ನಾ. ಗೀತಾಚಾರ್ಯ ಅವರು ಸಂಪಾದಿಸಿರುವ ‘ಸಮಗ್ರ ದಾಸ ಸಾಹಿತ್ಯ ಸಂಪುಟ-35-ಭಾಗ-1’ ರಲ್ಲಿ ಬೇಲೂರು ವೈಕುಂಠದಾಸರು ಮತ್ತು ಇತರ ಶ್ರೀವೈಷ್ಣವ ಹರಿದಾಸರ ಕೀರ್ತನೆಗಳು ಸಂಕಲನಗೊಂಡಿವೆ. ಈ ಸಮಗ್ರ ದಾಸಸಾಹಿತ್ಯ ಸಂಪುಟ 35ರಲ್ಲಿ ಎರಡು ಭಾಗಗಳಿವೆ. ಈ ಎರಡೂ ಭಾಗಗಳಲ್ಲಿ ಶ್ರೀವೈಷ್ಣವ ಹರಿದಾಸರ ಕೀರ್ತನೆಗಳಿವೆ( 18ನೇ ಸಂಪುಟದ 4ನೇ ಭಾಗದಲ್ಲಿ ಮಹಿಳಾ ಕೀರ್ತನೆಗಳಿವೆ) ಕನ್ನಡ ಹರಿದಾಸ ಸಾಹಿತ್ಯ ಚರಿತ್ರೆಯಲ್ಲಿ ಶ್ರೀ ವೈಷ್ಣವ ಕೀರ್ತನೆಗಳು ಎನ್ನುವುದೇ ಹೊಸ ಮಾತು. ಕನ್ನಡದಲ್ಲಿ ಶ್ರೀವೈಷ್ಣವ ಸಾಹಿತ್ಯವೇ ಇಲ್ಲ ಎಂಬ ಅಭಿಪ್ರಾಯದಲ್ಲಿ ಸಾಹಿತ್ಯ ಚರಿತ್ರೆಕಾರರಿಗೆ ಇದು ಹೊಸ ವಿಚಾರ. ಈ ಅಭಿಪ್ರಾಯದ ಹಿನ್ನೆಲೆಯಲ್ಲಿಯೇ ಸಾಹಿತ್ಯ ಚರಿತ್ರೆಯಲ್ಲಿ ಅಲ್ಲಲ್ಲಿ ಕೆಲವು ಮಾತುಗಳು ಕಾಣಿಸಿಕೊಂಡಿರುವುದನ್ನು ಬಿಟ್ಟರೆ ಶ್ರೀವೈಷ್ಣವ ಸಾಹಿತ್ಯದ ಅಸ್ತಿತ್ವವನ್ನು ಗುರುತಿಸುವ ಅಥವಾ ಹುಡುಕುವ ಪ್ರಯತ್ನವೇ ಈವರೆಗೆ ಆಗಿರಲಿಲ್ಲ. ಆದರೆ 1990ರ ದಶಕದಿಂದಲೇ ಈ ಬಗೆಯ ಪ್ರಯತ್ನಗಳು ಕಾಣಿಸಿಕೊಂಡು ಕನ್ನಡ ಸಾಹಿತ್ಯದಲ್ಲಿ ಶ್ರೀವೈಷ್ಣವ ಹರಿದಾಸ ಸಾಹಿತ್ಯವೂ ಇದೆ ಎಂಬುದನ್ನು ಪ್ರತಿಪಾದಿಸಿರುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಹಲವು ಲೇಖನಗಳು ಪ್ರಕಟನೆಗಳು ಬಂದಿವೆಯಾದರೂ ಎಲ್ಲ ಕೀರ್ತನೆಗಳನ್ನು ಸಂಗ್ರಹಿಸಿ ಸಮಗ್ರ ಸಂಪುಟವಾಗಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಈ ಸಂಪುಟವೇ ನಾಂದಿಯಾಗಿದೆ. ಈ ಮೂಲಕ 80ರ ದಶಕದಲ್ಲಿ ಬೆಳಕಿಗೆ ಬಂದ ಅದ್ವೈತ ಹರಿದಾಸ ಸಾಹಿತ್ಯದೊಂದಿಗೆ ಈ ವಿಶಿಷ್ಟಾದ್ವೈತ ಹರಿದಾಸ ಸಾಹಿತ್ಯವೂ, ಮುಖ್ಯವಾಹಿನಿಯಾಗಿದ್ದ ದ್ವೈತ ತತ್ವದೊಂದಿಗೆ ಸೇರಿಕೊಂಡು ಕನ್ನಡ ಹರಿದಾಸ ಸಾಹಿತ್ಯ ಎಂದರೆ ವೈದಿಕ ಧರ್ಮದ ಮುಖ್ಯ ತತ್ವಗಳಾದ ಈ ಮೂರು ಧರ್ಮದ ಸಮಾನ ಪ್ರತಿಪಾದನೆ ಎಂಬ ಹೊಸ ಚಿಂತನೆಗೂ ಈ ಸಂಪುಟ ನಾಂದಿಯಾಗಲಿದೆ ಎಂದಿದ್ದಾರೆ ಸಂಪಾದಕ ನಾ. ಗೀತಾಚಾರ್ಯ.
©2024 Book Brahma Private Limited.