Breaking News ಮರ್ಮ, TRP ಮಂತ್ರ ಹಾಗೂ ಸುದ್ದಿಮನೆ ಸ್ವಾರಸ್ಯಗಳು ಎಂಬ ಶೀರ್ಷಿಕೆಯ ನನ್ನ ಪುಸ್ತಕದ ಮೊದಲ ಭಾಗದಲ್ಲಿ, TV ಪರದೆ ಮೇಲೆ ಒಂದೇ ಸಮನೆ ಅಪ್ಪಳಿಸುವ ಬ್ರೇಕಿಂಗ್ ನ್ಯೂಸ್ ಮಹತ್ವದ ಬಗ್ಗೆ, ಬಿಟ್ಟೂ ಬಿಡದೆ ಬ್ರೇಕಿಂಗ್ ನ್ಯೂಸ್ ಹಾಕುತ್ತಲೇ ಇರುವುದರ ಹಿಂದಿನ ಕಾರಣಗಳ ಬಗ್ಗೆ ವಿಶ್ಲೇಷಣೆ.ಜೊತೆಗೆ, ಇಂಗ್ಲಿಷ್ ನಿಂದ ಕನ್ನಡಕ್ಕೆ ಸುದ್ದಿಯನ್ನು ಅನುವಾದಿಸುವ ವೇಳೆ ಆಗುವ ಅಚಾತುರ್ಯಗಳ ಬಗ್ಗೆ ದೃಷ್ಟಾಂತ ಸಹಿತ ವಿವರ. ಎರಡನೆಯ ಭಾಗದಲ್ಲಿ, TV ನೋಡುವ ಎಲ್ಲರ ಬಾಯಲ್ಲೂ ಇತ್ತೀಚಿನ ದಿನಗಳಲ್ಲಿ ಕೇಳಿಬರುವ TRP ಅಂದರೆ ಏನು? TRPಯ ಮಹತ್ವವೇನು? TRP, TV ಚಾನಲ್ ಮತ್ತು ಜಾಹೀರಾತುಗಳ ನಡುವಿನ ಸಂಬಂಧ ಎಂಥದ್ದು? TRP ಹೇಗೆ? ಯಾರು? ಕಂಡುಹಿಡಿಯುತ್ತಾರೆ. ಕಡಿಮೆ TRP ಯಿಂದ ನಷ್ಟವೇನು? ಹೆಚ್ಚಿನ TRPಯಿಂದ ಲಾಭವೇನು? TRP ಹೆಚ್ಚಿಸಿಕೊಳ್ಳಲು TV ಚಾನಲ್ ನವರು ಏನೆಲ್ಲ ಮಾಡುತ್ತಾರೆ? ಇತ್ಯಾದಿ ಎಲ್ಲ ವಿಚಾರಗಳ ಬಗ್ಗೆ ಮಾಹಿತಿಯಿದೆ. ಪುಸ್ತಕದ ಅಂತಿಮ ಭಾಗದಲ್ಲಿ, ದಿನದ 24 ಗಂಟೆಗಳ ಕಾಲವೂ ಕಾರ್ಯನಿರ್ವಹಿಸುವ ನ್ಯೂಸ್ ಚಾನಲ್ಲಿನ NEWS Room ಅಥವ ಸುದ್ದಿಮನೆ ಹೇಗಿರುತ್ತದೆ? ಅಲ್ಲಿನ ವಾತಾವರಣ ಹೇಗಿರುತ್ತದೆ? Night Shift ಕತೆ ಏನು? ಸುದ್ದಿಮನೆಯಲ್ಲಿ ಯಾವೆಲ್ಲ ರೀತಿಯ ಸ್ವಾರಸ್ಯಗಳು ನಡೆಯುತ್ತವೆ? ಸುದ್ದಿನಿರೂಪಕರನ್ನು ಹೇಗೆ ತಯಾರು ಮಾಡುತ್ತಾರೆ? ಸುದ್ದಿವಾಹಿನಿಗಳಲ್ಲಿ ಬಳಸುವ ಭಾಷೆ ಮತ್ತು ಉಚ್ಚಾರಣೆ ಹೇಗಿರುತ್ತದೆ? ಇತ್ಯಾದಿ ವಿಚಾರಗಳನ್ನು, ವಾಸ್ತವ ಘಟನೆಗಳು ಮತ್ತು ವಿನೋದದ ಪ್ರಸಂಗಗಳ ಜೊತೆಗೆ ಓದುಗರ ಮುಂದಿಡುವ ಪ್ರಯತ್ನ ಮಾಡಲಾಗಿದೆ.
