’ಸಮೂಹ ಸಂವಹನ ಸಂಶೋಧನೆ’ ಕೃತಿಯು ಸತೀಶ್ ಕುಮಾರ್ ಅಂಡಿಂಜೆ ಅವರ ಅಧ್ಯಯನ ಗ್ರಂಥವಾಗಿದೆ. ಸಮೂಹ ಸಂವಹನ ಸ್ನಾತಕೋತ್ತರ ಪದವಿ ಶಿಕ್ಷಣ ಮತ್ತು ಪಿ.ಹೆಚ್.ಡಿ. ಕೋರ್ಸ್ ಗಳಲ್ಲಿ ಸಮೂಹ ಮಾಧ್ಯಮ ಸಂಶೋಧನೆ ಅಥವಾ ಸಂವಹನ ಸಂಶೋಧನೆಯು ಒಂದು ಮುಖ್ಯ ಅಧ್ಯಯನದ ವಿಷಯವಾಗಿದೆ. ಆದರೆ ಕನ್ನಡ ಮಾಧ್ಯಮದಲ್ಲಿ ಸಂಶೋಧನೆ ಕೈಗೊಳ್ಳುವ ಸಂಶೋಧಕರು ಇಂಗ್ಲೀಷ್‌ನಲ್ಲಿ ಪ್ರಕಟವಾಗಿರುವ ಸಂವಹನ ಸಂಶೋಧನಾ ಕೃತಿಗಳನ್ನು ಹೆಚ್ಚಾಗಿ ಅವಲಂಬಿಸಿರುತ್ತಾರೆ. ಇನ್ನೂ ಕೆಲವರು ಕನ್ನಡದಲ್ಲಿ ಪ್ರಕಟವಾಗಿರುವ ಸಮಾಜ ವಿಜ್ಞಾನ ಸಂಶೋಧನಾ ಕೃತಿಗಳನ್ನು ಅವಲಂಬಿಸುವುದು ಅನಿವಾರ‍್ಯವಾಗಿರುತ್ತದೆ. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಮತ್ತು ಸಮಾಹ ಮಾಧ್ಯಮ ಸಂಶೋಧನಾ ಕ್ಷೇತ್ರಕ್ಕೆ ಬರುವಂತಹ ಯುವ ಸಂಶೋಧಕರಿಗೆ ಮಾರ್ಗದರ್ಶನ ನೀಡುವ ಉದ್ದೇಶದಿಂದ ಸಮೂಹ ಸಂವಹನ ಸಂಶೋಧನಾ ಕೃತಿಯನ್ನು ರಚಿಸಲಾಗಿದೆ ಎನ್ನುತ್ತಾರೆ ಲೇಖಕರು.
ಸಮೂಹ ಮಾಧ್ಯಮ ಸಂಶೋಧನೆಯು ದಿನದಿಂದ ದಿನಕ್ಕೆ ಮಹತ್ವ ಪಡೆಯುತ್ತಿದ್ದು, ಸಂಶೋಧಕರನ್ನು ಈ ಕ್ಷೇತ್ರದತ್ತ ಸೆಳೆಯುತ್ತಿದೆ. ಇಂದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾಧ್ಯಮಗಳ ಬೆಳವಣಿಗೆಯೊಂದಿಗೆ ಮಾಧ್ಯಮ ಶಿಕ್ಷಣವೂ ವಿಸ್ತಾರವಾಗುತ್ತಿರುವಂತೆ ನಮ್ಮ ರಾಜ್ಯದಲ್ಲೂ ವರ್ಷದಿಂದ ವರ್ಷಕ್ಕೆ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಷಯಕ್ಕೆ ಸಂಬಂಧಿಸಿದ ಶಿಕ್ಷಣ ವಿಸ್ತಾರವಾಗುತ್ತಿದೆ. ರಾಜ್ಯದ ಎಲ್ಲಾ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳಲ್ಲದೇ ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ನೀಡಲಾಗುತ್ತದೆ. ಮಾಧ್ಯಮ ಸಂಸ್ಥೆಗಳಲ್ಲಿ ನಿರಂತರವಾಗಿ ಸಂಶೋಧನೆಗಳು ನಡೆಯುತ್ತಿರುವುದಲ್ಲದೇ, ವಿಶ್ವವಿದ್ಯಾಲಯಗಳ ಪತ್ರಿಕೋದ್ಯಮ ವಿಭಾಗಗಳಲ್ಲಿ ಕೂಡಾ ಕಿರು ಸಂಶೋಧನೆ, ಬೃಹತ್ ಸಂಶೋಧನೆ, ಸಂಪ್ರಬಂಧ, ಎಂ.ಫಿಲ್., ಪಿ.ಹೆಚ್.ಡಿ. ಸಂಶೋಧನೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಂಶೋಧಕರಿಗೆ ನೆರವಾಗುವಂತಿದೆ ಈ ಕೃತಿ.
©2024 Book Brahma Private Limited.