ದೇವನಹಳ್ಳಿಯ ಶಿಲ್ಪಕಲಾ ಶಾಲೆಯ ಎ.ಸಿ. ಹನುಮಂತಾಚಾರ್ಯ ಅವರು ಶಿಲ್ಪಕಲಾ ಕ್ಷೇತ್ರದಲ್ಲಿ ದೊಡ್ಡ ಹೆಸರು. ಗುರುಕುಲ ಪದ್ಧತಿಯಲ್ಲಿ ಶಿಲ್ಪಕಲೆಯನ್ನು ಕಲಿಸುವ ಮೂಲಕ ಸಾಂಪ್ರದಾಯಿಕ ಶಿಲ್ಪ ಕಲಾವಿದರ ಸಮೂಹ ಸೃಷ್ಟಿಗೆ ಕಾರಣವಾದ ದೇವನಹಳ್ಳಿ ಶಿಲ್ಪಕಲಾ ಶಾಲೆಗೆ ಒಂದು ಸಾಂಸ್ಕೃತಿಕ ಮಹತ್ವ ಇದೆ. ಎ.ಸಿ. ಹನುಮಂತಾಚಾರ್ಯ ಅವರ ತಂದೆ ದೇವನಹಳ್ಳಿ ಚೆನ್ನಕೇಶವ ಆಚಾರ್ಯರ ರೇಖಾಚಿತ್ರಗಳು ಮೊದಲ ಬಾರಿಗೆ ಸಾರ್ವಜನಿಕರ, ಕಲಾಸಕ್ತರ ಕಣ್ಣಿಗೆ ಗೋಚರವಾಗುತ್ತಿವೆ.
ಶಿಲ್ಪ ಸಿದ್ಧಾಂತಿ, ಶಿಲ್ಪವಲ್ಲಭ, ಶಿಲ್ಪವಿದ್ವಾನ್ ಬಿರುದುಗಳಿಗೆ ಪಾತ್ರರಾಗಿದ್ದ ಚೆನ್ನಕೇಶವ ಆಚಾರ್ಯರು ಸಂಪ್ರದಾಯ ಮತ್ತು ಶಾಸ್ತ್ರಬದ್ಧವಾಗಿ ರೇಖಾಚಿತ್ರಗಳು ಹನುಮಂತಾಚಾರ್ಯ ಅವರ ಕುಟುಂಬದವರ ಸಂಗ್ರಹದಲ್ಲಿದ್ದವು. ಅವುಗಳನ್ನು ಸಂಗ್ರಹಿಸಿ, ಸಂಪಾದಿಸಿ, ಸೂಕ್ತ ಟಿಪ್ಪಣಿ ಬರೆದು ಪ್ರಕಟಿಸುವ ಮೂಲಕ ಕೆ.ವಿ. ಸುಬ್ರಹ್ಮಣ್ಯಂ ಅವರು ಅಪರೂಪದ ಮತ್ತು ಅಪೂರ್ವ ಕೆಲಸ ಮಾಡಿದ್ದಾರೆ.
ಶಿವ- ಶೈವ ಮತ್ತು ಶಕ್ತಿಗೆ ಸಂಬಂಧಿಸಿದ ರೇಖಾಚಿತ್ರಗಳನ್ನು ಈ ಸಂಪುಟದಲ್ಲಿ ಸೇರಿಸಲಾಗಿದೆ. ಸರಿ ಸುಮಾರು ಪ್ರತಿ ಪುಟಕ್ಕೆ ಒಂದರಂತೆ ರೇಖಾಚಿತ್ರಗಳಿವೆ. ಸಾಂಪ್ರದಾಯಿಕ ಜ್ಞಾನ ಮತ್ತು ಅದನ್ನು ರೇಖೆಗಳಲ್ಲಿ ದಾಖಲಿಸುವ ರೀತಿ ಮನಮೋಹಕವಾಗಿದೆ. ಸುಬ್ರಹ್ಮಣ್ಯಂ ಅವರ ‘ಸಂಪ್ರದಾಯ ಶಿಲ್ಪದ ರೂಪ ಕಲ್ಪನೆ ಮತ್ತು ರೇಖಾಧ್ಯಾನ’ ಉತ್ತಮ ಪ್ರವೇಶಿಕೆ.
ವಿನಾಯಕ, ವಿಶ್ವಕ್ಸೇನ, ದುರ್ಗಾ, ಶಕ್ತಿ ಮತ್ತು ಅವಳ ರೂಪ ವೈವಿಧ್ಯ, ಸಪ್ತಮಾತೃಕಾ ರೂಪಗಳು, ಶಕ್ತಿ ದೇವತೆಯ ಹಲವು ರೂಪಗಳು, ಶಿವ, ಶಿವ-ಭೈರವ ಮೂರ್ತಿಯ ರೇಖಾ ರೂಪಗಳು, ಶಿವ ತಾಂಡವ ನೃತ್ಯ, ನವ ನಾಗ ಲಕ್ಷಣಗಳು, ಲಕ್ಷ್ಮಿ, ಷಣ್ಮುಖ ಸುಬ್ರಹ್ಮಣ್ಯ, ವಿವಿಧ ಸಭಾ ಚಿತ್ರಗಳ ರೇಖಾಚಿತ್ರಗಳು ಸಂಪುಟದಲ್ಲಿವೆ. ಪ್ರತಿ ಚಿತ್ರ ಪ್ರಕಾರಗಳಿಗೂ ನೀಡಲಾಗಿರುವ ಟಿಪ್ಪಣಿಯು ಪುಸ್ತಕವು ಕೇವಲ ನೋಡುವುದಕ್ಕೆ ಮಾತ್ರ ಸೀಮಿತವಾಗದೇ ಅಧ್ಯಯನ- ಓದಿಗಾಗಿ ರೂಪಿಸಿದಂತಿದೆ. ಸಾಂಪ್ರದಾಯಿಕ ಶಿಲ್ಪಗಳು ರೂಪುಗೊಳ್ಳುವದದರ ಹಿನ್ನೆಲೆಯಲ್ಲಿ ರೂಪು ತಳೆದ ರೇಖಾಚಿತ್ರಗಳ ಪ್ರಾಮುಖ್ಯತೆ ಹಾಗೂ ಅವುಗಳ ಸ್ವರೂಪದ ಬಗ್ಗೆ ನೀಡಿರುವ ಟಿಪ್ಪಣಿಗಳು ಮಹತ್ವದ ಮಾಹಿತಿ ಒದಗಿಸುವಲ್ಲಿ ಯಶಸ್ವಿಯಾಗಿವೆ. ಸಂಪಾದಿಸಿ, ಬರೆದು ಪ್ರಕಟಿಸಿದ ಸುಬ್ರಹ್ಮಣ್ಯಂ ಅವರ ಶ್ರಮ ಎದ್ದು ಕಾಣುವಂತಿದೆ.
©2025 Book Brahma Private Limited.