ಸಚಿವರು ಪ್ರಯಾಣಿಸುತ್ತಿದ್ದ ‘ಹಂದಿಗೆ’ ಕಾರು ಡಿಕ್ಕಿ ಸಣ್ಣಪುಟ್ಟ ಗಾಯಗಳೊಂದಿಗೆ ಸಚಿವರು ಪಾರು ಟಿವಿಯಲ್ಲಿ ಬಂದ ಈ Breaking ಸುದ್ದಿಯ ಮೊದಲ ಸಾಲನ್ನು ಸರಿಯಾಗಿ ಗಮನವಿಟ್ಟು ಓದಿ. ಸಚಿವರು ಪ್ರಯಾಣಿಸುತ್ತಿದ್ದ ‘ಹಂದಿಗೆ’ ಕಾರು ಡಿಕ್ಕಿ, ಹ್ಹ …ಹ್ಹಾ ಎಂಥ ವಿನೋದ. ನಮಗೆ ನಂದಿ ವಾಹನ ಶಿವ ಗೊತ್ತು, ಮೂಷಿಕ ವಾಹನ ಗಣಪನೂ ಗೊತ್ತು, ಆದರೆ ಈ ‘ಹಂದಿ ವಾಹನ’ ಸಚಿವ ಯಾರಪ್ಪಾ? ಟಿವಿ ಪರದೆ ಮೇಲೆ ಬಂದ ಈ ಸಾಲುಗಳು, ನೋಡುಗರಿಗೆ ತಮಾಷೆ ಅನ್ನಿಸುತ್ತವೆ. ಆದರೆ, ಆ ಟಿವಿ ಚಾನಲ್ಲಿನ ಮಾನ ಹರಾಜಿಗಿಟ್ಟಂತಾಗಿರುತ್ತದೆ. ಈ ‘ಅಕ್ಷರಗಳ ಅಚಾತುರ್ಯವನ್ನು’ ಒಂದೇ ನಿಮಿಷದಲ್ಲಿ ಲಕ್ಷಾಂತರ ಜನ ನೋಡಿರುತ್ತಾರೆ. ಅವರಲ್ಲಿ ಸಾವಿರಾರು ವೀಕ್ಷಕರು,ಈ ತಪ್ಪನ್ನು ಸರಿಪಡಿಸಿಕೊಳ್ಳುವಂತೆ ತಿಳಿಸಲು, News Channel ಕಚೇರಿಗೆ ಫೋನಾಯಿಸುತ್ತಾರೆ. ಇಂಥ ‘ಭಾರಿ ತಪ್ಪಿನ’ ಸಂದರ್ಭದಲ್ಲಿ, ಒಂದೇ ಸಮನೆ ಹತ್ತಾರು ಜನರು ‘ಸುದ್ದಿತಪ್ಪು ಹೋಗುತ್ತಿದೆ ಸರಿಪಡಿಸಿ’ಎಂದು ಬ್ರೇಕಿಂಗ್ ವಿಭಾಗದವರ ತಲೆಮೇಲೆ ಮೊಟಕುತ್ತಾರೆ. ಮರುಕ್ಷಣವೇ ಆ ತಪ್ಪನ್ನು ಸರಿಪಡಿಸಲಾಗಿದ್ದರೂ ‘ತಪ್ಪು… ಹೋಗುತ್ತಿದೆ, ತಪ್ಪು ಹಾಕಿದ್ದೀರಿ’ ಎನ್ನುವ ಮಾತು ಮಾತ್ರ, ‘ಮಳೆ ನಿಂತರೂ ಮರದ ಮೇಲಿನ ಹನಿ ನಿಲ್ಲುವುದಿಲ್ಲ’ಎಂಬಂತೆ ಬಹಳಷ್ಟು ಸಮಯ ನಿಲ್ಲುವುದೇ ಇಲ್ಲ. ಸುದ್ದಿಯನ್ನು ಶೀಘ್ರವಾಗಿ ಹಾಕುವ ಧಾವಂತದಲ್ಲಿ, ಒಂದೇ ಒಂದು ಕ್ಷಣ ಏಕಾಗ್ರತೆ ತಪ್ಪಿ, ಸಚಿವರು