ಅಮೃತ ಚಿತ್ರಗಳು ಅಕ್ಷರ ರಕ್ಷಿದಿ ಅವರ ಕೃತಿಯಾಗಿದೆ. ಇನ್ನಿತರ ಕಲಾಪ್ರಕಾರಗಳಿಗೆ ಇರುವ ಒಂದು ಅನುಕೂಲ ಚಿತ್ರಕಲಾ ಪ್ರಕಾರಕ್ಕಿಲ್ಲ. ಅಂದರೆ ಇತರ ಎಲ್ಲಾ ಪ್ರಕಾರಗಳೂ ಏಕಸೂತ್ರದಲ್ಲಿ ಬೆಳೆಯುತ್ತಾ ಅನುಭವವನ್ನು ವಿಸ್ತರಿಸುವುದರಲ್ಲೋ ಅಥವಾ ಗಾಢವಾಗಿಸುವುದರಲ್ಲೋ ಮುಕ್ತಿ ಪಡೆಯುತ್ತವೆ. ಆದರೆ ಚಿತ್ರಕಾರನ ಕೃತಿ ರಚನೆಗೂ ಹಿಂದಿನ ಒತ್ತಡ, ಸ್ಫೂರ್ತಿ ಮತ್ತು ರಚನಾ ಸಂದರ್ಭದಲ್ಲಿ ಉಂಟಾಗುವ ಮಾರ್ಪಾಡುಗಳು ನೋಡುಗನ ಗ್ರಹಿಕೆಗೆ ದಕ್ಕುವುದಿಲ್ಲ. ಕಲಾಕೃತಿ ಮುಗಿದ ಮೇಲಷ್ಟೆ ರಸಿಕನೆದುರು ಧುತ್ತೆಂದು ಪ್ರತ್ಯಕ್ಷವಾಗುತ್ತದೆ. ಹಾಗಾಗಿ ರಸಿಕನ ಗ್ರಹಿಕೆಗೆ ನಿಲುಕಲಾರದ ಬಹಳಷ್ಟು ಅಂಶ ಉಳಿದಿರುತ್ತದೆ. ಈ ವಿಚಾರ ಬರೆಯುವ ಉದ್ದೇಶವೇನೆಂದರೆ ಈ ಚಿತ್ರಗುಚ್ಛದಲ್ಲಿರುವ ಎಲ್ಲಾ ಚಿತ್ರಗಳ ಹಿಂದಿರುವ ಮನಸ್ಸಿನ ಒತ್ತಡ, ತಹತಹ, ದುಗುಡ, ದ್ವಂದ್ವ ಅರ್ಥವಾಗಬೇಕಾದರೆ ಕಲಾವಿದೆ ಅಮೃತಾ ಬರೆದಿರುವ 'ಅಮೃತಯಾನ' ಓದಿದರೆ ಸಾಕು ಈ ಚಿತ್ರಗಳು ಇನ್ನಷ್ಟು ಆಪ್ತವಾಗಬಹುದೆಂಬ ಸದಾಶಯದಿಂದ ಈ ಮಾತುಗಳನ್ನು ಬರೆದಿರುತ್ತೇನೆ ಎಂದು ಚಂದ್ರನಾಥ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.