‘ಕರ್ನಾಟಕ ಭಿತ್ತಿ ಚಿತ್ರ ಪರಂಪರೆ’ ಅ.ಲ. ನರಸಿಂಹನ್ ಅವರ ಕೃತಿ. ''ಕರ್ನಾಟಕದ ಚಿತ್ರಕಲೆಯಲ್ಲಿ ಸಾಂಸ್ಕೃತಿಕ ಅಧ್ಯಯನವೊಂದು ವ್ಯಾಪಕವೂ, ಸುವಿಸ್ತಾರವೂ, ಕುತೂಹಲಕಾರಿಯೂ ಆದ ವಿಷಯಗಳನ್ನು ಈ ಗ್ರಂಥ ಒಳಗೊಂಡಿದೆ. ಕನ್ನಡದಲ್ಲಿ ಈ ತನಕ ಈ ವಿಷಯವನ್ನು ಕುರಿತಂತೆ ಬಿಡಿ ಲೇಖನಗಳು, ಸಣ್ಣಪುಟ್ಟ ಗ್ರಂಥಗಳು ಪ್ರಕಟಗೊಂಡಿದ್ದರೂ, ಇಷ್ಟು ವ್ಯವಸ್ಥಿತವಾಗಿ, ಸಕ್ರಮವಾಗಿ, ತಲಸ್ಪರ್ಶಿಯಾಗಿ, ಸುದೀರ್ಘವಾಗಿ ಅಭ್ಯಾಸ ಮಾಡಿದ ಫಲವಾಗಿ ರಚನೆಗೊಂಡ ಸಮಗ್ರ ಗ್ರಂಥಗಳು ಇಲ್ಲವೆಂದೇ ಹೇಳಬಹುದು. ಈ ಮಹಾ ನಿಬಂಧವನ್ನೋದಿದ ನಂತರ, ಈ ಗುರುಕಾರ್ಯಕ್ಕೆ ಅವಶ್ಯವಾದ ವಿದ್ವತ್ತು, ಸತತಭ್ಯಾಸ, ವಿಷಯ ಸಂಗ್ರಹ ಸಾಮರ್ಥ್ಯ, ಜ್ಞಾನ ಸಂಪಾದನಾ ಶ್ರದ್ದೆ, ವಿಶ್ಲೇಷಣ ಶಕ್ತಿ, ಬುದ್ದಿ ಸಂಪತ್ತು ನಿಬಂಧಕಾರರಲ್ಲಿ ಸಾಕಷ್ಟು ಪ್ರಮಾಣದಲ್ಲಿವೆ ಎಂದು ಸ್ಪಷ್ಟವಾಗುತ್ತದೆ.
ಅವರು ವ್ಯಾಸಂಗ ಮಾಡಿರುವ ಗ್ರಂಥಗಳ ರಾಶಿಯೇ ಅಪಾರವಾಗಿದ್ದು, ಅದನ್ನೆಲ್ಲಾ ತಮ್ಮ ಅವಶ್ಯಕತೆಗನುಗುಣವಾಗಿ ಸೂರೆಗೊಂಡಿದ್ದಾರೆ. ಈ ಕೃತಿಯಲ್ಲಿಯ ಭಾಷೆ ಸರಳವಾಗಿಯೂ ಇದ್ದು ಚಿತ್ರಕಲೆಯಂಥ ಪಾರಿಭಾಷಿಕ ವಿಷಯದ ನಿರೂಪಣೆಗೆ ಹಾಗೂ ವ್ಯಾಖ್ಯಾನಕ್ಕೆ ತಕ್ಕಂತಿದೆ.''
©2024 Book Brahma Private Limited.