‘ಕರ್ನಾಟಕದ ದೇಶೀ ಚಿತ್ರಕಲೆ ಹಸೆಚಿತ್ತಾರ’ ಕೃತಿಯು ರವಿರಾಜ್ ಸಾಗರ್ ಅವರ ಅಧ್ಯಯನ ಕೃತಿಯಾಗಿದೆ. ಈ ಕೃತಿಯ ಕುರಿತು ಮಧು ಗಣಪತಿರಾವ್ ಮಡೆನೂರು ಅವರು, ಭಾರತದ ಬಹುತೇಕ ಸಮುದಾಯಗಳಲ್ಲೂ ಕೂಡ ತಮ್ಮದೇ ಸಂಪ್ರದಾಯದ ಚಿತ್ತಾರ ಕಲೆಯ ಸೊಬಗು ರೂಢಿಯಲ್ಲಿವೆ. ಕಲೆಯು ಮಾನವನ ಬುಡಕಟ್ಟು ಜೀವನ ವಿಧಾನದಿಂದ ಬೆಳವಣಿಗೆ ಹೊಂದುತ್ತಾ ಇಂದಿನ ಪ್ರತಿಮಾ ಲೇಖನರೂಪಕ್ಕೆ ತಲುಪಿದೆ. ಮಲೆಕರ್ನಾಟಕದ ದೀವರರ ಜನಾಂಗದ ಮಹಿಳೆಯರು ಹಸೆಚಿತ್ತಾರವನ್ನು ಗೋಡೆಯ ಮೇಲೆ, ಬುಟ್ಟಿಗಳು, ಬಾಗಿಲು, ಕಿಟಕಿ, ಇಡುಕಲು, ಮಡಕೆ ಇವುಗಳ ಮೇಲೆ ಸಸ್ಯಜನ್ಯ ಮೂಲದ ಬಣ್ಣಗಳಿಂದ ಶುಭ ಸಂದರ್ಭಗಳಲ್ಲಿ ಆಕರ್ಷಕ ರೀತಿಯಲ್ಲಿ ಬಿಡಿಸುತ್ತಾರೆ. ಚಿತ್ರಿಸಲು ಬೇಕಾದ ಬಣ್ಣಗಳನ್ನು ಆಯಾಕಾಲದಲ್ಲಿ ಅವರೇ ತಯಾರಿಸಿಕೊಳ್ಳುವರು. ಈ ಕಲೆಯನ್ನು ದೀವರರ ಮಹಿಳೆಯರ ಹಸೆ ಚಿತ್ತಾರವೆಂದೇ ಗುರುತಿಸಲಾಗಿದೆ. ಮಲೆನಾಡಿನ ಹಸೆಚಿತ್ತಾರ ಬುಡಕಟ್ಟು ಸಂಸ್ಕೃತಿಯ ಅತಿ ಪುರಾತನ ಕಲೆಯಾಗಿದ್ದು ಆಳವಾದ ಅಧ್ಯಯನ ಮಾಡಿ, ಹಲವು ಕಲಾವಿದರನ್ನು ಸಂದರ್ಶಿಸಿ ಕ್ಷೇತ್ರ ಅಧ್ಯಯನ ಮಾಡಿ, ಚಿತ್ತಾರದ ಪರಾಮರ್ಶೆಯನ್ನು ನೀಡಿದ್ದಾರೆ.
ರವಿರಾಜ್ ಸಾಗರ್ ಸ್ವತಃ ಹಸೆಚಿತ್ತಾರ ಕಲೆಯ ಕಲಾವಿದರು. ಅವರು ಹಸೆಯಲ್ಲಿನ ಎಳೆಯ ಪ್ರಾಮುಖ್ಯತೆ, ಹಸೆಯ ರಚನಾ ವಿನ್ಯಾಸ, ಬಣ್ಣಗಳು, ಭೂಮಣ್ಣಿಬುಟ್ಟಿ, ಇನ್ನೂ ಕೆಲವು ಕಲಾಕೃತಿಗಳು, ಆದಿಮ ಬಂಡೆ ಹಾಗೂ ಗವಿಚಿತ್ತಾರಗಳನ್ನೂ ಮತ್ತು ಚಿತ್ತಾರಗಿತ್ತಿಯರ ಕಲಾಕೌಶಲ್ಯವನ್ನೂ ಕುರಿತು ಆಳವಾದ ಅಧ್ಯಯನ ನಡೆಸಿದ್ದಾರೆ. ಇದುವರೆಗೂ ಪೂರ್ಣಪ್ರಮಾಣದ ಹಸೆ ಕುರಿತು ಯಾವುದೇ ಕೃತಿ ಬಂದಿದ್ದಿಲ್ಲ. ಆ ಕೊರತೆಯನ್ನು ರವಿರಾಜ್ ಸಾಗರ್ ತುಂಬಿದ್ದಾರೆ. ಇದು ಒಂದು ಪೂರ್ಣಪ್ರಮಾಣದ ಹಸೆಚಿತ್ತಾರದ ಸಂಶೋಧನಾ ಕೃತಿಯಾಗಿರುತ್ತದೆ. ಲೇಖಕರ ಶ್ರಮ ನಿಜವಾಗಿಯೂ ಇಲ್ಲಿ ಸಾರ್ಥಕ ಪಡೆದಿದೆ’ ಎಂದು ಪ್ರಶಂಸಿಸಿದ್ದಾರೆ.
©2025 Book Brahma Private Limited.