ನವ್ಯ ಸಾಹಿತ್ಯದ ಪ್ರಮುಖ ಲಕ್ಷಣಗಳಲ್ಲಿ ಜೀವನ ಮೌಲ್ಯಗಳು ಯಾವ ಸ್ವರೂಪದಲ್ಲಿರುತ್ತವೆ ಎಂಬ ವಿಚಾರವೂ ಮುಖ್ಯವಾಗುತ್ತದೆ ಎಂಬುದನ್ನು ಲೇಖಕ ಎಸ್. ವಿಜಯಶಂಕರ್ ಅವರ ‘ನವ್ಯ ಸಾಹಿತ್ಯ’ ಕೃತಿಯು ತಿಳಿಸುತ್ತದೆ. ನವ್ಯದ ಮುಖ್ಯ ಧ್ವನಿಗಳ ಭಾಗದಲ್ಲಿ ವಿ.ಕೃ. ಗೋಕಾಕ, ಅಡಿಗ, ಅನಂತಮೂರ್ತಿ, ಕಂಬಾರ, ಕಾರ್ನಾಡ, ಲಂಕೇಶ್, ಚಿತ್ತಾಲ, ತೇಜಸ್ವಿ, ಶಾಂತಿನಾಥ ದೇಸಾಯಿ, ರಾಮಚಂದ್ರ ಶರ್ಮ, ಕೆಎಸ್ನ, ರಾಮಾನುಜನ್, ತಿರುಮಲೇಶ್, ಚಂಪಾ ಸೇರಿದಂತೆ 18 ಪ್ರಸಿದ್ಧ ಲೇಖಕರ ಕೃತಿಗಳಲ್ಲಿನ ಜೀವನ ಮೌಲ್ಯಗಳು ಯಾವ ರೀತಿ ಅಭಿವ್ಯಕ್ತಿ ಪಡೆದಿವೆ ಎಂಬುದನ್ನು ವಿವರಿಸಲಾಗಿದೆ. ರಾಜಲಕ್ಷ್ಮಿ ಎನ್. ರಾವ್, ವೀಣಾ ಶಾಂತೇಶ್ವರ, ವೈದೇಹಿ, ವಿಜಯಾ ದಬ್ಬೆ ಮುಂತಾದ ಲೇಖಕಿಯರ ಕೃತಿಗಳಲ್ಲಿ ವ್ಯಕ್ತವಾಗಿರುವ ಜೀವನ ಮೌಲ್ಯಗಳನ್ನು ಸಮೀಕ್ಷೆ ಮಾಡಿರುವುದನ್ನು ಕಾಣಬಹುದು. ಕನ್ನಡದ ಸಾಂಸ್ಕೃತಿಕ ಸಂದರ್ಭದ ಅಗತ್ಯತೆಗೆ ಅನುಗುಣವಾಗಿ ಹುಟ್ಟಿಕೊಂಡ ನವ್ಯ ಸಾಹಿತ್ಯದಲ್ಲಿ ಜೀವನ ಮೌಲ್ಯಗಳು ಹೇಗೆ ವ್ಯಕ್ತವಾಗಿವೆ ಎಂಬುದನ್ನು ಪಾಶ್ಚಾತ್ಯ ಮತ್ತು ಭಾರತೀಯ ಚಿಂತಕರ ಚಿಂತನೆಗಳ ಹಿನ್ನೆಲೆಯಲ್ಲಿ ತೌಲನಿಕವಾಗಿ ವಿವರಿಸಲಾಗಿದೆ. ಸಾಹಿತ್ಯದಲ್ಲಿ ಶ್ರೇಷ್ಠತೆ ಎಂಬ ಪರಿಕಲ್ಪನೆಯ ಬಗ್ಗೆ ನಡೆದ ಚರ್ಚೆಯನ್ನು ಅದರ ಎಲ್ಲಾ ಆಯಾಮಗಳೊಂದಿಗೆ ವಿವರಣೆಗೆ ಒಳಪಡಿಸಿರುವುದು ಓದುಗರಿಗೆ ಉಪಯುಕ್ತ ಮಾಹಿತಿಯಾಗಿದೆ. ಮುಕ್ತಾಯ ಎಂಬ ಕೊನೆಯ ಭಾಗದಲ್ಲಿ ಮತ್ತೆ ಜೀವನ ಮೌಲ್ಯಗಳ ಬಗ್ಗೆ ನೈತಿಕತೆಯ ಬಗ್ಗೆ ಪಾಶ್ಚಾತ್ಯ ಮತ್ತು ಭಾರತೀಯ ವಿದ್ವಾಂಸರಾದ ಎಂ. ಹಿರಿಯಣ್ಣ, ಡಿವಿಜಿ, ರಿಚರ್ಡ್ಸ್, ಲಿವೀಸ್, ಟ್ರಿಲಿಂಗ್, ಏಲಿಯಟ್, ಪಣಿಕ್ಕರ್ ಮುಂತಾದವರ ವಿಚಾರಗಳನ್ನು ಸಂಗ್ರಹಿಸಿ ಕೊಡಲಾಗಿದೆ.
©2024 Book Brahma Private Limited.