’ಮಾಧ್ಯಮ ಸಂಕಥನ’ ಹೆಚ್. ಎಸ್. ಈಶ್ವರ ಅವರ ಸಮಕಾಲೀನ ಮಾಧ್ಯಮ ಕ್ಷೇತ್ರದ ಬಗ್ಗೆ ಜಿಜ್ಞಾಸೆ ನಡೆಸುವ ಪುಸ್ತಕವಾಗಿದೆ. ಹೆಚ್.ಎಸ್.(ಹಾರೋಗದ್ದೆ ಶ್ರೀನಿವಾಸ) ಈಶ್ವರ ಅವರು ಈ ಕೃತಿಯಲ್ಲಿ ಮಾಧ್ಯಮ ಎದುರಿಸುತ್ತಿರುವ ಬಿಕ್ಕಟ್ಟುಗಳನ್ನು ಕುರಿತು ಜಿಜ್ಞಾಸೆ ನಡೆಸಿದ್ದಾರೆ. ಮೈಸೂರು-ಬೆಂಗಳೂರು ಮತ್ತು ಮಣಿಪಾಲ ವಿಶ್ವವಿದ್ಯಾಲಯಗಳಲ್ಲಿ ಮೂರುವರೆ ದಶಕಗಳ ಕಾಲ ಮನಃಶಾಸ ಮತ್ತು ಸಂವಹನ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಪುಸ್ತಕದಲ್ಲಿ ಮೂರು ಉಪನ್ಯಾಸಗಳೂ ಸೇರಿದಂತೆ ಒಟ್ಟು 12 ಬರಹಗಳಿವೆ. ಕೊನೆಯ ಮೂರು ಭಾಷಣಗಳು ಈ ಪುಸ್ತಕದಲ್ಲಿ ಅನುಬಂಧ'ಗಳಾಗಿ ಸೇರಿಕೊಂಡಿವೆ. 'ದಿ ಬ್ರಾಸ್ ಚೆಕ್' ಪುಸ್ತಕವನ್ನು ಪರಿಚಯಿಸುವ ಲೇಖನವು ಅಮೆರಿಕಾದಲ್ಲಿ ಮಾಧ್ಯಮವು ಉದ್ದಿಮೆದಾರರ ಹಿತಾಸಕ್ತಿ ರಕ್ಷಿಸುವ ಉದ್ದೇಶದ ಸುದ್ದಿ ಸೃಷ್ಟಿಸುವ ಹಾಗೂ ಪ್ರಚಾರ ಮಾಡಲು ಆರಂಭಿಸಿತು ಎನ್ನುವ ಮಾಹಿತಿ ನೀಡುತ್ತಲೇ ಇಂದಿನ ಮಾಧ್ಯಮ ಕ್ಷೇತ್ರವು ಎದುರಿಸುತ್ತಿರುವ ಬಿಕ್ಕಟ್ಟಿನ ಆರಂಭದ ಬೀಜಗಳನ್ನು ಗುರುತಿಸುತ್ತದೆ. 'ದಿ ಬಾಸ್ ಚೆಕ್' ನೂರು ತುಂಬಿದ ನೆಪದಲ್ಲಿ ಬರೆದ ಈ ಲೇಖನದಲ್ಲಿ ಪತ್ರಿಕೆಗಳ ಪ್ರಸಾರ ಸಂಖ್ಯೆ ಯನ್ನು ಹೆಚ್ಚಿಸಲು ಭಾವೋದ್ರೇಕಗೊಳಿಸುವ ಸುದ್ದಿಗಳ ಪ್ರಕಟಣೆಗೆ ಕೈ ಹಾಕುವ ಮೂಲಕ ಸುದ್ದಿಯು ಮಾರಾಟದ ಸರಕಾಗಿಸಿದ್ದರಿಂದ ಸಾಮಾಜಿಕ ಜವಾಬ್ದಾರಿ ಮತ್ತು ವೃತ್ತಿಧರ್ಮದ ಮಾತುಗಳು ಅರ್ಥ ಕಳೆದುಕೊಂಡವು ಎಂಬ ವಿವರಣೆಯನ್ನು ಲೇಖಕರು ನೀಡುತ್ತಾರೆ.
©2024 Book Brahma Private Limited.