’ಕಲಬುರ್ಗಿ ಕಂಪು-೨೦೧೦’ ಕಾರ್ಯಕ್ರಮದಲ್ಲಿ ಲಲಿತಕಲಾ ವಿಭಾಗದ ವತಿಯಿಂದ ಹೈದರಾಬಾದ-ಕರ್ನಾಟಕ ಕಲಾವಿದರ ಕಲಾಕೃತಿಗಳ ಪ್ರದರ್ಶನ, ಮಕ್ಕಳ ಚಿತ್ರಕಲಾ ಸ್ಫರ್ಧೆ, ಸ್ಥಳದಲ್ಲೇ ಭಾವಚಿತ್ರ ರಚಿಸಿಕೊಡುವ ಕಾರ್ಯಾಗಾರ, ಈ ಭಾಗದ ಚಿತ್ರ ಮತ್ತು ಶಿಲ್ಪಕಲಾವಿದರ ಶಿಬಿರ; ಹೀಗೆ ವಿವಿಧ ಕಲಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಅವು ಪ್ರಾಯೋಗಿಕ ನೆಲೆಯ ಚಟುವಟಿಕೆಗಳಾದರೆ, ಹೈದರಾಬಾದ-ಕರ್ನಾಟಕ ದೃಶ್ಯಕಲಾ ಪರಂಪರೆ ಎನ್ನುವ ಶೀರ್ಷಿಕೆಯಡಿ ಹೈದರಾಬಾದ-ಕರ್ನಾಟಕ ಪ್ರದೇಶದ ಪ್ರಾಚೀನ ಕಲೆಗಳೊಂದಿಗೆ ಪ್ರಾದೇಶಿಕ ಕಲೆಗಳು ಮತ್ತು ಆಧುನಿಕ, ಸಮಕಾಲೀನ ಕಲೆಗಳ ಸಮಗ್ರ ಮಾಹಿತಿ ಒಳಗೊಂಡ ವಿಚಾರಗಳನ್ನು ಕಲಾ ವಿದ್ವಾಂಸರುಗಳು ತಮ್ಮ ಪ್ರಬಂಧಗಳ ಮೂಲಕ ಮಂಡಿಸಿದರು.
ಪ್ರಾಗೈತಿಹಾಸ ಕಾಲದ ಚಿತ್ರಕಲೆಯೊಂದಿಗೆ ರಾಜಾಶ್ರಯ ವರೆಗಿನ ಪ್ರಬಂಧಗಳು ವಿವಿಧ ಆರಸು ಮನೆತನಗಳಲ್ಲಿನ ಚಿತ್ರಕಲೆಯ ಮಹತ್ತರ ಬೆಳವಣಿಗೆಯನ್ನು ಕಟ್ಟಿಕೊಡುತ್ತವೆ. ಬ್ರಿಟೀಷರ ಆಗಮನದೊಂದಿಗೆ ಕೇಂದ್ರೀಕೃತ ಆಡಳಿತ ಕೊನೆಗೊಂಡು ತಲೆಯೆತ್ತಿದ ಸಣ್ಣಪುಟ್ಟ ಸಂಸ್ಥಾನಗಳಲ್ಲಿ, ಈ ಭಾಗದ ಶ್ರೀಮಂತ ವ್ಯಕ್ತಿಗಳ, ಮಠಾಧೀಶರ, ವಿವಿಧ ಅಧಿಕಾರಿ ವರ್ಗದವರು ಆಶ್ರಯದಲ್ಲಿ ಬೆಳೆದುಬಂದ ಕಲಾ ಬೆಳವಣಿಗೆಗಳನ್ನೂ ಒಂದೆರಡು ಪ್ರಬಂಧಗಳು ನಿರೂಪಿಸುತ್ತವೆ. ಹಾಗೆಯೇ ಆಧುನಿಕ ಮತ್ತು ಸಮಕಾಲೀನ ಸಂದರ್ಭದ ಕಲಾ ವಿವರಣೆಗಳು, ಇವೆಲ್ಲದರ ಜೊತೆಗೆ ಈ ಭಾಗದ ಪ್ರಾದೇಶಿಕ ಕಲಾ ಪ್ರಕಾರಗಳಾದ ಬಿದರಿಕಲೆ, ಕಿನ್ನಾಳ ಕಲೆ, ಸುರಪುರ ಚಿತ್ರಕಲೆ, ಸಗರನಾಡಿನ ಕುದುರೆ ಶಿಲ್ಪಗಳು, ಕಲಾತ್ಮಕ ವಿನ್ಯಾಸದ ಸಗರನಾಡಿನ ಸೀರೆಗಳು, ಶೀಗೀ ಚಿತ್ರ ಸಂಪ್ರದಾಯ; ಮುಂತಾದ ಪ್ರಾದೇಶಿಕ ಕಲೆಗಳನ್ನು ಪರಿಚಯಿಸುವ ಬರಹಗಳು ಈ ಕೃತಿಯಲ್ಲಿವೆ. ಒಟ್ಟಾರೆ ಇದೊಂದು ಹೈದರಾಬಾದ-ಕರ್ನಾಟಕ ಭಾಗದ ಸಮಗ್ರ ಕಲಾ ವಿವರಣೆಗಳನ್ನು ಒಳಗೊಂಡ ಆಕರ ಗ್ರಂಥ.
ಬಹುಪಾಲು ಲೇಖಕರು ದೃಶ್ಯಕಲೆಗಳ ಪ್ರಾಯೋಗಿಕ ನೆಲೆಯಲ್ಲಿ ಕೃಷಿಮಾಡಿ ಸಾಕಷ್ಟು ಹೆಸರು ಮಾಡಿದವರು. ಹಾಗೆಯೇ ಕಲಾ ಬರಹಗಾರರಾಗಿ, ಕಲಾ ವಿಮರ್ಶಕರಾಗಿಯೂ ಗುರುತಿಸಿಕೊಂಡವರು. ಪುರಾತತ್ವ, ಇತಿಹಾಸ, ಸಾಹಿತ್ಯ, ಶಿಕ್ಷಣ ಮತ್ತು ದೃಶ್ಯಕಲೆ; ಹೀಗೆ ವಿವಿಧ ಕ್ಷೇತ್ರಗಳಲ್ಲಿ ತಜ್ಞರೆನಿಸಿದ ಲೇಖಕರ ಸಮ್ಮಿಲನ ಇಲ್ಲಿ ಕಂಡುಬರುತ್ತದೆ. ಒಂದರ್ಥದಲ್ಲಿ ಇಲ್ಲಿನ ಬರಹಗಳು ಬದುಕಿನ ಬಹುಮುಖಿ ನೆಲೆಗಳನ್ನು ಪ್ರತಿನಿಧಿಸುತ್ತವೆ.
©2024 Book Brahma Private Limited.