ಈ ಪುಸ್ತಕವು ಸೇಡಮ್ ಮಠದಲ್ಲಿನ ಭಿತ್ತಿ ಚಿತ್ರಗಳ ಕುರಿತಾದದ್ದಾದರೂ ಅದು ಕೇವಲ ಮಠದ ವಿವರಣೆಗೆ ಮಾತ್ರ ಸೀಮಿತಗೊಳ್ಳುವುದಿಲ್ಲ. ಬದಲಾಗಿ, ಚಿತ್ರಕಲೆಯ ಪ್ರಾಚೀನತೆ ಮತ್ತು ಸಂಸ್ಕೃತಿಯ ವಿವಿಧ ಮಗ್ಗಲುಗಳನ್ನು ಕಟ್ಟಿಕೊಡುತ್ತದೆ. ಕೃತಿಯ ಆರಂಭದಲ್ಲಿ ಸೇಡಮ್ ಪರಿಸರದ ಪ್ರಾಚೀನ ಇತಿಹಾಸ, ಭೌಗೋಳಿಕ ಹಿನ್ನೆಲೆ, ಸಾಂಸ್ಕೃತಿಕ ಪರಂಪರೆ ಮತ್ತು ವಿವಿಧ ಕಾಲಘಟ್ಟಗಳಲ್ಲಿ ಕಟ್ಟಲ್ಪಟ್ಟ ಉತ್ಕೃಷ್ಟ ಸ್ಮಾರಕಗಳನ್ನು ಪೂರಕ ಮಾಹಿತಿಯನ್ನಾಗಿ ಬಳಸಿಕೊಂಡಿದ್ದಾರೆ. ಇದು ಒಂದು ರೀತಿಯಲ್ಲಿ ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ ಎಂದರೆ ತಪ್ಪಾಗಲಾರದು. ಡಾ. ಬಾಗೋಡಿಯವರು ಶ್ರೀಮಠದ ವಾಸ್ತುವಿನ್ಯಾಸದ ಪರಿಕಲ್ಪನೆಯನ್ನು ಪ್ರಸ್ತುತ ಕೃತಿಯಲ್ಲಿ ತುಂಬ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ.
ಮಠದ ಧಾರ್ಮಿಕ ಪರಂಪರೆಯೊಂದಿಗೆ ಚಿತ್ರಕಲೆಯ ಪ್ರಾತಿನಿಧಿಕ ಮಹತ್ವವನ್ನು ತುಂಬ ಸೊಗಸಾಗಿ ಕಟ್ಟಿಕೊಡಲಾಗಿದೆ. ಶಿವಶಂಕರಸ್ವಾಮಿ ಮಠದ ಹಿನ್ನೆಲೆಯನ್ನು ಚರ್ಚಿಸುವ ಮುನ್ನ ಲೇಖಕ ತಾನು ಕಂಡುಂಡ ಅನುಭವಗಳನ್ನು ವಿವರಿಸಿದ್ದಾರೆ. ಭಿತ್ತಿ ಚಿತ್ರಗಳಲ್ಲಿನ ಸೊಗಸುತನ, ನಕ್ಷೆ, ಅಲಂಕಾರಿಕ ಆಕಾರಗಳಲ್ಲಿನ ಆಕೃತಿಗಳ ಶೈಲಿ, ಆಸಕ್ತಿಗಳೊಂದಿಗೆ ಕಲಾವಿದನ ಸ್ವತಂತ್ರ ಭ್ರಮೆಗಳನ್ನು ಉಳಿಸಿಕೊಂಡುಬಂದ ರೀತಿ ಸೊಗಸಾಗಿದೆ. ಇಂದಿನವರೆಗೆ ಆ ಚಿತ್ರ ನಮೂನೆಗಳನ್ನು ಸಂರಕ್ಷಿಸಿಕೊಂಡು ಬಂದಿರುವ ರೀತಿ, ಭಿತ್ತಿ ಚಿತ್ರಗಳ ಕುಶಲತೆ, ಕಲಾವಿದನ ಗಾಢವಾದ ವಿಚಾರಗಳನ್ನು ಮೂಡಿಬಂದ ವರ್ಣಗಳ ವಿನ್ಯಾಸಗಳನ್ನು ರೇಖೆಗಳ ಸೂಕ್ಷ್ಮತೆಗಳನ್ನು ತುಂಬ ಸೊಗಸಾಗಿ ಪರಿಚಯಿಸಿದ್ದಾರೆ.
ಡಾ. ಬಾಗೋಡಿಯವರು ಪ್ರಜ್ಞಾಪೂರ್ವಕವಾಗಿ ತುಂಬ ಆಸಕ್ತಿಯಿಂದ ತನ್ನ ನಾಡಿನ ಇತಿಹಾಸ, ದೃಶ್ಯಾನುಭವಗಳನ್ನು ಸೊಗಸಾಗಿ ಗುರುತಿಸಿದ್ದಾರೆ. ಗ್ರಂಥ ಚಿಕ್ಕದಿದ್ದರೂ ಅದರ ಅಂತರಾತ್ಮಕ ವಿವರಣೆಯಲ್ಲಿ ವಾಸ್ತವಗಳು ತುಂಬಿವೆ. ಅನೇಕ ದೃಶ್ಯ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಪ್ರಸ್ತುತ ಕೃತಿ ಸಂಶೋಧನಾತ್ಮಕವೂ, ಅಧ್ಯಯನಶೀಲವೂ ಎನಿಸಿದೆ.
©2024 Book Brahma Private Limited.