ಹೋರಾಟ ಎಂಬ ಪದ ಅರ್ಥಕಳೆದುಕೊಳ್ಳುತ್ತಿರುವ ಅಥವಾ ತಿರುಚಲ್ಪಡುತ್ತಿರುವ ಈ ದಿನಗಳಲ್ಲಿ ಹೋರಾಟಗಾರರ ಕಣ್ಣಲ್ಲಿ, ಕರಾವಳಿ ಭಾಗದ ಸಾಮಾಜಿಕ ಮತ್ತು ಅದನ್ನು ಸುತ್ತಿಕೊಂಡ ರಾಜಕೀಯ ಮಗ್ಗುಲುಗಳನ್ನು ಈ ಕೃತಿ ಶೋಧಿಸುತ್ತದೆ. ಇಲ್ಲಿ ಕೊರಗರ ಬದುಕು, ಸಂಘಟನೆ ಹೋರಾಟಗಳ ಬಗ್ಗೆ ದೇವದಾಸ್ ಶೆಟ್ಟಿ, ಗೋಕುಲದಾಸ್ ಮತ್ತು ಬಾಲರಾಜ್ ತೆರದಿಡುತ್ತಾರೆ. ಸಮುದ್ರದಿಂದ ಆವೃತವಾಗಿರುವ ಕರಾವಳಿಯ ಸೂಕ್ಷ್ಮ ಪರಿಸರವನ್ನು ಸುತ್ತಿಕೊಂಡಿರುವ ರಾಜಕೀಯ ಮತ್ತು ಅಭಿವೃದ್ಧಿಯ ಜೊತೆಗಿನ ಅದರ ಬಿಕ್ಕಟ್ಟುಗಳನ್ನು ವಿಠಲರಾವ್ ಮತ್ತು ಸೆಲಿನ್ ಅರಾನ್ಹಾ ಅವರು ತರದಿಡುತ್ತಾರೆ. ಕುಡುಬಿಯರ ಬದುಕು, ಹೋರಾಟಗಳನ್ನು ಜನಾರ್ದನಗೌಡ ಮತ್ತು ನಾರಾಯಣ ಗೌಡ ಹಂಚಿಕೊಂಡರೆ, ಮೀನುಗಾರರ ಹೋರಾಟ, ಹೆಂಚು ಮತ್ತು ಬೀಡಿಕಾರ್ಮಿಕರ ಹೋರಾಟಗಳನ್ನು ಬಿ. ಮಾಧವ, ಶಿವಪ್ರಸಾದ್ ಪಚ್ಚನಾಡಿ, ಕೆ. ಆರ್. ಶ್ರೀಯಾನ್ ವಿವರಿಸುತ್ತಾರೆ. ಎಚ್.ಐವಿ ಪೀಡಿತರ ಸಂಕಟಗಳು ಮತ್ತು ಅವರ ಬದುಕುವ ಹಕ್ಕಿನ ಕುರಿತ ಹೋರಾಟಗಳನ್ನು, ಸಮಸ್ಯೆಗಳನ್ನು ಶಾಂತಿನೊರೋನ್ಹಾ, ವೀಣಾ ಶೆಟ್ಟಿ ವಿಶ್ಲೇಷಿಸುತ್ತಾರೆ. ಹಾಗೆಯೇ ತರಹೊರ ಕಾರ್ಮಿಕರ ಬದುಕು, ಸಂಘರ್ಷಗಳನ್ನು ರೀಟಾ ನೊರೋನ್ಹಾ ಅವರು ತೆರೆದಿಡುತ್ತಾರೆ. ಹೇಗೆ ಹಂತಹಂತವಾಗಿ ತಳಸ್ಥರದ ಜನರ ಹೋರಾಟಗಳು ನೆಲೆಕಳೆದುಕೊಳ್ಳುತ್ತಿವೆ, ಕಾರ್ಮಿಕರ ಹಕ್ಕುಗಳ ದಮನಗೊಳ್ಳುತ್ತಿರುವ ದಿನಗಳಲ್ಲಿ ಕಾರ್ಮಿಕ ಸಂಘಟನೆಗಳನ್ನು ದುರ್ಬಲಗೊಳಿಸುವಲ್ಲಿ ರಾಜಕೀಯ ಶಕ್ತಿಗಳು ಯಶಸ್ವಿಯಾಗುತ್ತಿರುವುದರ ದುರಂತಗಳನ್ನು ಈ ಕೃತಿ ತೆರೆದಿಡುತ್ತವೆ.
©2024 Book Brahma Private Limited.