ಪತ್ರಕರ್ತರಾಗಿ ನಾಗೇಶ ಹೆಗಡೆ ಅವರು ತಮ್ಮ ಅನುಭವಗಳನ್ನು ಸ್ಮರಿಸಿ, ದಾಖಲಿಸಿದ ಕೃತಿ-ನಡುಬಾಗದ ಪತ್ರಕರ್ತನ ನಡುರಾತ್ರಿಯ ಸ್ವಗತ. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದ ಪದವೀಧರರಾಗಿ ಅವರು ಪ್ರಜಾವಾಣಿಯಲ್ಲಿ ಸೇರಿ, ವಿಜ್ಞಾನ ಹಾಗೂ ಅಭಿವೃದ್ಧಿ ಬಾತ್ಮೀದಾರರಾಗಿದ್ದರು. ಬೇಡ್ತಿ ಚಳವಳಿ, ಕುದುರೆಮುಖ ಗಣಿಗಾರಿಕೆ, ರಾಣೆಬೆನ್ನೂರು ಬಳಿಯ ಹರಿಹರ ಪಾಲಿಫೈಬರ್ ಕಾರ್ಖಾನೆ, ಕೊಳ್ಳೆಗಾಲದ ಕಾಡು ಧ್ವಂಸ, ಕೈಗಾ ಉಳಿಸಿ ಹೋರಾಟ ಇತ್ಯಾದಿ ವಿದ್ಯಮಾನಗಳನ್ನು ವರದಿ ಮಾಡುತ್ತಿದ್ದ ಲೇಖಕರು, ತಮ್ಮ ವೃತ್ತಿ ಜೀವನದಲ್ಲಿ ಇತರರಿಂದ ಅಷ್ಟೇ ಅಲ್ಲ; ಸ್ವತಃ ಸಹೋದ್ಯೋಗಿ ಗೆಳೆಯರಿಂದಲೂ ಟೀಕೆ, ನಿಂದೆಗೆ, ಅಸಮಾಧಾನಕ್ಕೆ ಗುರಿಯಾದರು. ‘ಇಷ್ಟೊಂದು ತೀವ್ರವಾಗಿ ಬರೆಯಬಾರದು, ಸರ್ಕಾರವನ್ನು ನೇರವಾಗಿ ಟೀಕಿಸಬಾರದು. ಬರೀ ಸರ್ಕಾರ ವಿರೋಧಿ ಸುದ್ದಿಗಳನ್ನೇ ಮಾಡಬಾರದು’ ಇತ್ಯಾದಿ ವೃತ್ತಿ ಆಸಕ್ತಿಯನ್ನು ಕಮರಿಸುವಂತಹ ಸಲಹೆಗಳಿರುತ್ತಿದ್ದವು. ಆದರೆ, ಈ ಎಲ್ಲವೂ ಬರಹದ ಜೊತೆ ಆತ್ಮವಿಶ್ವಾಸವನ್ನೂ ಹೆಚ್ಚಿಸುತ್ತಿದ್ದವು ಎಂದು ಬರೆದ ಚಿಂತನೆಗಳು ಮಾತ್ರವಲ್ಲ; ಎಷ್ಟು ಜನ ಪತ್ರಕರ್ತರು ವೃತ್ತಿನಿಷ್ಠೆ ತೋರುತ್ತಾರೆ ? ಎಂಬ ಪ್ರಶ್ನೆಗಳು, ಅವುಗಳಿಗೆ ನೀಡುವ ಉದಾಹರಣೆಗಳು ಪತ್ರಕರ್ತನ ಸಾಮಾಜಿಕ ಹೊಣೆಗಾರಿಕೆ, ಕಚೇರಿಯಲ್ಲಿ ಹಾಗೂ ಹೊರಗಡೆ ಆತ ಎದುರಿಸುವ ಸವಾಲುಗಳು ಇತ್ಯಾದಿ ಚಿತ್ರಣ ನೀಡುವ ಕೃತಿ ಇದು.
©2024 Book Brahma Private Limited.