿಕರು ಸಂಪತ್ತಿನ ಶೇಕಡಾ ೮೦ ಪಾಲನ್ನು ಬಳಸುತ್ತಿದ್ದಾರೆ. ಮಾನವನ ಪ್ರಗತಿಯ ಢಾಂ ಢೂಂ ದಾಪುಗಾಲಿನಡಿ ದುರ್ಬಲ ಜೀವಿಗಳು ಮೌನವಾಗಿ ಅಳಿಯುತ್ತಿವೆ. ಅವಸಾನದ ಕ್ಷಣದಲ್ಲಿ ದನಿಯೆತ್ತಿ ಕೂಗಲು ಕೂಡ ಅವಕ್ಕೆ ಅವಕಾಶವಿಲ್ಲದಂತಾಗಿದೆ.
ಕೂಗಿ ಎಚ್ಚರಿಸುವವರು ನಮಗಿಂದು ಬೇಕಾಗಿದ್ದಾರೆ. ಆರ್ಥಿಕ ಸಂಪತ್ತು ಹೆಚ್ಚಿದಷ್ಟೂ ವಿಪತ್ತಿನ ಸಂಭವವನ್ನು ಹೇಗೆ ಹೆಚ್ಚಿಸಿಕೊಳ್ಳುತ್ತಾ ಹೋಗುತ್ತಿದ್ದೇವೆ ಎಂಬುದನ್ನು ಸಾರಿ ಹೇಳುವವರು ಬೇಕಾಗಿದ್ದಾರೆ. ಈ ಗ್ರಂಥದಲ್ಲಿ ಸತೀಶ್ ಚಪ್ಪರಿಕೆ ಮತ್ತು ಅ.ನ.ಯಲ್ಲಪ್ಪ ರೆಡ್ಡಿಯವರು ಆ ಕೆಲಸವನ್ನು ಮಾಡಿದ್ದಾರೆ. ಮಹಾದಾಯಿಯಿಂದ ಕಪಿಲೆಯವರೆಗೆ, ಸಾಗರ ಪಟ್ಟಣದಿಂದ ಸಾಗರಾಳದವರೆಗೆ ನಾವು ನಿಸರ್ಗವನ್ನು ಧ್ವಂಸ ಮಾಡುತ್ತಿರುವ ಬಗ್ಗೆ ಅಕ್ಷರಗಳಲ್ಲಿ, ಅಂಕಿಗಳಲ್ಲಿ ಎಚ್ಚರಿಸಲು ಯತ್ನಿಸಿದ್ದಾರೆ. ಇಂದಿನವರ ತ್ವರಿತ ಲಾಭಕ್ಕಾಗಿ ಮುಂದಿನ ಪೀಳಿಗೆಯ ಆಸ್ತಿಯನ್ನು ನೆಲಸಮ ಮಾಡುತ್ತ ಹೇಗೆ ನಾವು ನಮ್ಮನ್ನೇ ಗಂಡಾಂತರಕ್ಕೆ ಒಡ್ಡಿಕೊಳ್ಳುತ್ತಿದ್ದೇವೆ ಎಂಬುದನ್ನು ಕೆಲವೊಮ್ಮೆ ತಾರ್ಕಿಕವಾಗಿ, ಕೆಲವೊಮ್ಮೆ ಭಾವುಕತೆಯಿಂದ ಬಣ್ಣಿಸಿದ್ದಾರೆ.
ಈಗಿನ ’ಮಾಹಿತಿಯುಗ’ದಲ್ಲಿ ಅಮೆರಿಕ, ಯುರೋಪ್ ಗಳ ಶೋಕಿ ಬದುಕಿನ ಬಗ್ಗೆ ಸಿಗುವಷ್ಟು ಮಾಹಿತಿ ನಮ್ಮದೇ ಹಿತ್ತಲಿನ ಶೋಕಗ್ರಸ್ತ ಬದುಕಿನ ಬಗ್ಗೆ ಸಿಗುತ್ತಿಲ್ಲ. ಆ ಕೊರತೆ ನೀಗುವ ನಿಟ್ಟಿನಲ್ಲಿ ಈ ಸಂಕಲನ ಸಹಕಾರಿ.
(ನಾಗೇಶ ಹೆಗಡೆ ಅವರು ಈ ಕೃತಿಗೆ ಬರೆದ ಬೆನ್ನುಡಿ)
©2024 Book Brahma Private Limited.