ಕುತ್ಲೂರು ಕಥನ ನವೀನ್ ಸೂರಿಂಜೆ ಅವರ ಕೃತಿಯಾಗಿದೆ. ಇಲ್ಲಿ ಹೇಳಲಾಗಿರುವ ಕುತ್ಲೂರು ಕಥೆ ಕೇವಲ ಒಂದು ಬೆಳಕಿಗೆ ಬಂದಿರುವ ಕಥೆ. ಕರಾವಳಿಯ ಘಟ್ಟದ ತಪ್ಪಲಿನ ಕಾಡುಗಳ ಉದ್ದಗಲಕ್ಕೂ ಇಂತಹ ನೂರಾರು ಕಥೆಗಳು ಕಾದು ಕುಳಿತಿರಬಹುದು. ಈ ಕಾಡಿನಂಚಿನ ಬದುಕು ಯಾವತ್ತೂ ಕಾಡಿಗೆ ಹಾನಿ ಮಾಡುವಂತಹದಾಗಿರಲಿಲ್ಲ. ಯಾವತ್ತು ಕಾಡುತ್ಪನ್ನಗಳು ವಾಣಿಜ್ಯಕ್ಕೆ/ಕೈಗಾರಿಕೀಕರಣದ ಬಳಿಕ ಕಚ್ಛಾವಸ್ತುಗಳ ಸರಬರಾಜಿಗೆ/ವಸತಿ ಕ್ಷೇತ್ರ-ಜನಸಂಖ್ಯೆ ಬೆಳೆದು ಮರಮಟ್ಟುಗಳಿಗೆ ವ್ಯಾಪಾರಿ ಬೆಲೆ ಬಂದಂತೆ ಯಾವಾಗ ಊರ ನಡುವೆ ಇದ್ದವರು ಕಾಡು ಹೊಕ್ಕರೋ ಅಂದಿನಿಂದಲೇ ಕಾಡುಗಳ ಅವನತಿ ಶುರುವಾಯಿತು. ಒಮ್ಮೆ ಕೊಲ್ಲೂರು ಕಡೆ ಒಟ್ಟಿಗೆ ಕಾರಲ್ಲಿ ಹೋಗುತ್ತಿದ್ದಾಗ, ಆವರ ಅಂತಿಮ ದಿನಗಳಲ್ಲಿದ್ದ ಅಜ್ಜ ಹೇಳಿದ ಮಾತು ನೆನಪಿದೆ. “ನಮ್ಮ ಕಾಲದಲ್ಲಿ ಒಬ್ಬ ಫಾರೆಸ್ಟರ್ ನೋಡಿಕೊಳ್ಳುತ್ತಿದ್ದ ಕಾಡಿನ ವ್ಯಾಪ್ತಿಗೆ ಈಗ ಒಬ್ಬ ಎಸಿಎಫ್, ಮೂರು ನಾಲ್ಕು ರೇಂಜರು, ಹತ್ತಾರು ಫಾರೆಸ್ಟರ್ ಇದ್ದಾರೆ ಆದರೆ, ಕಾಡು ಜಾಸ್ತಿ ಆಗುವ ಬದಲು ಕಡಿಮೆ ಆಗ್ತಿದೆ!” ನನ್ನ ಅಜ್ಜನ ಈ ಮಾತು, ನಮ್ಮ ಸರ್ಕಾರಗಳ ಅರಣ್ಯ ಪ್ರೀತಿ, ಅರಣ್ಯ ನೀತಿ, ಈ ಪುಸ್ತಕದ ಹೂರಣ ಎಲ್ಲವನ್ನೂ ಒಂದೇ ವಾಕ್ಯದಲ್ಲಿ ವಿವರಿಸುತ್ತದೆ. ಇಷ್ಟು ಸಾಕು. ಉಳಿದಂತೆ, ನೀವು ಓದಲೇ ಬೇಕಾದ ಪುಸ್ತಕ ಇದು. ಮಲೆಕುಡಿಯರು, ನಕ್ಸಲ್ಬಾರಿ, ಅರಣ್ಯ ಇಲಾಖೆ, ರಾಜಕೀಯ, ಹೋರಾಟ, ಮಾಧ್ಯಮ, ನ್ಯಾಯಾಲಯ… ಒಂದು ಕ್ರೈಮ್ ಥ್ರಿಲ್ಲರಿಗೆ ಬೇಕಾದ ಎಲ್ಲ ಹೂರಣಗಳೂ ಇಲ್ಲಿವೆ
©2025 Book Brahma Private Limited.