ಪ್ರಯಾಣಿಸುತ್ತಿದ್ದ ‘ಕಾರಿಗೆ’ ಹಂದಿ ಡಿಕ್ಕಿ ಎಂದು ಬರೆಯುವ ಬದಲು, ಸಚಿವರು ಪ್ರಯಾಣಿಸುತ್ತಿದ್ದ ‘ಹಂದಿಗೆ’ ಕಾರು ಡಿಕ್ಕಿ ಎಂಬ ಪದಗಳನ್ನು ಟೈಪಿಸಿ, ಅಚಾತುರ್ಯಕ್ಕೆ ಕಾರಣನಾದವನು ಮತ್ತು ಒಟ್ಟಾರೆ ಬ್ರೇಕಿಂಗ್ ನ್ಯೂಸ್ ವಿಭಾಗದ ಎಲ್ಲರ ಮುಖ, ಇಂಗು ತಿಂದ ಮಂಗನಂತಾಗಿರುತ್ತದೆ. ಅತಿಯಾದ ಒತ್ತಡದಿಂದ ಸೃಷ್ಟಿಯಾದ ಈ ತಪ್ಪು,ವೀಕ್ಷಕರಿಗೆ ಮನರಂಜನೆ ಕೊಟ್ಟರೆ, ಆ ತಪ್ಪಿಗೆ ಕಾರಣನಾದವನಿಗೆ ಮಂಗಳಾರತಿ! ಆಗಿರುತ್ತದೆ. ಅವನಿಗಂತೂ, ‘ನೆಲ ಇಲ್ಲಿಯೇ ಬಾಯ್ಬಿಟ್ಟು ತನ್ನನ್ನು ನುಂಗಿಕೊಳ್ಳಬಾರದೇ’ಎನ್ನುವಂತಾಗಿರುತ್ತದೆ. ಇಂಥ ಯಡವಟ್ಟಿಗೆ ಕಾರಣನಾದ ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿದರೂ ಆಶ್ಚರ್ಯವೇನೂ ಇಲ್ಲ. ಒಬ್ಬ ಸಹೋದ್ಯೋಗಿ, ಪ್ರತಿಬಾರಿ ‘ನವ’ ದೆಹಲಿ ಎಂದು ಬರೆಯುವಲ್ಲಿ ‘ನವೆ’ ದೆಹಲಿ ಎಂದೇ ಬರೆಯುತ್ತಿದ್ದ. ಯಾಕಾಗಿ ಅವನಿಗೆ ‘ನವೆ’ ಬರುತ್ತಿತ್ತೋ ಗೊತ್ತಿಲ್ಲ. ‘ರಾಷ್ಟ್ರಪಿತ’ ಮಹಾತ್ಮ ಗಾಂಧಿ ಎಂದು ಬರೆಯುವ ಬದಲಿಗೆ ‘ರಾಷ್ಟ್ರಪತಿ’ ಮಹಾತ್ಮ ಗಾಂಧಿ ಎಂದು ಬರೆದಿದ್ದನ್ನೂ ನೋಡಿದ್ದೇನೆ. ಹೀಗಾಗಿ, ಬ್ರೇಕಿಂಗ್ ನ್ಯೂಸ್ ವಿಭಾಗದಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿ, ಎಂತಹದ್ದೇ ಒತ್ತಡದ ಸನ್ನಿವೇಶದಲ್ಲೂ ‘ಸಂತೆಯೊಳಗೊಬ್ಬಸಂತ’ಎನ್ನುವಷ್ಟರ ಮಟ್ಟಿಗೆ ಸಮಚಿತ್ತ ಕಾಯ್ದುಕೊಂಡು ಕೆಲಸ ಮಾಡಬೇಕು.
©2024 Book Brahma Private Limited.