ಲೇಖಕ ಸತೀಶ್ ಕುಮಾರ್ ಅಂಡಿಂಜೆ ಅವರು ಕಳೆದ 22 ವರ್ಷಗಳಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದ ಅಧ್ಯಾಪಕರಾಗಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಸಿ.ಜೆ. ಪದವೀಧರರು. ಕುವೆಂಪು ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪದವೀಧರರು. . ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥ ಕಾಲೇಜು ಹಾಗೂ ಮಣಿಪಾಲದ ಎಂ.ಪಿ.ಎ. ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದು, ಕುವೆಂಪು ವಿವಿ, ಕನ್ನಡ ವಿವಿ, ಮಂಗಳೂರು ವಿವಿ ಮತ್ತು ಕರ್ನಾಟಕ ರಾಜ್ಯ ಮುಕ್ತ ವಿವಿಗಳ ಪತ್ರಿಕೋದ್ಯಮ ಕೋರ್ಸ್ ಗಳ ಸ್ವಯಂ ಕಲಿಕಾ ಪಠ್ಯಗಳನ್ನು ರಚಿಸಿರುತ್ತಾರೆ. .
ಹವ್ಯಾಸಿ ಬರಹಗಾರರಾಗಿದ್ದು, 250ಕ್ಕೂ ಹೆಚ್ಚು ಲೇಖನ, ನುಡಿಚಿತ್ರ, ಸಣ್ಣಕಥೆಗಳು ಕನ್ನಡ, ಇಂಗ್ಲಿಚ್ ಮತ್ತು ತುಳು ಭಾಷೆಗಳಲ್ಲಿ 30ಕ್ಕೂ ಹೆಚ್ಚು ಪತ್ರಿಕೆಗಳು ಮತ್ತು ನಿಯತಕಾಲಿಕಗಳಲ್ಲಿ ಪ್ರಕಟಗೊಂಡಿವೆ. ಇವರ ಭಾಷಣ ಹಾಗೂ ಸಣ್ಣ ಕಥೆಗಳು ಮಂಗಳೂರು ಮತ್ತು ಭದ್ರಾವತಿ ಆಕಾಶವಾಣಿ ಕೇಂದ್ರಗಳಿಂದ ಪ್ರಸಾರಗೊಂಡಿವೆ. ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿರುತ್ತಾರೆ. ಸಂಶೋಧನಾ ವಿದ್ಯಾರ್ಥಿಗಳೀಗೂ ಇವರ ಮಾರ್ಗದರ್ಶಕರು. 60ಕ್ಕೂ ಹೆಚ್ಚು ಸಂಶೋಧನಾ ಲೇಖನಗಳು ಸಂಶೋಧನಾ ನಿಯತಕಾಲಿಕೆಗಳು ಮತ್ತು ವಿಚಾರ ಸಂಕಿರಣದ ಸಂಪಾದಿತ ಕೃತಿಗಳಲ್ಲಿ ಪ್ರಕಟಗೊಂಡಿವೆ. ಇವರ ಪಿ.ಹೆಚ್.ಡಿ ಸಂಶೋಧನಾ ಮಹಾಪ್ರಬಂಧವು ಜರ್ಮನಿಯ ಲ್ಯಾಪ್ ಸಂಸ್ಥೆಯಿಂದ ಪ್ರಕಟಗೊಂಡಿದೆ. ಪ್ರಸ್ತುತ ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಸಹ ಪ್ರಾಧ್ಯಾಪಕ ಹಾಗೂ ಅಧ್ಯಕ್ಷರಾಗಿದ್ದಾರೆ.
ಕೃತಿಗಳು: ’ಭಾರತೀಯ ಮಾಧ್ಯಮ ಕಾನೂನುಗಳು ಮತ್ತು ನೀತಿ ಸಂಹಿತೆ’, ’ಮಾಧ್ಯಮ ಲೋಕ’.